“ಬ್ರಿಟನ್ನಲ್ಲಿ ಅಧಿಕಾರ ಬದಲಾದ ತಕ್ಷಣ ಬಹಿರಂಗಗಳು ಹೊರಬರಲಾರಂಭಿಸಿವೆ, ರಿಷಿ ಸುನಕ್ ಸೋತ ನಂತರ ಮೋದಿ ಮತ್ತು ಅವರ ಮಂತ್ರಿಗಳ ಕಪ್ಪುಹಣದ ರಹಸ್ಯ ಬಯಲಾಗುತ್ತಿದೆ. 14 ವರ್ಷಗಳಲ್ಲಿ ಮೋದಿಯವರ ಮಂತ್ರಿಗಳ ಕಪ್ಪುಹಣ ನೂರು ಪಟ್ಟು ಹೆಚ್ಚಾಗಿದೆ. ಬ್ರಿಟನ್ನ ರಹಸ್ಯ ಬ್ಯಾಂಕ್ಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಮೊದಲ ಪಟ್ಟಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತ 24 ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸಿ ಈ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇನ್ನೂ ಹಲವರು ಇದೇ ಸಂದೇಶವನ್ನು ಬಳಸಿಕೊಂಡು ಹಲವರು ವಿಪಕ್ಷ ಸ್ಥಾನದಲ್ಲಿರುವ ಇಂಡಿಯಾ ಒಕ್ಕೂಟದ ನಾಯಕರ ಹೆಸರುಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಆ ಪೋಸ್ಟ್ಗಳು ಕೂಡ ವೈರಲ್ ಆಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಸಂದೇಶಗಳಲ್ಲಿ ಸ್ವಿಸ್ ಬ್ಯಾಂಕ್ನಲ್ಲಿರುವ ಭಾರತೀಯ ಕಪ್ಪುಹಣದ ಮೊತ್ತ 1.3 ಟ್ರಿಲಿಯನ್ ಡಾಲರ್ ಎಂದು ಕೂಡ ಆರೋಪಿಸಲಾಗಿದೆ. ಆ ಮೂಲಕ ಒಂದೇ ಸಂದೇಶವನ್ನು ಎರಡು ಆಯಾಮಗಳಲ್ಲಿ ಹಂಚಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಜೊತೆಗೆ 24 ನಾಯಕರಲ್ಲಿ ಯಾರೆಲ್ಲ ಎಷ್ಟು ಕಪ್ಪು ಹಣವನ್ನು ಹೊಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಲೆಕ್ಕ ಸಹಿತ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದೇ ಸಂದೇಶ ಎರಡೂ ಪಕ್ಷಗಳ ಬೆಂಬಲಿಗರಿಂದ ಹಂಚಿಕೊಳ್ಳಲಾಗುತ್ತಿದ್ದು, ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಹಾಗಾಗಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಸಂದೇಶಕ್ಕೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ವಿಕಿಲೀಕ್ಸ್ ಭಾರತೀಯ ಕಪ್ಪುಹಣ ಹೊಂದಿರುವವರ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡು ಬಂದಿಲ್ಲ. ಇನ್ನೂ ಹೆಚ್ಚಿನ ಹುಡುಕಾಟ ನಡೆಸಿದಾಗ ವಿಕಿಲೀಕ್ಸ್ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯ ಕಪ್ಪುಹಣ ಹೊಂದಿರುವವರ ಮೊದಲ ಪಟ್ಟಿಯನ್ನು ಪ್ರಕಟಿಸಿದೆ ಎಂದು ಹೇಳುವ ಮೂಲಕ 2011 ರಿಂದಲೂ ವಿವಿಧ ಭಾರತೀಯ ರಾಜಕೀಯ ನಾಯಕರ ಹೆಸರುಗಳೊಂದಿಗೆ ಇದೇ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಪತ್ತೆಯಾಗಿದೆ. ಹಾಗಾಗಿ ಇದು ಸುಳ್ಳು ಎಂಬುದು ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ತಿಳಿದು ಬಂದಿದೆ.
ಇದರ ಆಧಾರದ ಮೇಲೆ ಇನ್ನಷ್ಟು ಪರಿಶೀಲನೆ ನಡೆಸಿದಾಗ ಕೆಲವೊಂದು ವರದಿಗಳು ಕಂಡು ಬಂದಿದ್ದು ಆ ವರದಿಗಳ ಪ್ರಕಾರ, 2011 ರಲ್ಲಿ, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಭಾರತೀಯರು ಠೇವಣಿ ಮಾಡಿದ ಹೆಚ್ಚಿನ ಹಣವನ್ನು ಸ್ವಿಸ್ ಬ್ಯಾಂಕ್ಗಳು ಹೊಂದಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಪರಿಶೀಲಿಸಿದಾಗ, ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಕಪ್ಪುಹಣ ಹೊಂದಿರುವವರ ಹೆಸರಿನೊಂದಿಗೆ ಯಾವುದೇ ಪಟ್ಟಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿಲ್ಲ ಎಂಬುದು ತಿಳಿದು ಬಂದಿದೆ.
ಈ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ವಿಕಿಲೀಕ್ಸ್ ವೆಬ್ಸೈಟ್ ಅನ್ನು ಪರಿಶೀಲನೆ ನಡೆಸಲಾಯಿತು. ಆದರೆ ಸ್ವಿಸ್ ಬ್ಯಾಂಕ್ಗಳಲ್ಲಿಯೇ ಆಗಲಿ ಬ್ರಿಟನ್ ಬ್ಯಾಂಕ್ಗಳಲ್ಲಿಯೇ ಆಗಲಿ ಕಪ್ಪುಹಣ ಹೊಂದಿರುವವರ ಬಗ್ಗೆ ಅಂತಹ ಯಾವುದೇ ಪಟ್ಟಿ ಅಥವಾ ವರದಿ ಕಂಡುಬಂದಿಲ್ಲ. ವಿಕಿಲೀಕ್ಸ್ ತನ್ನ ಕೊನೆಯ ವರದಿಯನ್ನು 05 ಆಗಸ್ಟ್ 2021 ರಂದು ಪ್ರಕಟಿಸಿರುವುದು ಕಂಡು ಬಂದಿದೆ. ಈ ಹುಡುಕಾಟದ ಸಮಯದಲ್ಲಿ, 2011 ರಲ್ಲಿ ವಿಕಿಲೀಕ್ಸ್ ಹಂಚಿಕೊಂಡ ಟ್ವೀಟ್ ಒಂದು ಕಂಡು ಬಂದಿದೆ. ಅದರಲ್ಲಿ ವಿಕಿಲೀಕ್ಸ್ ಸಂಸ್ಥೆಯು ವೈರಲ್ ಸಂದೇಶದ ವಿಭಿನ್ನ ಮಾದರಿಯನ್ನು ಹಂಚಿಕೊಂಡಿದ್ದು, ಈ ವೈರಲ್ ಸಂದೇಶವನ್ನು ನಕಲಿ ಎಂದು ಸ್ಪಷ್ಟಪಡಿಸಿತ್ತು.
WARNING: WikiLeaks and Indian black money: The following is a FAKE image and never appeared on WikiLeaks http://t.co/Dwbpc3P
— WikiLeaks (@wikileaks) August 5, 2011
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ರೀತಿ ಬ್ರಿಟನ್ ಬ್ಯಾಂಕ್ಗಳಲ್ಲಿಯೇ ಆಗಲಿ ಮತ್ತು ಸ್ವಿಸ್ ಬ್ಯಾಕ್ಗಳಲ್ಲಿಯೇ ಆಗಲಿ ಪ್ರಧಾನಿ ಮೋದಿ ಸಹಿತ 24 ಸಚಿವರು ಕಪ್ಪು ಹಣವನ್ನು ಹೊಂದಿದ್ದಾರೆ ಎಂದು ವಿಕಿಲೀಕ್ಸ್ ವರದಿ ಪ್ರಕಟಿಸಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ.
ಇದನ್ನೂ ಓದಿ : Fact Check |ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೆ ಆಗಲು ಅನರ್ಹರಾಗಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ