Fact Check: ತಮಿಳುನಾಡಿನಲ್ಲಿ ಬ್ರಾಹ್ಮಣರು ಬೃಹತ್ ರ್‍ಯಾಲಿ ನಡೆಸಿದ್ದಾರೆ ಎಂದು 2012ರ ದೇವಸ್ಥಾನದ ಬ್ರಹ್ಮೋತ್ಸವದ ಪೋಟೋ ಹಂಚಿಕೆ

ಬ್ರಾಹ್ಮಣರು

ನವೆಂಬರ್ 3 ರಂದು, ‘ಇಂದು ಮಕ್ಕಳ್ ಕಚ್ಚಿ’ ನಾಯಕ ಅರ್ಜುನ್ ಸಂಪತ್ ನೇತೃತ್ವದ ರ್‍ಯಾಲಿಯಲ್ಲಿ ಭಾಗವಹಿಸಲು ತಮಿಳುನಾಡಿನಾದ್ಯಂತದ ಬ್ರಾಹ್ಮಣರು ಚೆನ್ನೈನ ರಾಜರತ್ನಂ ತಿತಾಲ್‌ನಲ್ಲಿ ಜಮಾಯಿಸಿದರು. ರ್‍ಯಾಲಿಯ ಮುಖ್ಯ ಉದ್ದೇಶವೆಂದರೆ ಕೆಲವು ರಾಜಕೀಯ ಮತ್ತು ಸಾಮಾಜಿಕ ಗುಂಪುಗಳು ಬ್ರಾಹ್ಮಣ ಸಮುದಾಯದ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಹರಡಲು ಯೋಜಿಸುತ್ತಿವೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ದ್ವೇಷದ ಮಾತುಗಳು ಹೆಚ್ಚಾಗುತ್ತಿರುವುದನ್ನು ವಿರೋದಿಸಿ, ತಮ್ಮ ಧಾರ್ಮಿಕ ಸಮುದಾಯವನ್ನು ತಾರತಮ್ಯ ಮತ್ತು ಅಪಮಾನದಿಂದ ರಕ್ಷಿಸಲು 1955 ರ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಆಕ್ಟ್ (ಪಿಸಿಆರ್) ಮೂಲಕ ರಕ್ಷಣೆ ಮಾಡುವಂತೆ, (ಇದು ‘ಅಸ್ಪೃಶ್ಯತೆಯ ಪ್ರಚಾರ ಮತ್ತು ಆಚರಣೆಯನ್ನು ಶಿಕ್ಷಾರ್ಹ ಅಪರಾಧ’ ಎಂದು ತಿಳಿಸುತ್ತದೆ) ತಮಿಳುನಾಡು ಸರ್ಕಾರದ ವಿರುದ್ದ ನಡೆದ ಬ್ರಾಹ್ಮಣರ ಬೃಹತ್ ಪ್ರತಿಭಟನೆ ಎಂದು ಹೇಳಲಾಗುತ್ತಿದೆ.

ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ಬ್ರಾಹ್ಮಣ ದಂಗೆ ನಡೆಯುತ್ತಿದೆ ಎಂದು ಬಲಪಂಥೀಯರು ಪ್ರಚಾರ ಮಾಡುತ್ತಿದ್ದಾರೆ. ಇಂದು ಮಕ್ಕಳ್ ಕಚ್ಚಿ ತನ್ನ ಅಧಿಕೃತ ‘X’ ಪುಟದಲ್ಲಿ, ‘ಬ್ರಾಹ್ಮಣ ಸಮುದಾಯವು ದಶಕಗಳಿಂದ ಬ್ರಾಹ್ಮಣರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ನಿಂದನೆ, ಅಪಮಾನಗಳ ವಿರುದ್ಧ ನಡೆಯುತ್ತಿರುವ ಬ್ರಾಹ್ಮಣರ ಪ್ರತಿಭಟನೆ’ ಎಂಬ ಬರಹದೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ತಮಿಳುನಾಡಿನಲ್ಲಿ ಬ್ರಾಹ್ಮಣರು ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯ ಮತ್ತು ಅಪಮಾನಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಪ್ರಸಾರವಾಗುತ್ತಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಹುಡುಕಿದಾಗ, ಇದೇ ರೀತಿಯ ಫೋಟೋವೊಂದು ಫೋಟೊ ಸೈಟ್ Flickr.com ನಲ್ಲಿ ಕಂಡುಬಂದಿದೆ. ಈ ಫೋಟೋವನ್ನು ಮೇ 10, 2012 ರಂದು ತೆಗೆಯಲಾಗಿದೆ ಮತ್ತು ಫೆಬ್ರವರಿ 14, 2013 ರಂದು ಅಪ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಅಲ್ಲದೆ, ಈ ಫೋಟೋ ಚೆನ್ನೈನ ತಿರುವಲ್ಲಿಕೇಣಿಯಲ್ಲಿರುವ ಪಾರ್ಥಸಾರಥಿ ದೇವಸ್ಥಾನದ ಬ್ರಹ್ಮೋತ್ಸವ ತೀರ್ಥೋತ್ಸವದ ಸಂದರ್ಭದಲ್ಲಿ ತೆಗೆದದ್ದು ಎನ್ನಲಾಗಿದೆಈ ಫೋಟೋ ಮತ್ತು ವೈರಲ್‌ ಫೋಟೋವನ್ನು ಪಕ್ಕಕ್ಕಿಟ್ಟು ನೋಡಿದಾಗ ಮುಂಭಾಗದಲ್ಲಿರುವವರು ಎರಡರಲ್ಲೂ ಒಂದೇ ವ್ಯಕ್ತಿಗಳಾಗಿರುವುದು ಕಂಡುಬರುತ್ತದೆ. ಮೇಲಿನ ಎರಡು ಛಾಯಾಚಿತ್ರಗಳು ಒಂದೇ ಘಟನೆಯನ್ನು ವಿವಿಧ ಕೋನಗಳಿಂದ ಸೆರೆಹಿಡಿಯುತ್ತವೆ ಎಂದು ಇದರಿಂದ ತಿಳಿಯಬಹುದು.

ಇದು 2012ರ ಪಾರ್ಥಸಾರಥಿ ದೇವಸ್ಥಾನದ ಬ್ರಹ್ಮೋತ್ಸವದ ವೇಳೆ ಬ್ರಾಹ್ಮಣರ ಮೆರವಣಿಗೆಯ ಫೋಟೋ ತೆಗೆದಿರುವುದು ಸ್ಪಷ್ಟವಾಗಿದೆ. ಈ ಫೋಟೋದೊಂದಿಗೆ ಬ್ರಾಹ್ಮಣರು ಪ್ರತಿಭಟಿಸಿದ್ದಾರೆ ಎಂಬ ಪ್ರತಿಪಾಧನೆ ಸುಳ್ಳು. ನವೆಂಬರ್ 3 ರಂದು ಇಂದು ಮಕ್ಕಳ್ ಪಾರ್ಟಿ ಆಯೋಜಿಸಿದ್ದ ರ್‍ಯಾಲಿಗೂ ಈ ಛಾಯಾಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿ ಇಂದು ಮಕ್ಕಳ್ ಕಚ್ಚಿ ಮತ್ತು ಇತರ ಬ್ರಾಹ್ಮಣರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುಳ್ಳು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಈ ಫೋಟೋ 2012 ರಲ್ಲಿ ಪಾರ್ಥಸಾರಥಿ ದೇವಸ್ಥಾನದಲ್ಲಿ ಬ್ರಹ್ಮೋತ್ಸವದ ಸಮಯದಲ್ಲಿ ತೆಗೆದದ್ದು. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದೆ.


ಇದನ್ನು ಓದಿ: ಪೆರಿಯಾರ್ ತನ್ನ ಅನುಯಾಯಿಯನ್ನು ಮದುವೆಯಾದರೆ ಹೊರತು ಮಗಳನ್ನಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *