Fact Check | ರಾಹುಲ್‌ ಗಾಂಧಿ ವಿರುದ್ಧ ಮತ್ತೊಮ್ಮೆ ಸುಳ್ಳು ಸುದ್ದಿ ಸೃಷ್ಟಿಸಿದ ಮಹೇಶ್‌ ವಿಕ್ರಮ್‌ ಹೆಗಡೆ

“ಮೋದಿಜಿ ಎಂದಿಗೂ ಮುಸ್ಲಿಂ ಸಮುದಾಯವನ್ನು ಮುಗಿಸುವುದಾಗಿ ಹೇಳಿಲ್ಲ. ಆದರೂ ಅವರು ಮೋದಿಗೆ ಮತ ಹಾಕಿಲ್ಲ. ಸನಾತನ ಧರ್ಮವನ್ನು ಅಂತ್ಯಗೊಳಿಸುವುದಾಗಿ ರಾಹುಲ್ ಗಾಂಧಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಆದರೂ ಮೂರ್ಖ ಹಿಂದೂಗಳು ರಾಹುಲ್ ಗಾಂಧಿಗೆ ಮತ ಹಾಕಿದರು ಎಂತಹ ವಿಪರ್ಯಾಸ!” ಎಂದು ಟಿವಿ ವಿಕ್ರಮ ಹಾಗೂ ಪೋಸ್ಟ್‌ ಕಾರ್ಡ್‌ ಸಂಸ್ಥಾಪಕ ಮಹೇಶ್‌ ವಿಕ್ರಮ ಹೆಗಡೆ ತನ್ನ ಎಕ್ಸ್‌ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಹಲವರು ರಿಪೋಸ್ಟ್‌ ಕೂಡ ಮಾಡಿದ್ದಾರೆ.

ಈ ಸುಳ್ಳು ಸುದ್ದಿಯ ಕುರಿತು ಬರೆಯಲು ಪ್ರಾರಂಭಿಸಿದ ಈ ಹೊತ್ತಿಗೆ, ಈ ಸುಳ್ಳು ಹೇಳಿಕೆಯುಳ್ಳ ಪೋಸ್ಟ್‌ ಸುಮಾರು 2 ಲಕ್ಷದ 93 ಸಾವಿರ ಜನರನ್ನು ತಲುಪಿದ್ದು, 23 ಸಾವಿರ ಜನ ಲೈಕ್‌ ಮಾಡಿದ್ದಾರೆ. ಇನ್ನು 6 ಸಾವಿರ ಜನ ರಿಪೋಸ್ಟ್‌ ಮಾಡಿದ್ದು, 494 ಜನ ಕಮೆಂಟ್‌ ಕೂಡ ಮಾಡಿದ್ದಾರೆ. ಇದರಲ್ಲಿ ಇವರು “ರಾಹುಲ್‌ ಗಾಂಧಿ ಅವರು ಪದೇ ಪದೇ ಸನಾತನ ಧರ್ಮವನ್ನು ಅಂತ್ಯಗೊಳಿಸುವುದಾಗಿ ಬೆದರಿಯೊಡ್ಡಿದ್ದಾರೆ” ಎಂಬ ಸುಳ್ಳನ್ನು ಉಲ್ಲೇಖಿಸಿದ್ದು, ಇದನ್ನ ಸಾವಿರಾರು ಮಂದಿ ನಿಜವೆಂದೇ ನಂಬಿಕೊಂಡಿದ್ದಾರೆ.  ಆದರೆ ಈ ರೀತಿ ರಾಹುಲ್‌ ಗಾಂಧಿ ಸನಾತನ ಧರ್ಮವನ್ನು ಅಂತ್ಯಗೊಳಿಸುವುದಾಗಿ ಬೆದರಿಕೆಯೊಡ್ಡಿರುವ ಕುರಿತು ಯಾವುದಾದರು ಉಲ್ಲೇಖವಿದೆಯೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಮಹೇಶ್‌ ವಿಕ್ರಮ್‌ ಹೆಗಡೆ ತನ್ನ ಎಕ್ಸ್‌ ( ಈ ಹಿಂದಿನ ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ ಮಾಡಿದಂತೆ ರಾಹುಲ್‌ ಗಾಂಧಿ ಅವರು ಎಂದಾದರೂ ಸನಾತನ ಧರ್ಮವನ್ನು ನಾಶಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾರೆಯೆ? ಎಂದು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಇವರ ಪೋಸ್ಟ್‌ನ ಆಧಾರವನ್ನೇ ಬಳಸಿಕೊಂಡು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲ್ಲಿ ಪರಿಶೀಲನೆ ನಡೆಸಿದೆವು. ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ವರದಿಗಳು ಕಂಡು ಬಂದಿಲ್ಲ.

ಒಂದು ವೇಳೆ ರಾಹುಲ್‌ ಗಾಂಧಿ ಅವರು ಸನಾತನ ಧರ್ಮವನ್ನು ಮುಗಿಸುವ ಬೆದರಿಕೆಯನ್ನು  ಪದೇ ಪದೇ ನೀಡುತ್ತಲೇ ಇದ್ದರೆ, ಆ ಕುರಿತು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ. ಆದರೆ ಕೆಲವು ಕಡೆಗಳಲ್ಲಿ ಪ್ರೊಪಗೆಂಡಾ ಮಾಧ್ಯಮಗಳು ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ರಾಹುಲ್‌ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ವರದಿಗಳು ಕೂಡ ಕಂಡು ಬಂದಿದ್ದು, ಈ ಕುರಿತು ಹಲವು ಫ್ಯಾಕ್ಟ್‌ಚೆಕ್‌ ವರದಿಗಳು ಲಭ್ಯವಾಗಿದೆ. ಆದರೆ ಮಹೇಶ್‌ ವಿಕ್ರಮ್‌ ಹೆಗಡೆ ಹೇಳಿದಂತೆ ರಾಹುಲ್‌ ಗಾಂಧಿ ಅವರ ಸನಾತನ ಧರ್ಮ ನಾಶಗೊಳಿಸುವ ರೀತಿಯ ಯಾವುದೇ ಹೇಳಿಕೆಗಳು ಪತ್ತೆಯಾಗಿಲ್ಲ..

ಇನ್ನು ರಾಹುಲ್‌ ಗಾಂಧಿ ಅವರು ವಿಪಕ್ಷ ನಾಯಕನಾಗಿ ಆಯ್ಕೆಯಾದ ಮೊದಲ ಬಾರಿಗೆ ಸಂಸತ್ತಿನಲ್ಲಿ ಜುಲೈ 1 ರಂದು ಭಾಷಣ ಮಾಡಿದ್ದರು, ಈ ವೇಳೆ “ಈ ದೇಶ ಅಹಿಂಸೆಯ ದೇಶ, ಈ ದೇಶ ಹೆದರಿಸುವ ದೇಶ ಅಲ್ಲ. ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆಯ ಕುರಿತು ಮಾತನಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತನಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ, ಭಗವಾನ್ ಶಿವ ಹೇಳುವುದೇನೆಂದರೆ ಹೆದರಬೇಡಿ, ಹೆದರಿಸಬೇಡಿ. ಅದಕ್ಕಾಗಿಯೇ ನಾವು ಅಭಯ ಮುದ್ರೆಯನ್ನು ತೋರಿಸುತ್ತೇವೆ. ಅಹಿಂಸೆಯ ಮಾತನಾಡುತ್ತಾರೆ, ತ್ರಿಶೂಲವನ್ನು ಭೂಮಿಯಲ್ಲಿ ಚುಚ್ಚಿ ಹೇಳುತ್ತಾರೆ. ಆದರೆ ಯಾವ ಜನರು ತಮ್ಮನ್ನು ತಾವು ಹಿಂದುಗಳು ಎಂದು ಕರೆದುಕೊಳ್ಳುತ್ತಿದ್ದಾರೆ ಅವರು 24 ಗಂಟೆ ಹಿಂಸೆ, ಹಿಂಸೆ, ಹಿಂಸೆ.. ದ್ವೇಷ, ದ್ವೇಷ, ದ್ವೇಷ, ಸುಳ್ಳು, ಸುಳ್ಳು.. ಸುಳ್ಳು . ಅಸಲಿಗೆ ನೀವು ಹಿಂದುಗಳೇ ಅಲ್ಲ” ಎಂದು ಹೇಳಿದ್ದರು.

ಈ ವೇಳೆ ಎದ್ದು ನಿಂತ ಪ್ರಧಾನಿ ನರೇಂದ್ರ ಮೋದಿಯವರು “ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಚಾರವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿಯವರು “ಇಲ್ಲ, ಇಲ್ಲ..ನಾವು ಬಿಜೆಪಿ, ಆರ್‌ಆರ್‌ಎಸ್‌ ಬಗ್ಗೆ ಹೇಳಿದ್ದು. ನರೇಂದ್ರ ಮೋದಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ, ಕೇವಲ ಬಿಜೆಪಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ ಮತ್ತು ಆರ್‌ಎಸ್‌ಎಸ್‌ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ” ಎಂದಿದ್ದಾರೆ. ಇಲ್ಲಿ ರಾಹುಲ್‌ ಗಾಂಧಿ ಅವರು ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಗುರಿಯಾಗಿಸಿ ಮಾತನಾಡಿದ್ದಾರೆಯೇ ಹೊರತು, ಹಿಂದೂ ಸಮಾಜವನ್ನಲ್ಲ ಎಂದು ಗೊತ್ತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಮಹೇಶ್‌ ವಿಕ್ರಮ್‌ ಹೆಗಡೆ ಮಾಡಿರುವ ಪೋಸ್ಟ್‌ ಸುಳ್ಳುನಿಂದ ಕೂಡಿದೆ. ಇನ್ನು ಇವರನ್ನು ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಸುಳ್ಳು ಸುದ್ದಿ ಹಬ್ಬವ ಪೆಡ್ಲರ್‌ ಎಂದು ಕೂಡ ಸಾಕಷ್ಟು ಮಂದಿ ಕರೆಯುತ್ತಾರೆ. ಈ ಹಿಂದೆಯು ಸುಳ್ಳು ಸುದ್ದಿ ಹಬ್ಬಿಸಿ ಜೈಲು ಕೂಡ ಸೇರಿದ್ದಾರೆ. ಮತ್ತೇ ಮತ್ತೆ ಇದೇ ರೀತಿಯ ಸುಳ್ಳು ಸುದ್ದಿಗಳನ್ನು ಇವರು ಹಬ್ಬಿಸುತ್ತಿದ್ದಾರೆ.. ಹಾಗಾಗಿ ಇಂತಹ ಸುಳ್ಳು ಸುದ್ದಿಯನ್ನು ನಂಬುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ಹತ್ರಾಸ್‌ನ ಕಾಲ್ತುಳಿತಕ್ಕೆ ಸಂಬಂಧಿಸಿದ ವೀಡಿಯೋ ಎಂದು ಭೋಲೆ ಬಾಬಾನ ರಾಜಸ್ತಾನದ ಕಾರ್ಯಕ್ರಮದ ವೀಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *