Fact Check: ಬಾಂಗ್ಲಾದೇಶದ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿ ಮತ್ತು SC ಮೀಸಲಾತಿಯನ್ನು ಕರ್ನಾಟಕ ಸರ್ಕಾರ ನೀಡಲು ಮುಂದಾಗಿಲ್ಲ

ಬಾಂಗ್ಲಾದೇಶ

ಬಾಂಗ್ಲಾ ವಲಸಿಗರಿಗೆ ತಲಾ 5 ಎಕರೆ ಭೂಮಿ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂಬ ಹೇಳಿಕೆಯಿರುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ವಾಟ್ಸಾಪ್‌ ನಲ್ಲಿ ಕಂಡುಬಂದ ಪ್ರತಿಪಾದನೆಯಲ್ಲಿ, “ಬಾಂಗ್ಲಾದೇಶದ ಒಬ್ಬೊಬ್ಬ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿಯನ್ನು ಕೊಡುತ್ತಿರುವ ರಾಜ್ಯ ಸರ್ಕಾರ”..? ಹಿಂದೂಗಳೇ ಎತ್ತ ಸಾಗುತ್ತಿದೆ ಕರ್ನಾಟಕ.?…” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

Fact Check: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?

ಫ್ಯಾಕ್ಟ್ ಚೆಕ್:

ಸತ್ಯಶೋಧನೆಗಾಗಿ ನಾವು ವಾಟ್ಸಾಪ್‌ ಫಾರ್ವರ್ಡ್ ಮೆಸೇಜ್‌ನಲ್ಲಿರುವ ಇಂಗ್ಲಿಷ್ ವರದಿಯನ್ನು ಗಮನಿಸಿದ್ದೇವೆ. ಇದು ಟೈಮ್ಸ್ ಆಫ್‌ ಇಂಡಿಯಾದ ವರದಿ ಎಂಬುದನ್ನು ಗುರುತಿಸಿದ್ದೇವೆ. ಈ ನಿರ್ದಿಷ್ಟ ವರದಿಯನ್ನು ಹುಡುಕಲು ವರದಿಯ ಫೋಟೋದ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ.

ಈ ವೇಳೆ ಟೈಮ್ಸ್ ಆಫ್‌ ಇಂಡಿಯಾ ವರದಿ ಲಭ್ಯವಾಗಿದ್ದು, ಮೇ 18, 2017ರ ಟೈಮ್ಸ್‌ ಆಫ್‌ ಇಂಡಿಯಾದ “Govt mulls SC tag for Bangladeshi migrants settled in Karnataka” ಶೀರ್ಷಿಕೆಯ ವರದಿಯಲ್ಲಿ, ಬಾಂಗ್ಲಾದೇಶದ ಮೂರು ಸಮುದಾಯಗಳಾದ ನಾಮ್ ಶೂದ್ರ, ಪೌಂಡ್ರ ಮತ್ತು ರಾಜ್ ಬನ್ಷಿ ಗಳನ್ನು ಪರಿಶಿಷ್ಟ ಜಾತಿಯಡಿ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.” ಎಂದಿದೆ. ಈ ವರದಿಯನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದಾಗ, ವೈರಲ್‌ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ಅಂಶಗಳು ಈ ವರದಿಯಲ್ಲಿ ಕಂಡುಬಂದಿದೆ.

Fact Check: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?

ಇದೇ ವರದಿಯಲ್ಲಿ 1971ರ ಯುದ್ಧದ ನಂತರ ನಿರಾಶ್ರಿತರಾಗಿ ಬಂದ ಈ ಸಮುದಾಯದ ಬಗ್ಗೆ ಇದೇ ಮೊದಲ ಬಾರಿಗೆ ಸರ್ಕಾರ ಗಮನ ಹರಿಸುತ್ತಿದೆ ಎಂದಿದೆ. ಜೊತೆಗೆ ಈ ವರದಿಯ ಪ್ರಕಾರ, ಇವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ, ಬದಲಾಗಿ ಬಾಂಗ್ಲಾದ ಹಿಂದೂ ಹಿಂದುಳಿದ ವರ್ಗಗಳ ಜನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ನಾವು ಇನ್ನಷ್ಟು ಪರಿಶೀಲನೆ ನಡೆಸಿದಾಗ, ಫೆಬ್ರವರಿ 15, 2020ರ ಟೈಮ್ಸ್ ಆಫ್‌ ಇಂಡಿಯಾದ ಇನ್ನೊಂದು ವರದಿಯಲ್ಲಿ “ಕರ್ನಾಟಕದಲ್ಲಿರುವ ಬಾಂಗ್ಲಾದೇಶಿ ಹಿಂದೂ ನಿರಾಶ್ರಿತರು ಭೂಮಿಯ ಹಕ್ಕನ್ನು ಪಡೆಯುವಲ್ಲಿ ಇನ್ನಷ್ಟು ಹತ್ತಿರ” ಎಂದು ಹೇಳಲಾಗಿದೆ.  ಬಾಂಗ್ಲಾ ನಿರಾಶ್ರಿತರಿಗೆ 5400 ಎಕರೆ ಭೂಮಿ ಕೊಡಲು 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮತ್ತು 2020ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ ಯತ್ನಿಸಿರುವ ವಿಚಾರದ ಇದರಲ್ಲಿದೆ.

ಕರ್ನಾಟಕದಲ್ಲಿರುವ ಬಾಂಗ್ಲಾದ ಹಿಂದೂ ನಿರಾಶ್ರಿತರ ಬಗ್ಗೆ ಡಿಸೆಂಬರ್ 16, 2019ರಂದು ಪ್ರಜಾವಾಣಿಯಲ್ಲಿ ವಿಸ್ತೃತ ಲೇಖನ ಪ್ರಕಟಗೊಂಡಿದೆ. ಇದರಲ್ಲಿ  ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ನೆಲೆಸಿರುವ ಬಾಂಗ್ಲಾದ ಹಿಂದೂ ನಿರಾಶ್ರಿತರಿಗೆ ಎಸ್. ಸಿ. ಮೀಸಲಾತಿ ಸೌಲಭ್ಯ ಇದೆ. ಆದರೆ, ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಈ ಉಪಜಾತಿಗಳ ಹೆಸರು ಸೇರ್ಪಡೆಯಾಗಿಲ್ಲ ಎಂಬ ವಿಚಾರವನ್ನು ಗಮನಿಸಿದ್ದೇವೆ.

Fact Check: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?

ಸಿಂಧನೂರಿನಲ್ಲಿರುವ ಬಾಂಗ್ಲಾ ವಲಸಿಗರ ಸದ್ಯದ ಪರಿಸ್ಥಿತಿ ಕುರಿತಂತೆ ಶೋಧ ನಡೆಸಿದ್ದು, ಡೆಕ್ಕನ್‌ ಹೆರಾಲ್ಡ್ ನ ಸೆಪ್ಟೆಂಬರ್ 5, 2023ರ ವರದಿ ನಮಗೆ ಲಭ್ಯವಾಗಿದೆ. ಈ ವರದಿಯಲ್ಲಿ ಸರ್ಕಾರಿ ಸೌಲಭ್ಯಗಳನ್ನ ಪಡೆದುಕೊಳ್ಳುವುದು ವಲಸಿಗರಿಗೆ ಅಸಾಧ್ಯವಾಗಿದೆ. ಇಂದಿರಾ ಗಾಂಧಿ ಸರ್ಕಾರ ಸುಮಾರು 5 ಎಕರೆ ಜಾಗದೊಂದಿಗೆ ಕುಟುಂಬಕ್ಕೆ 80*50ರ ಜಾಗ, 2 ಹಸುಗಳನ್ನು ಕೊಟ್ಟಿದೆ. ಆದರೆ ಆ ಜಾಗವನ್ನು ಅಧಿಕೃತವಾಗಿ ಅವರದ್ದೇ ಎಂದು ಹೇಳಿಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ. ಸರ್ವೆ ಸಂಖ್ಯೆಯಲ್ಲಿನ ದೋಷದಿಂದ ಇದು ಸಾಧ್ಯವಾಗಿಲ್ಲ ಎಂದಿದೆ. ಇದೇ ವರದಿಯಲ್ಲಿ ಉಪ ಜಿಲ್ಲಾಧಿಕಾರಿ ಚಂದ್ರ ಶೇಖರ್ ನಾಯಕ್ ಅವರ ಹೇಳಿಕೆಯೂ ಇದ್ದು, ಅವರಿಗೆ ಭೂಮಿ ನೀಡಲಾದ ಬಗ್ಗೆ ಸರಿಯಾದ ದಾಖಲೆಗಳಿಲ್ಲ, ಫಲಾನುಭವಿಗಳು ಬೇರೆಯವರಿಗೆ ನೀಡಲಾದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಕ್ಯಾಂಪ್‌ ನಲ್ಲಿರುವ ನಿರಾಶ್ರಿತರು ಪರಿಶಿಷ್ಟ ಜಾತಿ ಅಡಿಯಲ್ಲಿ ಸೇರ್ಪಡೆಯಾಗುವುದಕ್ಕೂ ಸಾಧ್ಯವಾಗಿಲ್ಲ. ಕರ್ನಾಟಕ ಸರ್ಕಾರ ನಾಮಶೂದ್ರ ಸಮುದಾಯವನ್ನು ಪರಿಶಿಷ್ಟ ಪಂಗಡ ಅಡಿ ಗುರುತಿಸಿಲ್ಲ, ನಿರಾಶ್ರಿತರಲ್ಲಿ ಹೆಚ್ಚಿನವರು ಇದೇ ಸಮುದಾಯದವರಾಗಿದ್ದಾರೆ ಎಂದಿದೆ.

ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿಗೆ ನಾವು ಅಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಸೇನ್‌ ರಪ್ತಾನ್‌ ಅವರನ್ನು ಸಂಪರ್ಕಿಸಿದ್ದೇವೆ. ಅವರು ಕನ್ನಡ ಫ್ಯಾಕ್ಟ್‌ಚೆಕ್‌ ನೊಂದಿಗೆ ಮಾತನಾಡಿ, “1971ರ ಯುದ್ಧದ ಸಂದರ್ಭದಲ್ಲಿ 932 ಹಿಂದೂ ಕುಟುಂಬಗಳನ್ನು ಭಾರತ ಸರ್ಕಾರ ಬಾಂಗ್ಲಾದಿಂದ ಪಾರು ಮಾಡಿ ಆಶ್ರಯ ಕೊಟ್ಟಿತ್ತು. ಇವರೆಲ್ಲರೂ ಹಿಂದೂಗಳಾಗಿದ್ದು ಮುಸ್ಲಿಂ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಓಡಿ ಬಂದವರಾಗಿದ್ದರು. ಅವರಿಗೆ ಭಾರತದ ಪೌರತ್ವ ಮತ್ತು 5 ಎಕರೆ ಭೂಮಿಯನ್ನು ಕೊಟ್ಟಿತ್ತು. ಆದರೆ ಈವರೆಗೂ ಕುಟುಂಬಗಳಿಗೆ ಭೂಮಿಯ ಹಕ್ಕನ್ನು ಕೊಟ್ಟಿಲ್ಲ ಇದರಿಂದ ಆ ಭೂಮಿಯನ್ನು ವರ್ಗಾವಣೆ ಮಾಡಲು, ಇತರ ಕೆಲಸಕ್ಕೆ ಬಳಸಲು ಸಾಧ್ಯವಿಲ್ಲ. ಕೃಷಿ ಕಾರ್ಯಕ್ಕೆ ಮಾತ್ರ ಬಳಕೆ ಮಾಡಬಹುದಾಗಿದೆ. ನಿರಾಶ್ರಿತರಿಗೆ ಭೂಮಿಯ ಹಕ್ಕಿಗಾಗಿ ಹೋರಾಟಗಳು ನಡೆದಿದ್ದು, ಭೂಮಿಯ ಸರ್ವೇ ಸಂಖ್ಯೆ, ನಕ್ಷೆ ಇತ್ಯಾದಿಗಳ ಸಮಸ್ಯೆಗಳಿಂದ ಹಕ್ಕು ಪಡೆಯುವುದು ತೊಡಕಾಗಿದೆ ಎಂದಿದ್ದಾರೆ.

ಇನ್ನು ನಾಲ್ಕು ನಿರಾಶ್ರಿತರ ಕ್ಯಾಂಪ್‌ ನಲ್ಲಿ ಈಗ ಸುಮಾರು 25 ಸಾವಿರದಷ್ಟು ಮಂದಿ ವಾಸವಿದ್ದು, ಇಲ್ಲಿ 18-19 ಸಾವಿರ ಮಂದಿ ಮತದಾರರಿದ್ದಾರೆ. ಇವರಿಗೆ ಪೌರತ್ವ ಸಿಕ್ಕಿಲ್ಲ. ವೋಟರ್ ಐಡಿ, ಆಧಾರ್, ಇತ್ಯಾದಿಗಳನ್ನು ಪಡೆದುಕೊಂಡಿದ್ದಾರೆ. ಕ್ಯಾಂಪಿನಲ್ಲಿ ಶೇ. 95%ರಷ್ಟು ನಾಮ್‌ಶೂದ್ರ ಸಮುದಾಯದವರಿದ್ದು, ಉಳಿದವರು ಇತರ ಸಮುದಾಯದವರು. ಇವರೆಲ್ಲರೂ ಬಾಂಗ್ಲಾದಲ್ಲಿ ಹಿಂದುಳಿದ ಸಮುದಾಯದವರಾಗಿದ್ದಾರೆ. ಅವರು ಕೂಲಿ, ಕೃಷಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಇಲ್ಲಿನ ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆನ್ನುವುದು ಬೇಡಿಕೆಯಾಗಿಯೇ ಉಳಿದಿದೆ. ದೇಶದ 7 ರಾಜ್ಯಗಳಲ್ಲಿ ಬಾಂಗ್ಲಾ ಹಿಂದೂ ವಲಸಿಗರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಈ ಬೇಡಿಕೆ ಈಡೇರಿಲ್ಲ. ರಾಜಕೀಯ ಪಕ್ಷಗಳು ಈ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಪ್ರತಿ ಬಾರಿ ಆಶ್ವಾಸನೆಗಳನ್ನು ನೀಡಿದರೂ ಈಡೇರಿಲ್ಲ, ಬೇಡಿಕೆಗಳು ಬೇಡಿಕೆಗಯಾಗಿಯೇ ಉಳಿದಿದೆ, ಬಾಂಗ್ಲಾ ನಿರಾಶ್ರಿತರಿಗೆ ಯಾವುದೇ ಭೂಮಿಯ ಹಕ್ಕು ಸಿಕ್ಕಿಲ್ಲ, ಹಲವು ಸಮಸ್ಯೆಗಳಿಂದಾಗಿ ಅದು ಬಾಕಿಯಾಗಿದೆ ” ಎಂದು ಹೇಳಿದ್ದಾರೆ.

ಇದೇ ರೀತಿ ರಾಯಚೂರು ಸಿಂಧನೂರು ಕ್ಯಾಂಪಿನ ಬಾಂಗ್ಲಾ ನಿರಾಶ್ರಿತರು ಇನ್ನೂ ಪೌರತ್ವ ಸಿಗದೆ ಅದಕ್ಕಾಗಿ ಕಾಯುತ್ತಿದ್ದು, ಅವರ ಸಮಸ್ಯೆಗಳ ಕುರಿತ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಸತ್ಯಶೋಧನೆಯ ಪ್ರಕಾರ, ವೈರಲ್ ಪ್ರತಿಪಾದನೆಯಲ್ಲಿ ಬಾಂಗ್ಲಾ ಮುಸ್ಲಿಮರಿಗೆ 5 ಎಕರೆ ನೀಡಲಾಗುತ್ತಿದೆ ಮತ್ತು ಅವರನ್ನು ಎಸ್ಸಿ ವರ್ಗದಡಿಗೆ ಸೇರಿಸಲಾಗುತ್ತಿದೆ ಎಂದು ಹೇಳಲಾಗಿರುವುದು ತಪ್ಪಾಗಿದೆ. 1971ರ ಯುದ್ಧದ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಬಾಂಗ್ಲಾದ ನಿರಾಶ್ರಿತ ಹಿಂದೂಗಳಿಗೆ ಪೌರ, ಸಿಕ್ಕಿದ್ದರೂ, ಪರಿಶಿಷ್ಟ ವರ್ಗದಡಿ ಸೇರ್ಪಡೆ ಮತ್ತು ತಲಾ 5 ಎಕರೆ ಜಾಗದ ಹಕ್ಕು ನೀಡುವ ವಿಚಾರ ಇನ್ನೂ ಆಗಿಲ್ಲ.


ಇದನ್ನು ಓದಿ: ನಾಗಮಂಗಲ ಗಲಭೆ ಕೇಸ್​: ಪೋಲಿಸರ ಭೀತಿಯಿಂದ ಯುವಕ ಸಾವು ಎಂದು ಸುಳ್ಳು ಹರಡಿದ ಕನ್ನಡದ ಮಾಧ್ಯಮಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *