Fact Check: ರಾಹುಲ್ ಗಾಂಧಿ ಅವರನ್ನು ಎಲ್ಲಾ ಸಂಸದೀಯ ಸಮಿತಿಗಳಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೆಗೆದುಹಾಕಿದ್ದಾರೆ ಎಂಬುದು ಸುಳ್ಳು

ರಾಹುಲ್ ಗಾಂಧಿ

ರಾಹುಲ್‌ ಗಾಂಧಿ ಕುರಿತಂತೆ ಪ್ರತೀದಿನ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವೇ ದಿನಗಳು ಹಿಂದೆಯಷ್ಟೇ ಮಹಾರಾಷ್ಟ್ರದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಸಂವಿಧಾನ ರಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಂವಿಧಾನದ ಖಾಲಿ ಪ್ರತಿಗಳನ್ನು ನೀಡಲಾಗಿದೆ ಎಂದು ಮಹಾರಾಷ್ಟ್ರದ ಬಿಜೆಪಿ ಘಟಕವು ಕಾರ್ಯಕ್ರಮದಲ್ಲಿ ನೀಡಿದ ನೋಟ್‌ಪ್ಯಾಡ್‌ಗಳ ವಿಡಿಯೋ ಹಂಚಿಕೊಂಡು ವಿವಾದಕ್ಕೆ ಕಾರಣವಾಗಿತ್ತು.

ಈಗ, “ರಾಹುಲ್ ಗಾಂಧಿ ಎಲ್ಲಾ ಸಂಸದೀಯ ಸಮಿತಿಗಳಿಂದ ಹೊರಗುಳಿದಿದ್ದಾರೆ” ಎಂದು ಹೇಳುವ ಯೂಟ್ಯೂಬ್ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿಇಲ್ಲಿಮತ್ತು ಇಲ್ಲಿ) ವೈರಲ್ ಆಗುತ್ತಿವೆ. “ವಿದೇಶಾಂಗ ಸಚಿವ ಎಸ್ ಜೈಶಂಕರ್ ಇತ್ತೀಚೆಗೆ ರಾಹುಲ್ ಗಾಂಧಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯಿಂದ ತೆಗೆದುಹಾಕಿದ್ದಾರೆ ಮತ್ತು ರಾಹುಲ್ ಗಾಂಧಿಯನ್ನು ಎಲ್ಲಾ ಸಂಸದೀಯ ಸಮಿತಿಗಳಿಂದ ತೆಗೆದುಹಾಕಲು ಮೋದಿ ನಿರ್ಧರಿಸಿದ್ದಾರೆ” ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಅನೇಕರು ನಿಜವೆಂದು ನಂಬಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಫ್ಯಾಕ್ಟ್‌ ಚೆಕ್:

ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ರಾಹುಲ್ ಗಾಂಧಿ ಅವರನ್ನು ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯಿಂದ ತೆಗೆದುಹಾಕಲಾಗಿದೆಯೇ? ಎಂದು ಕಂಡುಹಿಡಿಯಲು ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಿದಾಗ, ರಾಹುಲ್ ಗಾಂಧಿ ಅವರನ್ನು ಇತ್ತೀಚೆಗೆ ವಿದೇಶಾಂಗ ಸಚಿವಾಲಯದ ಸಮಾಲೋಚನಾ ಸಮಿತಿಯ ಸಲಹಾ ಸಮಿತಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಅವರು 2019 ರಲ್ಲಿ ರಚಿಸಲಾದ ವಿದೇಶಾಂಗ ಸಚಿವಾಲಯದ ಸಮಾಲೋಚನಾ ಸಮಿತಿಯ ಸದಸ್ಯರಾಗಿದ್ದಾರೆ. ಆದಾಗ್ಯೂ, ಅಕ್ಟೋಬರ್ 2024 ರಲ್ಲಿ ಸಂಸದೀಯ ವ್ಯವಹಾರಗಳ ಸಚಿವಾಲಯವು ಸ್ಥಾಪಿಸಿದ ಹೊಸ ಸಮಾಲೋಚನಾ ಸಮಿತಿಗಳಲ್ಲಿ, ರಾಹುಲ್ ಗಾಂಧಿ ಯಾವುದೇ ಸಚಿವಾಲಯದ (ಇಲ್ಲಿ) ಸಮಾಲೋಚನಾ ಸಮಿತಿಯಲ್ಲಿಯೂ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಮಾಲೋಚನಾ ಸಮಿತಿಗಳು ಸಂಸದೀಯ ಸಮಿತಿಗಳಲ್ಲ, ಅವು ಸರ್ಕಾರ ಸ್ಥಾಪಿಸಿದ ಸಮಿತಿಗಳಾಗಿವೆ. ಸಮಾಲೋಚನಾ ಸಮಿತಿ ಮತ್ತು ಸಂಸದೀಯ ಸಮಿತಿ ಎರಡು ವಿಭಿನ್ನ ಕಾರ್ಯಗಳನ್ನು ಹೊಂದಿವೆ.

ಸಮಾಲೋಚನಾ ಸಮಿತಿ:

ಈ ಸಮಿತಿಗಳನ್ನು ಸಂಸದೀಯ ವ್ಯವಹಾರಗಳ ಸಚಿವಾಲಯ ರಚಿಸಲಿದೆ. ಇವು ಸಾಮಾನ್ಯವಾಗಿ ಹೊಸ ಲೋಕಸಭೆಯ ರಚನೆಯ ನಂತರ ರೂಪುಗೊಳ್ಳುತ್ತವೆ. ಪ್ರತಿ ಲೋಕಸಭೆ ವಿಸರ್ಜನೆಯಾದ ನಂತರ ಈ ಸಮಿತಿಗಳನ್ನು ವಿಸರ್ಜಿಸಲಾಗುವುದು ಮತ್ತು ಲೋಕಸಭೆ ಹೊಸದಾಗಿ ರಚನೆಯಾದ ನಂತರ ಪುನರ್ ರಚಿಸಲಾಗುವುದು. ಸಂಸದೀಯ ವ್ಯವಹಾರಗಳ ಸಚಿವಾಲಯವು ಈ ಸಮಿತಿಗಳ ಸಂಯೋಜನೆ, ಕಾರ್ಯಗಳು ಮತ್ತು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಇವರಲ್ಲಿ ಸಂಸತ್ತಿನ ಉಭಯ ಸದನಗಳ ಸದಸ್ಯರು ಸೇರಿದ್ದಾರೆ. ಈ ಸಮಿತಿಗಳ ಸದಸ್ಯತ್ವವು ಸ್ವಯಂಪ್ರೇರಿತವಾಗಿದೆ ಮತ್ತು ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಮತ್ತು ನಾಯಕರ ಆಯ್ಕೆಗೆ ಬಿಡಲಾಗಿದೆ. ಈ ಸಮಿತಿಗಳು ಗರಿಷ್ಠ 30 ಸದಸ್ಯರು ಮತ್ತು ಕನಿಷ್ಠ 10 ಸದಸ್ಯರನ್ನು ಹೊಂದಿರುತ್ತವೆ. ಈ ಸಮಿತಿಗಳು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು / ಇಲಾಖೆಗಳೊಂದಿಗೆ ಸಂಯೋಜಿತವಾಗಿವೆ. ಸಂಬಂಧಪಟ್ಟ ಸಚಿವಾಲಯದ ಉಸ್ತುವಾರಿ ಸಚಿವರು / ರಾಜ್ಯ ಸಚಿವರು ಆ ಸಚಿವಾಲಯದ ಸಮಾಲೋಚನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳು ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ವಿಧಾನದ ಬಗ್ಗೆ ಸಚಿವರು ಮತ್ತು ಸಂಸತ್ ಸದಸ್ಯರ ನಡುವೆ ಅನೌಪಚಾರಿಕ ಚರ್ಚೆಗಳಿಗೆ ಅವು ವೇದಿಕೆಯನ್ನು ಒದಗಿಸುತ್ತವೆ.

ಸಂಸದೀಯ ಸಮಿತಿ:

ಮತ್ತೊಂದೆಡೆ, ಸಂಸದೀಯ ಸಮಿತಿಗಳನ್ನು (ಲೋಕಸಭೆ / ರಾಜ್ಯಸಭೆ) ಅವರು ನೇಮಿಸುತ್ತಾರೆ. ಇದರರ್ಥ ಈ ಸಮಿತಿಗಳ ಸದಸ್ಯರನ್ನು ಲೋಕಸಭಾ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ನಾಮನಿರ್ದೇಶನ ಮಾಡುತ್ತಾರೆ. ಈ ಸಮಿತಿಗಳು ಸ್ಪೀಕರ್ / ಅಧ್ಯಕ್ಷರ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತವೆ ಮತ್ತು ತಮ್ಮ ವರದಿಗಳನ್ನು ಸದನಕ್ಕೆ ಅಥವಾ ಸ್ಪೀಕರ್ / ಅಧ್ಯಕ್ಷರಿಗೆ ಸಲ್ಲಿಸುತ್ತವೆ. ಹೆಚ್ಚಿನ ಸಂಸದೀಯ ಸಮಿತಿಗಳ ಅಧಿಕಾರಾವಧಿ ಒಂದು ವರ್ಷದವರೆಗೆ ಇರುತ್ತದೆ. ಸಂಸದೀಯ ಸಮಿತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಪ್ರಸ್ತುತ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಕ್ಷಣಾ ಸಂಸದೀಯ ಸಮಿತಿಯ ಸದಸ್ಯರಾಗಿದ್ದಾರೆ, ಅವರನ್ನು ಸೆಪ್ಟೆಂಬರ್ 2024 ರಲ್ಲಿ ಸಮಿತಿಗೆ ನೇಮಿಸಲಾಯಿತು (ಇಲ್ಲಿ ಮತ್ತು ಇಲ್ಲಿ).

ಆದ್ದರಿಂದ, ರಾಹುಲ್ ಗಾಂಧಿಯನ್ನು ಎಲ್ಲಾ ಸಂಸದೀಯ ಸಮಿತಿಗಳಿಂದ ತೆಗೆದುಹಾಕಲಾಗಿದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ; ಪ್ರಸ್ತುತ ಅವರು ರಕ್ಷಣಾ ಸಂಸದೀಯ ಸಮಿತಿಯ ಸದಸ್ಯರಾಗಿದ್ದಾರೆ.


ಇದನ್ನು ಓದಿ: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *