“ಜಿಯೋದ ಧಮಾಕಾವನ್ನು ಸ್ಕ್ರ್ಯಾಚ್ ಮಾಡಿ ಮತ್ತು ರೂ 650 ಗೆಲ್ಲಿರಿ” ಎಂಬ ಶೀರ್ಷಿಕೆಯಲ್ಲಿ “ಜಿಯೋ ಧಮಾಕಾ ಸ್ಕ್ರ್ಯಾಚ್ ಎಂಬ ಆಫರ್ನೊಂದಿಗೆ ಬಂದಿದೆ. ಈ ಆಫರ್ ಅನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಇದು ದೀಪಾಳಿಯ ಹಿನ್ನೆಲೆಯಲ್ಲಿ ಬಂದಿರುವ ಆಫರ್ ಆಗಿದೆ. ಹಾಗಾಗಿ ಕೆಲವೇ ದಿನಗಳವರೆಗೆ ಮಾತ್ರ ಈ ಆಫರ್ ಅನ್ನು ನೀಡಲಾಗಿದೆ. ಆದಷ್ಟು ಬೇಗ ಈ ಆಫರ್ ಅನ್ನು ಬಳಸಿಕೊಳ್ಳಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಲಾಭ ಪಡೆಯಿರಿ” ಎಂದು ಪೋಸ್ಟ್ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಪೋಸ್ಟ್ ಅನ್ನು ಸಾಕಷ್ಟು ಮಂದಿ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಹಲವರು ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿಯದೆ, ಪೋಸ್ಟ್ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುತ್ತಿದ್ದಾರೆ. ಹಲವರು ಇದು ನಿಜವಲ್ಲ ಎಂದು ಹೇಳುತ್ತಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದೆ ಈ ಬಗ್ಗೆ ಯಾವುದಾದರು ಅಧಿಕೃತ ವರದಿಗಳು ಪ್ರಕಟಗೊಂಡಿವೆಯೇ ಎಂಬುದನ್ನು ನಾವು ಪರಿಶೀಲನೆ ನಡೆಸಲು ಮುಂದಾದೆವು. ಒಂದು ವೇಳೆ ವೈರಲ್ ಆಫರ್ ನಿಜವೇ ಆಗಿದ್ದರೆ ಈ ಕುರಿತು ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದರು, ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಾರಾದ ಕಾರಣ ವೈರಲ್ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಯಿತು.
ಇನ್ನು ವೈರಲ್ ಪೋಸ್ಟ್ನ ಸತ್ಯತೆಯನ್ನು ಕಂಡುಹಿಡಿಯಲು, ನಾವು ಜಿಯೋದ ಅಧಿಕೃತ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲನೆಯನ್ನು ನಡೆಸಿದೆವು, ಆದರೆ ಅಲ್ಲಿ ಅಂತಹ ಯಾವುದೇ ಆಫರ್ ಬಗ್ಗೆ ನಮಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಜಿಯೋ ಸಂಸ್ಥೆಯಿಂದ ಪ್ರಕಟಗೊಂಡಿಲ್ಲ ಎಂಬುದು ನಮಗೆ ಖಚಿತವಾಯಿತು.
ವೈರಲ್ ಪೋಸ್ಟ್ನಲ್ಲಿ ನೀಡಲಾದ ಯುಆರ್ಎಲ್ ಅನ್ನು ನೋಡಿದ ನಂತರ ಅದು ನಕಲಿ ವೆಬ್ಸೈಟ್ನ ಯುಆರ್ಎಲ್ ಎಂದು ನಾವು ಕಂಡುಕೊಂಡಿದ್ದೇವೆ. ಮೂಲ ವೆಬ್ಸೈಟ್ನ URL jio.com ಆಗಿದೆ . ಆದರೆ ವೈರಲ್ ಪೋಸ್ಟ್ನಲ್ಲಿರುವ URL myjio.live ಆಗಿದೆ .ವೈರಲ್ ಪೋಸ್ಟ್ನಲ್ಲಿ ನೀಡಲಾದ ಲಿಂಕ್ ಅನ್ನು ನಾವು ಕ್ಲಿಕ್ ಮಾಡಿದ್ದೇವೆ. ಲಿಂಕ್ ಅಪಾಯಕಾರಿ ಎಂದು ನಮ್ಮ ಸಿಸ್ಟಮ್ ನಮಗೆ ಎಚ್ಚರಿಕೆ ನೀಡಿದೆ. ಈ ಲಿಂಕ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಎಂದು ನಮ್ಮ ಸಿಸ್ಟಂನಲ್ಲಿರುವ ಸುರಕ್ಷತಾ ಸಾಧನಗಳು ನಮಗೆ ತಿಳಿಸಿವೆ. ನಿಮ್ಮ ಸಿಸ್ಟಮ್ ಅನ್ನು ಹ್ಯಾಕ್ ಮಾಡುವ ಮೂಲಕ ಹ್ಯಾಕರ್ಗಳು ನಿಮಗೆ ಹಾನಿ ಮಾಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ರೀತಿ ಜೊಯೋ ಸಂಸ್ಥೆ “ಸ್ಕ್ರ್ಯಾಚ್ ಮಾಡಿ ಮತ್ತು ರೂ 650 ಗೆಲ್ಲಿರಿ” ಎಂಬ ಯಾವುದೇ ಆಫರ್ ಅನ್ನು ಘೋಷಣೆ ಮಾಡಿಲ್ಲ. ಇನ್ನು ವೈರಲ್ ಪೋಸ್ಟ್ನಲ್ಲಿರುವ URL myjio.live ಆಗಿದ್ದು, ಇದು ನಿಜವಾದ URL ಅಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ಮಾಹಿತಿಯಿಂದ ಕೂಡಿದೆ. ಹಾಗಾಗಿ ಈ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check : 2018ರ ಓರಿಸ್ಸಾದ ದೀಪಾವಳಿ ಆಚರಣೆಯ ವಿಡಿಯೋವನ್ನು ಇತ್ತೀಚಿಗೆ ನಡೆದ ಕೋಮು ಘರ್ಷಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.