Fact Check: ಪಹಣಿಯಲ್ಲಿ ವಕ್ಫ್ ಹೆಸರು: ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹಂಚಿಕೊಂಡ ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

ಕರ್ನಾಟಕದಲ್ಲಿ ವಕ್ಫ್‌ ಬೋರ್ಡ್‌ಗೆ ಸಂಬಂಧಿಸಿದಂತೆ ಈಗ ವಿವಾದ ಸೃಷ್ಟಿಯಾಗಿದೆ, ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ ರೈತರ ಭೂಮಿಯನ್ನು ಕಸಿದು ವಕ್ಫ್‌ ಬೋರ್ಡಿಗೆ ನೀಡುತ್ತಿದೆ, ಈ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಈ ಪ್ರಕರಣವನ್ನು ರಾಜಕೀಯಗೊಳಿಸಿದ್ದಾರೆ. ಆದರೆ ಈ ವಿವಾದವನ್ನು ತಿಳಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆಯುವುದಾಗಿ ಮತ್ತು ಯಾವ ರೈತರ ಭೂಮಿಯನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದ್ದಾರೆ.

ಆದರೆ, ವಕ್ಫ್‌ ಬೋರ್ಡಿಗೆ ಸಂಬಂಧಿಸಿದಂತೆ ಈ ಕಾಯ್ದೆಯನ್ನೇ ರದ್ದುಗೊಳಿಸಬೇಕು ಎಂದು ವಾದಿಸುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಈ ಪ್ರಕರಣವನ್ನು ಇನ್ನಷ್ಟು ವಿವಾದಕ್ಕೆ ತಿರುಗಿಸಲು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ, ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ ಕಾರಣದಿಂದ ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡ ನ್ಯೂಸ್ ನೌ, ಕನ್ನಡ ದುನಿಯಾ, ಪಬ್ಲಿಕ್ ಟಿವಿ ಸೇರಿದಂತೆ ಕೆಲವು ಮಾಧ್ಯಮಗಳು ಹಾವೇರಿಯಲ್ಲಿ ರೈತರೊಬ್ಬರು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಕೆಲವು ಮಾಧ್ಯಮಗಳು ಸಂಸದ ತೇಜಸ್ವಿ ಸೂರ್ಯ ಅವರ ಟ್ವಿಟ್ ಆಧಾರದಲ್ಲೇ ಸುದ್ದಿ ಮಾಡಿದ್ದವು.

ಫ್ಯಾಕ್ಟ್‌ ಚೆಕ್:‌

ಸಂಸದ ತೇಜಸ್ವಿ ಸೂರ್ಯ ಅವರು ಹಂಚಿಕೊಂಡಿರುವ ಮಾಹಿತಿ ಸುಳ್ಳು ಎಂದು ಹಾವೇರಿ ಪೋಲಿಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಸುಳ್ಳು ಸುದ್ದಿ ಹರಡಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೆಲವು ಮಾಧ್ಯಮಗಳು ಈ ಸುದ್ದಿ ಪ್ರಕಟಿಸುತ್ತಿದ್ದಂತೆ ಸ್ಪಷ್ಟನೆ ನೀಡಿದ ಹಾವೇರಿ ಪೊಲೀಸರು ಕನ್ನಡ ನ್ಯೂಸ್ ನೌ ಎಂಬ ಹೆಸರಿನ ಡಿಜಿಟಲ್ ನ್ಯೂಸ್ನಲ್ಲಿ ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚೆನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬ ರೈತ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾವೇರಿ ರೈತರು ಆರೋಪಿಸಿದ್ದಾರೆ ಎಂದು ವರದಿ ಪ್ರಕಟಿಸಿದೆ. ಆದರೆ ಈ ಸುದ್ದಿ ಸುಳ್ಳು, ಈ ರೀತಿ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ರೈತ ಚೆನ್ನಪ್ಪ ಬಾಳಿಕಾಯಿ ನೀಡಿರುವ ದೂರಿನ ಪ್ರಕಾರ ಅವರ ಪುತ್ರ ರೈತ ರುದ್ರಪ್ಪ ಐಸಿಐಸಿಐ ಬ್ಯಾಂಕ್ ನ ಹಾವೇರಿ ಖಾತೆಯಲ್ಲಿ 3 ಲಕ್ಷ ರೂಪಾಯಿ ಮತ್ತು ಖಾಸಗಿಯಾಗಿ ನಾಲ್ಕು ಲಕ್ಷ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದರು. ಅತಿ ಹೆಚ್ಚು ಮಳೆಯಾಗಿ ಬೆಳೆಯು ಹಾನಿಯಾಗಿದ್ದರಿಂದ ಮನನೊಂದು ದಿನಾಂಕ 06.01.2022 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಾವೇರಿ ಪೊಲೀಸರು ತಿಳಿಸಿದ್ದಾರೆ.

ಹಾಗೆಯೇ ಸಾಲವಿರುವಾಗ ಬೆಳೆಯು ಹಾನಿಯಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಂತಿಮ ವರದಿಯನ್ನು ತಹಶೀಲ್ದಾರ ಹಾನಗಲ್ ಅವರಿಗೆ ಸಲ್ಲಿಸಲಾಗಿದೆ. ಈ ಸಂಬಂಧ ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಒಬ್ಬ ಜವಬ್ದಾರಿಯುತ ಸಂಸದನಾಗಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಜನರ ದಿಕ್ಕುತಪ್ಪಿಸುತ್ತಿರುವ ಇಂತವರ ವಿರುದ್ಧ ಪೋಲಿಸ್‌ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಜನರ ವಿಶ್ವಾಸಕ್ಕೆ ಅರ್ಹವಿಲ್ಲದಂತೆ ಸುಳ್ಳು ಸುದ್ದಿಯನ್ನು ವರದಿ ಮಾಡಿರುವ ಮಾಧ್ಯಮಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಹಾವೇರಿ ಪೋಲಿಸರಿಗೆ ಒತ್ತಾಯಿಸಿದ್ದಾರೆ.

ತೇಜಸ್ವಿ ಸೂರ್ಯ ಈ ಹಿಂದೆ ಸಹ ಇದೇ ರೀತಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಸಿಕ್ಕಿಬಿದ್ದಿದ್ದು, ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ತೇಜಸ್ವಿ ಸೂರ್ಯ ದಿವಂಗತ ಕ್ಯಾ. ಪ್ರಾಂಜಲ್ ಅವರ ಸಾವಿನ ಪರಿಹಾರದ ಹಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದರು. ಅದನ್ನು ನೀವಿಲ್ಲಿ ನೋಡಬಹುದು.

ಈ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸೆನ್(ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವಿಚಾರವಾಗಿ ಕನ್ನಡ ದುನಿಯ ಇ-ಪೇಪರ್ ಸಂಪಾದಕ, ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕರ ವಿರುದ್ಧವೂ FIR ದಾಖಲಾಗಿದೆ. ಸುನೀಲ್ ಹುಚ್ಚಣ್ಣನವರ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.


ಇದನ್ನು ಓದಿ: ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *