“ಒಡಿಶಾದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿದ್ದರು, ಈ ದಾಳಿಯ ನಂತರ ಹಿಂದೂಗಳು ಪಟಾಕಿಗಳ ಮೂಲಕ ಮುಸಲ್ಮಾನರ ಮೇಲೆ ದಾಳಿ ನಡೆಸಿ ಪ್ರತೀಕಾರವನ್ನು ತೀರಿಸಿಕೊಂಡಿದ್ದಾರೆ. ಹೀಗೆ ಸುಮ್ಮನಿರುವ ಹಿಂದೂಗಳ ಮೇಲೆ ದಾಳಿ ಮಾಡಿದಾಗ ಹಿಂದೂಗಳು ಕೂಡ ಇದೇ ರೀತಿಯ ಪ್ರತಿಕ್ರಿಯೆ ಕೊಟ್ಟಾಗ ಮುಸಲ್ಮಾನರು ಸುಮ್ಮನಾಗುತ್ತಾರೆ ಇಲ್ಲದಿದ್ದರೆ ಇದೇ ರೀತಿಯ ದಾಳಿಯನ್ನು ಪದೇಪದೇ ಮಾಡುತ್ತಲೇ ಇರುತ್ತಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಡಲಾಗುತ್ತಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ ಪಟಾಕಿಯನ್ನು ಕೈಯಲ್ಲೇ ಹಿಡಿದು ಎದುರಿರುವವರ ಕಡೆಗೆ ಹಾರಿಸುವುದನ್ನು ಕಾಣಬಹುದಾಗಿದೆ. ಇನ್ನು ಆ ವ್ಯಕ್ತಿಯ ಜೊತೆಗೂ ಹಲವರು ಇರುವುದು ಕಾಣಬಹುದಾಗಿದೆ. ತದನಂತರ ಕಟ್ಟಡದೊಳಕ್ಕು ಪಟಾಕಿಯನ್ನು ಹಾರಿಸುವುದು ವಿಡಿಯೋದಲ್ಲಿ ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋ ನಿಜವೆಂದು ಭಾವಿಸಿ ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡು, ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆಯನ್ನು ನಡೆಸಿದವು. ಈ ಸಂದರ್ಭದಲ್ಲಿ ನಮಗೆ ನವಂಬರ್ 1ರಂದು ಒಡಿಶಾ ಟಿವಿ ಡಾಟ್ ಇನ್ ಎಂಬ ವೆಬ್ಸೈಟ್ನಲ್ಲಿ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ವಿಡಿಯೋವಿನ ಸ್ಕ್ರೀನ್ ಗ್ರ್ಯಾಬ್ ಅನ್ನು ಹಂಚಿಕೊಂಡಿರುವುದು ಕಂಡುಬಂದಿದ್ದು, ವರದಿಯಲ್ಲಿ ಹಾಸ್ಟೆಲ್ ಹುಡುಗರು ಪಟಾಕಿಯನ್ನು ಬಳಸಿ ಹುಚ್ಚಾಟ ಆಡಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಇನ್ನು, ಕನಕ ನ್ಯೂಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಕೂಡ ನವಂಬರ್ 2ರಂದು ಈ ಘಟನೆಯ ವಿಡಿಯೋವನ್ನು ಹಂಚಿಕೊಂಡು ದೀಪಾವಳಿ ಸಂದರ್ಭದಲ್ಲಿ ಹಾಸ್ಟೆಲ್ ಹುಡುಗರು ಪರಸ್ಪರ ಪಟಾಕಿ ಸಿಡಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೇ ರೀತಿಯಾದ ಕೋಮು ಆಯೋಮವನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ. ಇದೇ ರೀತಿಯಾಗಿ ಹಲವು ವರದಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದ್ದು, ಈ ಯಾವುದೇ ವರದಿಗಳಲ್ಲಿ ಕೂಡ ಕೋಮು ಆಯಾಮ ಇಲ್ಲದಿರುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಹಿಂದೂಗಳ ಮೇಲೆ ಮುಸಲ್ಮಾನರು ದಾಳಿಯನ್ನು ನಡೆಸಿದರು ಮತ್ತು ಅದಕ್ಕೆ ಪ್ರತಿಯಾಗಿ ಹಿಂದೂಗಳು ಕೂಡ ಪಟಾಕಿಗಳನ್ನು ಸಿಡಿಸಿ ಮುಸಲ್ಮಾನರ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಂಡಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಹಾಸ್ಟೆಲ್ ಹುಡುಗರು ಪರಸ್ಪರ ಪಟಾಕಿ ಸಿಡಿಸಿಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದಾಗಿದೆ. ಹಾಗಾಗಿ ಈ ವಿಡಿಯೋ ಸುಳ್ಳು ನಿರೂಪಣೆಯಿಂದ ಹಂಚಿಕೊಳ್ಳಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಈ ಪೋಸ್ಟ್ಗಳನ್ನು ಶೇರ್ ಮಾಡಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಸೌದಿ ಅರೇಬಿಯಾದಲ್ಲಿ ದೀಪಾವಳಿ ಆಚರಣೆ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.