ಸಾಮಾಜಿಕ ಮಾಧ್ಯಮದಲ್ಲಿ ಜನರ ಗುಂಪೊಂದು ವ್ಯಕ್ತಿಯನ್ನು ಥಳಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು “ಆಂಧ್ರಪ್ರದೇಶದ ಭೀಮಾವರಂ ಪ್ರದೇಶದ ರಾಮಾಲಯದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸ ಮಾಡಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ಅವರು ಒಂದಷ್ಟು ದೇವಾಲಯಗಳನ್ನು ಧ್ವಂಸ ಮಾಡಲು ಯೋಜನೆಯನ್ನು ಹೊಂದಿದ್ದಾರೆ. ಈಗ ಅದು ಮೊದಲ ಹಂತದಲ್ಲೇ ಗೊತ್ತಾಗಿದೆ” ಎಂದು ಬರೆದುಕೊಳ್ಳಲಾಗಿದೆ.
ವಿಡಿಯೋ ನೋಡಿದ ಹಲವು ಮಂದಿ ಇದರ ಹಿನ್ನೆಲೆ ಅರಿಯದೆ, ವಿಡಿಯೋದಲ್ಲಿನ ಹಲ್ಲೆ ದೃಷ್ಯಗಳು ಮತ್ತು ವಿಡಿಯೋದೊಂದಿಗೆ ಶೇರ್ ಮಾಡಲಾಗುತ್ತಿರುವ ಟಿಪ್ಪಣಿಯನ್ನು ಓದಿ ಘಟನೆ ನಿಜವೆಂದು ಭಾವಿಸಿದ್ದಾರೆ. ಹಲವರು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಮುಸಲ್ಮಾನರ ವಿರುದ್ಧ ಕಠೀಣವಾಗಿ ಟೀಕೆಗಳನ್ನು ಕೂಡ ಮಾಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕೂಡ ಕಾರಣವಾಗಿದೆ. ಹೀಗೆ ವಿವಿಧ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋಗಳನ್ನು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಲೇ ಇರುತ್ತವೆ. ಇವುಗಳನ್ನು ಕೋಮು ದ್ವೇಷ ಹಾಗೂ ಸುಳ್ಳು ನಿರೂಪಣೆಯ ವಿಡಿಯೋಗಳೇ ಹೆಚ್ಚು. ಹಾಗಾಗಿ ವೈರಲ್ ವಿಡಿಯೋ ಕೂಡ ನಮಗೆ ಹಲವು ಅನುಮಾನಗಳನ್ನು ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ನಾವು ವೈರಲ್ ವಿಡಿಯೊನ ಬಗ್ಗೆ ಪರಿಶೀಲನೆ ನಡೆಸಲು ಮುಂದಾದೆವು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 3 ದಿನಗಳ ಹಿಂದೆ ಡೈಲಿಹಂಟ್‌ನಲ್ಲಿ ಫೆಡರಲ್ ನ್ಯೂಸ್ ಆಂಧ್ರ ಪ್ರದೇಶ ಪ್ರಕಟಿಸಿದ ಸುದ್ದಿಯೊಂದು ಕಂಡ ಬಂದಿದೆ.
ಈ ವರದಿಯ ಪ್ರಕಾರ 01 ನವೆಂಬರ್ 2024 ರ ಮಧ್ಯಾಹ್ನ, ಭೀಮಾವರಂ ಹತ್ತಿರವಿರುವ ಕೋದಂಡ ರಾಮ ದೇವಾಲಯದ ಬಳಿ ವ್ಯಕ್ತಿಯೊಬ್ಬರು ಅಲೆದಾಡುತ್ತಿರುವುದು ಕಂಡುಬಂದಿದೆ. ಸ್ಥಳೀಯರು ಈತನನ್ನು ಗಮನಿಸಿ, ಅರ್ಥವಾಗದ ಭಾಷೆಯಲ್ಲಿ ಮಾತನಾಡಿದ್ದಾನೆ. ಇದರಿಂದ ಅನುಮಾನಗೊಂಡ ದೇವಾಲಯದ ವಿಗ್ರಹಗಳಿಗೆ ಹಾನಿಯುಂಟು ಮಾಡಲು ಈತ ಬಂದಿರಬಹುದು ಎಂದು ಭಾವಿಸಿದ್ದಾರೆ. ಬಳಿಕ ಆತ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಾಗ, ಅಲ್ಲಿನ ಸ್ಥಳೀಯರು ಆತನ ಮೇಲೆ ಕೂಗಾಡಿ, ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ನಾವು ಪ್ರವೇಶಿಸಿದ್ದೇವೆ , ಅದರಲ್ಲಿ ವ್ಯಕ್ತಿಯನ್ನು ಪೋಲುಮತಿ ದಿಲೀಪ್, ವಯಸ್ಸು 35, ಎಸ್‌ಸಿ-ಮಾಲಾ ಜಾತಿಗೆ ಸೇರಿದವರು ಎಂದು ಗುರುತಿಸಲಾಗಿದೆ. ಇದರಿಂದ ಆತ ಮುಸ್ಲಿಂ ಅಲ್ಲ ಎಂಬುದು ದೃಢಪಟ್ಟಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮುಸ್ಲಿಂ ವ್ಯಕ್ತಿಯೊಬ್ಬ ವಿಗ್ರಹ ಧ್ವಂಸಕ್ಕಾಗಿ ಪ್ರಯತ್ನಿಸಿದ್ದು, ಹಾಗೂ ಆ ಮುಸ್ಲಿಂ ವ್ಯಕ್ತಿಯನ್ನು ಸ್ಥಳಿಯರು ಹಿಡಿದು ಥಳಿಸಿದ್ದಾರೆ ಎಂಬುದು ಕಟ್ಟುಕತೆಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಮಾನಸಿಕ ಅಸ್ವಸ್ಥರಾಗಿದ್ದು, ಅವರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ನಾಸಿರುದ್ದೀನ್ ಶಾ ಪ್ರಧಾನಿ ಮೋದಿ ಅವರನ್ನು ಟೀಕಿಸಿರುವ ಪೋಸ್ಟ್ ನಕಲಿ