” ಈ ವಿಡಿಯೋ ನೋಡಿ ಈಗ ಸೌದಿ ಅರೇಬಿಯಾದಲ್ಲೂ ಕೂಡ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ, ಸಡಗರದಿಂದ, ಪಟಾಕಿ ಸಿಡಿಸುವ ಮೂಲಕ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆಯನ್ನು ಪುರುಷರು ಮತ್ತು ಬುರ್ಖಾ ಧರಿಸಿದ ಮಹಿಳೆಯರು ವೀಕ್ಷಿಸುತ್ತಾ, ದೀಪಾವಳಿಯ ಆಚರಣೆಯ ವೈಖರಿಯನ್ನು ಕಣ್ತುಂಬಿಕೊಂಡಿದ್ದಾರೆ. ಇಲ್ಲಿ, ಭಾರತದಲ್ಲಿ ಪಟಾಕಿ ಸಿಡಿಸುವುದು ತಪ್ಪು ಎನ್ನುವರು ಕೂಡ ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ “ಸೌದಿ ಅರೇಬಿಯಾ ದೀಪಾವಳಿ ಆಚರಣೆಗಳಿಗೆ ಸಾಕ್ಷಿಯಾಗಿದೆ ಆದರೆ ಭಾರತದಲ್ಲಿ ಉದಾರವಾದಿ ಸರ್ಕಾರಗಳು ನಮ್ಮ ಹಬ್ಬದ ಸಂಪ್ರದಾಯಗಳನ್ನು ಮೊಟಕುಗೊಳಿಸಲು ಮುಂದಾಗಿವೆ.” ಎಂದು ರಾಜಕೀಯಕ್ಕಾಗಿಯೂ ಕೂಡ ಇದೇ ವಿಡಿಯೋವನ್ನು ಬಳಸಿಕೊಳ್ಳಲಾಗಿದೆ. ಹೀಗೆ ವಿವಿಧ ಆಯಾಮಗಳಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್ ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ WPid ಎಂಬ ಹೆಸರಿರುವ ಯುಟ್ಯೂಬ್ ಚಾನೆಲ್ ನಲ್ಲಿ 23 ಸೆಪ್ಟೆಂಬರ್ 2024ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಇದರ ಜೊತೆಗೆ ಹಲವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳು ಕೂಡ ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಸೌದಿ ಅರೇಬಿಯಾದ 94ನೇ ರಾಷ್ಟ್ರೀಯ ದಿನ ಎಂದು ಬರೆದಿರುವುದು ಕಂಡುಬಂದಿದೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡ ದಿನಾಂಕವನ್ನು ಗಮನಿಸಿದಾಗ ಇದು ದೀಪಾವಳಿಗೂ ಮುನ್ನವೇ ಚಿತ್ರಿಸಲಾಗಿರುವ ವಿಡಿಯೋ ಎಂಬುದು ನಮಗೆ ಖಚಿತವಾಗಿದೆ. ಇನ್ನು ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ದಿನವನ್ನು ಆಚರಿಸಲು ಪ್ರಮುಖವಾದ ಕಾರಣವೆಂದರೆ ಸೆಪ್ಟೆಂಬರ್ 23ರಂದು 1932 ರಲ್ಲಿ ಅಲ್ಲಿನ ರಾಜ್ಯ ಅಬ್ದುಲಜಿಜ್ ಅಲ್ ಸೌದ್ ಸೌದಿ ಅರೇಬಿಯಾ ಸಾಮ್ರಾಜ್ಯದ ಒಂದು ದೇಶವಾಗಿ ವಿವಿಧ ಬುಡಕಟ್ಟು ಪ್ರದೇಶಗಳನ್ನು ಏಕೀಕರಿಸಿದ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ ಎಂಬುದು ತಿಳಿದುಬಂದಿದೆ. ಇದೇ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಈ ಸೆಪ್ಟಂಬರ್ 23 ರಂದು ಆಚರಿಸಲಾಯಿತು. ಈ ವಿಡಿಯೋ ಅದಕ್ಕೆ ಸಂಬಂಧಪಟ್ಟಿದ್ದಾಗಿದೆ. ಇನ್ನು ಈ ಬಗ್ಗೆ ಹಲವು ಮಾಧ್ಯಮ ವರದಿಗಳಲ್ಲೂ ಕೂಡ ಸುದ್ದಿಗಳು ಕಂಡುಬಂದಿವೆ.
ಒಟ್ಟಾರೆಯಾಗಿ ಹೇಳುವುದಾದರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದಲ್ಲಿ ದೀಪಾವಳಿಯನ್ನು ಪಟಾಕಿ ಸಿಡಿಸುವುದರ ಮೂಲಕ ಅಲ್ಲಿನ ನಾಗರಿಕರು ಆಚರಿಸಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ. ವೈರಲ್ ವಿಡಿಯೋ ಸಪ್ಟೆಂಬರ್ 23ರಂದು ಚಿತ್ರಿಸಲಾಗಿದ್ದು, ಇದನ್ನು ದೀಪಾವಳಿಗೂ ಮುನ್ನವೇ ಹಂಚಿಕೊಳ್ಳಲಾಗಿದೆ. ಈ ಆಚರಣೆಯ ವಿಡಿಯೋ ಸೌದಿ ಅರೇಬಿಯಾದ ರಾಷ್ಟ್ರೀಯ ದಿನದ ವಿಡಿಯೋವಾಗಿದೆ ಎಂಬುದು ಕೂಡ ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಸುಳ್ಳು ನಿರೂಪಣೆಯಿಂದ ಕೂಡಿರುವ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
ಇದನ್ನೂ ಓದಿ : Fact Check : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಅಮಿತ್ ಶಾ ಸಂಚು ರೂಪಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.