Fact Check: ಗುಜರಾತಿನಲ್ಲಿ ರೈಲ್ವೆ ಹಳಿ ತಪ್ಪಿಸಲು ಪ್ರಯತ್ನಿಸಿದ ನೌಕರರು ಹಿಂದೂಗಳೇ ಹೊರತು ಮುಸ್ಲಿಮರಲ್ಲ

ಗುಜರಾತ್‌

ಇತ್ತೀಚೆಗೆ ಗುಜರಾತ್‌ನ ಸೂರತ್‌ನಲ್ಲಿ ಸೆಪ್ಟೆಂಬರ್ 21 ರಂದು ಕಿಮ್ ರೈಲು ನಿಲ್ದಾಣದ ಬಳಿ ರೈಲು ಹಳಿತಪ್ಪಿಸಲು ಸಂಚು ರೂಪಿಸಿದ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ಮುಸ್ಲಿಮರು ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗುತ್ತಿದೆ.

ಈ ಕುರಿತ ಮೂವರು ಅಪರಾಧಿಗಳನ್ನು ಪೋಲಿಸರು ಬಂಧಿಸಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ” ಕರ್ನಾಟಕಕ್ಕೆ ಬರುತ್ತಿದ್ದ ಸೇನಾ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ್ದ ಮುಸ್ಲಿಂ ರೈಲ್ವೆ ನೌಕರರ ಬಂಧನ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮತ್ತು ಆರೋಪಿಗಳನ್ನು ಮಹಮ್ಮದ್ ಸಬೀರ್ ಮತ್ತು ಇತರ ಇಬ್ಬರು ಸಹಚರರು ಎನ್ನಲಾಗುತ್ತಿದೆ.

ಈ ವೀಡಿಯೋವನ್ನು ಅನೇಕರು ಹಂಚಿಕೊಂಡಿದ್ದು ಮುಖ್ಯವಾಗಿ ಬಿಜೆಪಿ ಬೆಂಬಲಿಗರು ಈ ವೀಡಿಯೋವನ್ನು ಹೆಚ್ಚು ಹಂಚಿಕೊಂಡು ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ಈ ಮಾಹಿತಿ ಸುಳ್ಳಾಗಿದ್ದು ಗುಜರಾತ್ ರೈಲ್ವೆ ದುರಂತಕ್ಕೆ ಸಂಚು ರೂಪಿಸಿದ ಆರೋಪಿಗಳು  ಹಿಂದೂಗಳೇ ಹೊರತು ಮುಸ್ಲಿಂ ಸಮುದಾಯದವರಲ್ಲ. ನಾವು ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಹುಡುಕಾಡಿದಾಗ ಅನೇಕ ಪತ್ರಿಕಾ ವರದಿಗಳು ಲಭ್ಯವಾಗಿದ್ದು, ಲೋಕಸತ್ತ ಎಂಬ ಹಿಂದಿ ಪತ್ರಿಕೆಯೊಂದರಲ್ಲಿ ” ಬಂಧಿತರನ್ನು ಸುಭಾಷ್ ಪೊದ್ದಾರ್ (39), ಮನೀಶ್ ಮಿಸ್ತ್ರಿ (28) ಮತ್ತು ಶುಭಂ ಜೈಸ್ವಾಲ್ (26) ಎಂದು ಗುರುತಿಸಲಾಗಿದೆ ” ಎಂದು ವರದಿಯಲ್ಲಿ ತಿಳಿಸಿದೆ. (ಓದುಗರಿಗೆ ಅರ್ಥವಾಗಲಿ ಎಂದು ಹಿಂದಿಯಿಂದ ಕನ್ನಡಕ್ಕೆ ವರದಿಯ ಭಾಷೆ ಬದಲಾಯಿಸಲಾಗಿದೆ)

ರಿಪಬ್ಲಿಕ್ ಎಂಬ ಸುದ್ದಿ ಮಾಧ್ಯಮದವರು ಸಹ ಈ ವರದಿಯನ್ನು ಪ್ರಕಟಿಸಿದ್ದು “ಆರೋಪಿಗಳಾದ ಸುಭಾಷ್ ಪೊದ್ದಾರ್ (39), ಮನೀಶ್ ಮಿಸ್ತ್ರಿ (28), ಮತ್ತು ಶುಭಂ ಜೈಸ್ವಾಲ್ (26) ರೈಲ್ವೆ ನಿರ್ವಹಣಾ ವಿಭಾಗದಲ್ಲಿ ಟ್ರ್ಯಾಕ್‌ಮೆನ್‌ಗಳಾಗಿದ್ದಾರೆ ಎಂದು ಸೂರತ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹೋತೇಶ್ ಜೋಯ್ಸರ್ ತಿಳಿಸಿದ್ದಾರೆ. ಅವರ ಆಪಾದಿತ ಉದ್ದೇಶವು ಪ್ರಶಂಸೆ, ಪುರಸ್ಕಾರಗಳು ಮತ್ತು ದಿನದ ರಜೆಯನ್ನು ಪಡೆಯುವುದಾಗಿತ್ತು.” ಎಂದು ವರದಿಯಲ್ಲಿ ತಿಳಿಸಿದ್ದಾರೆ. 

ಇನ್ನೂ ವೈರಲ್ ವೀಡಿಯೋ ಎಎನ್‌ಐ ವರದಿ ತುಣುಕಾಗಿದ್ದು ಈ ವರದಿಯಲ್ಲಿ ಸೂರತ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹೋತೇಶ್ ಜೋಯ್ಸರ್ ಮಾತನಾಡಿರುವ ವೀಡಿಯೋವನ್ನು ಎಎನ್‌ಐ ಹಂಚಿಕೊಂಡಿದೆ. ಎಸ್‌ಪಿಯವರು ಸಹ ಆರೋಪಿಗಳು ಹಿಂದೂ ಹೆಸರುಗಳನ್ನು ಹೇಳುವುದನ್ನು ನೀವು ಈ ಕೆಳಗೆ ನೋಡಬಹುದು. 

ಆದ್ದರಿಂದ ಗುಜರಾತ್‌ನ ಸೂರತ್‌ನಲ್ಲಿ ರೈಲ್ವೆ ಅಪಘಾತಕ್ಕೆ ಪ್ರಯತ್ನಿಸಿದ ಆರೋಪಿಗಳು ಹಿಂದೂಗಳೇ ಹೊರತು ಮುಸ್ಲಿಂ ಸಮುದಾಯದ ನೌಕರರಲ್ಲ. ಅನಾವಶ್ಯಕವಾಗಿ ಮುಸ್ಲಿಂ ದ್ವೇಷವನ್ನು ಸಮಾಜದಲ್ಲಿ ಹೆಚ್ಚಿಸುವ ಸಲಲುವಾಗಿ ಕೆಲವರು ಈ ರೀತಿ ಕೋಮು ಆಯಾಮದಲ್ಲಿ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿ: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *