“ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ)ನ ಮೂವರು ಇಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಕರ್ನಾಟಕ ಬಸ್‌ಗೆ ‘ಮ್ಯಾಗ್ನೆಟಿಕ್ ಬಾಂಬ್’ ದಾಳಿಯನ್ನು ನಡೆಸಲಾಗಿದೆ. ಈ ಬಾಂಬ್ ದಾಳಿಯಲ್ಲಿ ಡಿಆರ್‌ಡಿಒ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರಿನ ಪಶ್ಚಿಮದ 4 ಕಿಲೋ ಮೀಟರ್ ದೂರದಲ್ಲಿ DRDO ನ HAL ತೇಜಸ್ ಫೈಟರ್ ಟೆಸ್ಟ್ ನಡೆಯುತ್ತಿದ್ದ ವೇಳೆ ಸಂಭವಿಸಿದೆ ” ಎಂದು ಫೋಟೋದೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಕರ್ನಾಟಕ ಹೊರತು ಪಡಿಸಿ ವಿವಿಧ ರಾಜ್ಯಗಳು ಸೇರಿದಂತೆ ಹಲವು ದೇಶಗಳಲ್ಲೂ ಈ ಸುದ್ದಿಯನ್ನುವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ಇದು ನಿಜವಾಗಿ ನಡೆದ ಘಟನೆ ಎಂದು ಭಾವಿಸಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಈ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ ಹಲವು ಕಾರಣಗಳಿಂದ ಅನುಮಾನವನ್ನು ಮೂಡಿಸುತ್ತಿದ್ದು, ಇದರ ಹಿಂದಿನ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಎನ್‌ಡಿಟಿವಿ ತನ್ನ ಯುಟ್ಯುಬ್ ಚಾನಲ್‌ನಲ್ಲಿ 9 ಜುಲೈ 2024 ರಂದು Bengaluru News | Public Bus Catches Fire In Bengaluru, Alert Driver Saves Passengers ಎಂಬ ಶೀರ್ಷಿಕೆಯ ಅಡಿಯಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋವೊಂದು ಕಂಡು ಬಂದಿದೆ.
ಕೇವಲ ಎನ್‌ಡಿಟಿವಿ ಮಾತ್ರವಲ್ಲದೆ ಕನ್ನಡದ ಹಲವು ಮಾಧ್ಯಮಗಳು ಕೂಡ ಈ ಕುರಿತು ವರದಿ ಮಾಡಿದ್ದು, ಆ ವರದಿಗಳ ಪ್ರಕಾರ “ಎಂಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್‌ನಲ್ಲಿದ್ದ 30 ಪ್ರಯಾಣಿಕರು ಅದೃಷ್ಠವಶಾತ್ ಪಾರಾಗಿದ್ದಾರೆ. ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಂಗಳವಾರ ಮಧ್ಯಾಹ್ನ ನಗರದ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಈ ಘಟನೆ ನಡೆದಿದೆ. ಬಸ್ ರೋಸ್ ಗಾರ್ಡನ್‍ನಿಂದ ಶಿವಾಜಿನಗರದ ಕಡೆಗೆ ಹೋಗುತ್ತಿತ್ತು. ಬಸ್‌ನ ಇಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿದೆ. ಕೂಡಲೇ ಎಚ್ಚೆತ್ತುಕೊಂಡ ಬಸ್ ಡ್ರೈವರ್ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಎಂದು ಉಲ್ಲೇಖಿಸಾಗಿದೆ.
ಇನ್ನು ಈ ಘಟನೆಯ ಕುರಿತು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಎಕ್ಸ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಾಗಿದ್ದಾರೆ, ” ಇಂದು ಬೆಳಗ್ಗೆ 8:40ರ ಸಮಾರಿಗೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ, ಯಾವುದೇ ಪ್ರಾಣಹಾನಿಯಾಗಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಮೆಗ್ನೆಟಿಕ್ ಬಾಂಬ್ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
Today around 08:40 am near Anil Kumble Circle, MG Road, a BMTC bus caught fire. Fire Force extinguished fire, no casualties reported. False rumors about a magnetic bomb as circulated on social media is false and baseless. pic.twitter.com/vlh5WSccvG
— DCP Central Division,ಉಪ ಪೊಲೀಸ್ ಆಯುಕ್ತ ಕೇಂದ್ರ ವಿಭಾಗ (@DCPCentralBCP) July 9, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಹೊತ್ತಿ ಉರಿದಿರುವುದು ತಾಂತ್ರಿಕ ಸಮಸ್ಯೆಯಿಂದ ಹೊರತು ಯಾವುದೇ ಬಾಂಬ್ ದಾಳಿಯಿಂದ ಅಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಶೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ
ಇದನ್ನೂ ಓದಿ : Fact Check | ಹುತಾತ್ಮ ಸೈನಿಕನ ಪತ್ನಿಯ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ ವ್ಯಕ್ತಿ ಬಂಧನ ಎಂದು ಬೇರೆ ಫೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ