ವಕ್ಫ್‌ ವಿವಾದ: ರಾಜ್ಯದ ರೈತರ ಭೂಕಬಳಿಸುತ್ತಿರುವುದು ನಿಜವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ವಕ್ಫ್‌ ವಿವಾದ

ಪ್ರಸ್ತುತ ದೇಶದಲ್ಲಿ ಮತ್ತು ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಸೃಷ್ಟಿಯಾಗಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ವಕ್ಫ್ (ತಿದ್ದುಪಡಿ) ಮಸೂದೆಯು, ವಕ್ಫ್‌ ಆಸ್ತಿಗಳ ಮೇಲಿದ್ದ ರಾಜ್ಯದ ನಿಯಂತ್ರಣವನ್ನು ಕಡಿತಗೊಳಿಸಿ ಕೇಂದ್ರವೇ ಹೆಚ್ಚು ನಿಯಂತ್ರಿಸುವ ಹುನ್ನಾರವನ್ನು ಹೊಂದಿದೆ ಎಂದು ವಿವಾದಕ್ಕೆ ಮೊದಲು ದಾರಿ ಮಾಡಿಕೊಟ್ಟರೆ, ಈಗ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಸಧ್ಯ ಕರ್ನಾಟಕದಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಹಿನ್ನಲೆಯಾಗಿಟ್ಟುಕೊಂಡು, ಬಿಜೆಪಿ ಮುಖಂಡರು ಹಿಂದೂ-ಮುಸ್ಲಿಂ ದ್ವೇಷ ರಾಜಕಾರಣವನ್ನು ಇನ್ನಷ್ಟು ತೀವ್ರವಾಗಿ ಪ್ರಚಾರ ಪಡಿಸುತ್ತ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಮಾಧ್ಯಮಗಳೂ ಸಹ ಈ ಗೊಂದಲ ಸೃಷ್ಟಿಯಾಗಲೂ ಮುಖ್ಯ ಕಾರಣವಾಗಿದ್ದು, ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ತಟಸ್ತವಾಗಿ ಚರ್ಚಿಸಿ ಸಮಸ್ಯೆಯ ಆಳ-ಅಗಲವನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವ ಬದಲು ಕೋಮು ಆಯಾಮದಲ್ಲಿ ವರದಿಗಳನ್ನು ಬಿತ್ತರಿಸಿ, ಜನರಲ್ಲಿ ಇನ್ನಷ್ಟು ಆತಂಕಕ್ಕೆ, ಪರಸ್ಪರ ದ್ವೇಷಕ್ಕೆ ದಾರಿ ಮಾಡಿಕೊಡಲಾಗುತ್ತಿದೆ.

ಕರ್ನಾಟಕದ ಅಲ್ಪಸಂಖ್ಯಾತ ವಕ್ಫ್‌  ಇಲಾಖೆಯ ಸಚಿವ ಜಮೀರ್ ಅಹಮದ್‌ ಖಾನ್ ಹಮ್ಮಿಕೊಂಡಂತಹ ವಕ್ಫ್‌ ಅದಾಲತ್‌ ಎಂಬ ಕಾನೂನು ಕ್ರಮದ ವಿರುದ್ಧ ಬಿಜೆಪಿ ದ್ವೇಷದ ಅಭಿಯಾನ ನಡೆಸಲು ಆರಂಭಿಸಿದೆ. ಆದರೆ ವಕ್ಫ್‌ ಬೋರ್ಡ್‌ನ ಒತ್ತುವರಿ ಜಾಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಒತ್ತುವರಿಯಾದ ವಕ್ಫ್‌ ಆಸ್ತಿಗಳನ್ನು ಮರಳಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇನ್ನೂ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು “ವಕ್ಫ್ ಅಲ್ಲಾಹ್ನದು. ಆ ಆಸ್ತಿಯನ್ನ ಹಲವರು ಕಬಳಿಸಿದ್ದಾರೆ. ಅದನ್ನು ವಾಪಸ್ ತಗೋಬೇಕು. ಒಂದೇ ಒಂದು ಇಂಚು ಸಹಾ ಬಿಡದೇ ತಗೋಬೇಕು. ಇಲ್ಲ ಅಂದ್ರೆ, ನೀವು ತಪ್ಪಿತಸ್ಥರಾಗ್ತೀರಿ ಎಂದು ಮುಸ್ಲಿಂ ಮುಖಂಡರುಗಳಿಗೆ ಸಭೆಯೊಂದರಲ್ಲಿ ಕಿವಿ ಮಾತು ಹೇಳಿದ್ದ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇದರಿಂದ ವಿವಾದ ಸೃಷ್ಟಿಸಿದ ಬಿಜೆಪಿಯೇ ಇದರ ಸುಳಿಯಲ್ಲಿ ಸಿಲುಕುವಂತಾಗಿದೆ.

ಹಾಗಾದರೆ ವಕ್ಫ್ ಬೋರ್ಡ್‌ ಅಥವಾ ವಕ್ಫ್ ಆಸ್ತಿಗಳು ಎಂದರೇನು? ಇದರ ಸುತ್ತಾ ಯಾವ ಕಾರಣಗಳಿಗೆ ಹುಸಿ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಬಿಜೆಪಿ ಮತ್ತು ಬಲಪಂಥೀಯರು ಆರೋಪಿಸುತ್ತಿರುವಂತೆ ಇದು ಆಸ್ತಿ ಕಬಳಿಕೆ ಅಥವಾ “ಲ್ಯಾಂಡ್‌ ಜಿಹಾದ್‌”ನ ಭಾಗವೇ? ಅಥವಾ ಇದು ಬಿಜೆಪಿಯ ದ್ವೇಷ ರಾಜಕಾರಣದ ಭಾಗವೇ? ಈ ಎಲ್ಲಾ ವಿಷಯಗಳನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ಚರ್ಚಿಸೋಣ.

ವಕ್ಫ್ ಬೋರ್ಡ್‌ ಅಥವಾ ವಕ್ಫ್ ಆಸ್ತಿಗಳು ಎಂದರೇನು?

ವಕ್ಫ್ ಎಂದರೆ ಇಸ್ಲಾಮಿಕ್ ದತ್ತಿ(ದಾನ)ಯಾಗಿದ್ದು, ಆಸ್ತಿ ಅಥವಾ ಇತರ ಸ್ವತ್ತುಗಳ ರೂಪದಲ್ಲಿ ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ದಾನ ಮಾಡಲಾಗುತ್ತದೆ. ಒಂದು ಸಲ ವಕ್ಫ್ ಆಗಿ ಘೋಷಿಸಿದ ಆಸ್ತಿ, ಸಮುದಾಯದ ಸೇವೆಗೆ ಶಾಶ್ವತವಾಗಿ ಮೀಸಲಾಗಿರುತ್ತದೆ ಮತ್ತು ಅದನ್ನು ಅಲ್ಲಾಹನ (ದೇವರ) ಹೆಸರಿನಲ್ಲಿ ಇಡಲಾಯಿತು ಎಂದು ಭಾವಿಸಲಾಗುತ್ತದೆ. ಇದರಿಂದಾಗಿ ಈ ಆಸ್ತಿ ಮಾರಾಟಕ್ಕೆ ಅಥವಾ ಹಸ್ತಾಂತರಕ್ಕೆ ಅವಕಾಶವಿರುವುದಿಲ್ಲ. ವಕ್ಫ್ ಆಸ್ತಿಗಳು ಮಸೀದಿಗಳು, ಶಾಲೆಗಳು, ಆಸ್ಪತ್ರೆಗಳು, ಸ್ಮಶಾನಗಳು, ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳು ಅಥವಾ ಸಾಮಾಜಿಕ ಸೇವೆಗಳನ್ನು ಬೆಂಬಲಿಸಲು ಉದ್ದೇಶಿಸಿರುವ ಹಣವನ್ನು ಒಳಗೊಂಡಿರಬಹುದು.

ಭಾರತದಲ್ಲಿ, ವಕ್ಫ್ ಆಸ್ತಿಗಳನ್ನು ರಾಜ್ಯಮಟ್ಟದ ವಕ್ಫ್ ಬೋರ್ಡುಗಳು ನಿರ್ವಹಿಸುತ್ತವೆ. ಇವುಗಳ ನಿರ್ವಹಣೆ, ಬಳಕೆ ಮತ್ತು ಆದಾಯದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಆಸ್ತಿಯಿಂದ ಉಂಟಾಗುವ ಆದಾಯವನ್ನು ಸಾಮಾನ್ಯವಾಗಿ ಬಡವರ ಶಿಕ್ಷಣ, ಆರೋಗ್ಯ ಸೇವೆ, ಅಥವಾ ಧಾರ್ಮಿಕ ಸೌಕರ್ಯಗಳಿಗೆ ಬಳಸಲಾಗುತ್ತದೆ. ವಕ್ಫ್ ಆಸ್ತಿಗಳು ಜನಸೇವೆಗಾಗಿ ಮೀಸಲಾಗಿರುವುದರಿಂದ, ಈ ಉದ್ದೇಶಗಳನ್ನು ಉಳಿಸಿಕೊಳ್ಳಲು ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಬಳಸಲು ವಿಶೇಷ ಕಾನೂನುಗಳ ಮೂಲಕ ರಕ್ಷಣೆ ನೀಡಲಾಗಿದೆ.

ವಕ್ಫ್ ಮಂಡಳಿ(ಬೋರ್ಡ್‌)ಯ ಪಾತ್ರವೇನು?

ವಕ್ಫ್ ಮಂಡಳಿಯು ದತ್ತಿ ಮತ್ತು ಧಾರ್ಮಿಕ ಉದ್ದೇಶಗಳಿಗೆ ಮೀಸಲಾಗಿರುವ ವಕ್ಫ್ ಆಸ್ತಿಗಳ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದರ ಜವಾಬ್ದಾರಿಗಳು ಕೆಳಗಿನಂತಿವೆ:

ನೋಂದಣಿ ಮತ್ತು ಆಸ್ತಿ ಪಟ್ಟಿ ನಿರ್ವಹಣೆ – ಮಂಡಳಿಯು ಎಲ್ಲಾ ವಕ್ಫ್ ಆಸ್ತಿಗಳ ನವೀಕರಿಸಿದ ಪಟ್ಟಿಯನ್ನು ನಿರ್ವಹಿಸುತ್ತದೆ, ಅವುಗಳನ್ನು ದಾಖಲಿಸಲಾಗಿದೆ ಎಂದು ಖಚಿತಪಡಿಸುತ್ತದೆ ಮತ್ತು ಆಸ್ತಿ ಮಾಲೀಕತ್ವ ಅಥವಾ ಬಳಕೆಯಲ್ಲಿ ಯಾವುದೇ ಸೇರ್ಪಡೆಗಳು ಅಥವಾ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ಆಸ್ತಿ ನಿರ್ವಹಣೆ – ಬೋರ್ಡು ವಕ್ಫ್ ಆಸ್ತಿಗಳನ್ನು ಬಾಡಿಗೆಗೆ ನೀಡುವುದು ಅಥವಾ ಬಳಸುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ವಕ್ಫ್ ಆಸ್ತಿಗಳು ವಕ್ಫ್ ತತ್ವಗಳಿಗೆ ಅನುಗುಣವಾಗಿರಲು ಈ ಬೋರ್ಡು ಮಾರ್ಗಸೂಚಿಗಳನ್ನು ನಿಯಮಿತವಾಗಿ ಮಾಡುತ್ತದೆ ಮತ್ತು ಇವುಗಳನ್ನು ಅಕ್ರಮವಾಗಿ ಬಳಕೆ ಮಾಡದಂತೆ ಸಂರಕ್ಷಿಸುತ್ತದೆ.

ಆದಾಯ ಸಂಗ್ರಹಣೆ ಮತ್ತು ಹಂಚಿಕೆ – ಮಂಡಳಿಯು ಬಾಡಿಗೆ ಅಥವಾ ಕೃಷಿ ಆದಾಯದಂತಹ ವಕ್ಫ್ ಆಸ್ತಿಗಳಿಂದ ಉತ್ಪತ್ತಿಯಾಗುವ ಆದಾಯವನ್ನು ಸಂಗ್ರಹಿಸುತ್ತದೆ ಮತ್ತು ಸಮುದಾಯಕ್ಕೆ ಪ್ರಯೋಜನವಾಗುವಂತೆ ವಿವಿಧ ಸಾಮಾಜಿಕ, ಶೈಕ್ಷಣಿಕ ಅಥವಾ ಧಾರ್ಮಿಕ ಕಾರಣಗಳಿಗೆ ಹಣವನ್ನು ನಿಯೋಜಿಸುತ್ತದೆ.

ಕಾನೂನು ಮತ್ತು ವಿವಾದ ಪರಿಹಾರ – ವಕ್ಫ್ ಬೋರ್ಡ್‌ಗಳು ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳನ್ನು ನಿರ್ವಹಿಸುತ್ತವೆ, ಮಾಲೀಕತ್ವ, ನಿರ್ವಹಣೆ ಮತ್ತು ಬಳಕೆಯ ಮೇಲಿನ ವಿವಾದಗಳನ್ನು ಪರಿಹರಿಸುತ್ತವೆ. ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಅಕ್ರಮ ಕಬಳಿಕೆಗಳಿಂದ ಆಸ್ತಿಯನ್ನು ರಕ್ಷಿಸುತ್ತದೆ.

ಸಮುದಾಯ ಸೇವೆಗಳು – ಶಾಲೆಗಳು, ಆಸ್ಪತ್ರೆಗಳು, ಅನಾಥಾಶ್ರಮಗಳು ಮತ್ತು ಇತರ ಕಲ್ಯಾಣ ಕ್ರಮಗಳನ್ನು ಬೆಂಬಲಿಸುವ ಮೂಲಕ, ವಕ್ಫ್ ನಿಧಿಗಳು ಸಾಮಾಜಿಕ ಅಭಿವೃದ್ಧಿ ಮತ್ತು ಸಮುದಾಯ ಕಲ್ಯಾಣಕ್ಕೆ ಕೊಡುಗೆ ನೀಡುವುದನ್ನು ಮಂಡಳಿಯು ಖಚಿತಪಡಿಸುತ್ತದೆ.

ದೇಶ ಮತ್ತು ರಾಜ್ಯದಲ್ಲಿನ ವಿವಾದಗಳು ಮತ್ತು ಇತ್ತೀಚಿನ ಬೆಳವಣಿಗೆಗಳು

ಇತ್ತೀಚಿನ ತಿಂಗಳುಗಳಲ್ಲಿ, ವಕ್ಫ್ ಬೋರ್ಡ್ ಮತ್ತು ವಕ್ಫ್ ಆಸ್ತಿಗಳು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ತೀವ್ರ ಚರ್ಚೆ ಮತ್ತು ವಿವಾದದ ವಿಷಯಗಳಾಗಿವೆ. ವಕ್ಫ್ ಬೋರ್ಡ್‌ಗಳ ಅಕ್ರಮ ಕಬಳಿಕೆ, ದುರುಪಯೋಗ ಮತ್ತು ಭ್ರಷ್ಟಾಚಾರ ಆರೋಪಗಳಿಂದಾಗಿ ವಿವಾದಕ್ಕೆ ಒಳಗಾಗಿವೆ. ಹಲವು ವಕ್ಫ್ ಆಸ್ತಿಗಳನ್ನು ಅಕ್ರಮವಾಗಿ ಕಬಳಿಸಲಾಗಿದ್ದು, ಮೂಲ ಜನೋಪಕಾರಿ ಅಥವಾ ಧಾರ್ಮಿಕ ಉದ್ದೇಶಗಳಿಗೆ ಬಳಸದೆ ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದಾಗಿ, ವಕ್ಫ್ ಆಸ್ತಿಗಳ ರಕ್ಷಣೆಯ ಕುರಿತು ಹಾಗೂ ವಕ್ಫ್ ಬೋರ್ಡುಗಳ ಸಮರ್ಪಕ ನಿರ್ವಹಣೆ ಕುರಿತು ಸಾಕಷ್ಟು ಚರ್ಚೆಗಳು ಉಂಟಾಗಿವೆ. ಕರ್ನಾಟಕದಲ್ಲಿ ವಕ್ಫ್ ಬೋರ್ಡುಗಳಲ್ಲಿ ಭ್ರಷ್ಟಾಚಾರ, ಪಕ್ಷಪಾತ ಮತ್ತು ಬಾಡಿಗೆ ಮತ್ತು ನಿಧಿಗಳ ಹಂಚಿಕೆಯಲ್ಲಿ ಅಕ್ರಮದ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ಅವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಪಾರದರ್ಶಕತೆಯನ್ನು ಜನ ಬಯಸುತ್ತಿದ್ದಾರೆ.

ಮತ್ತೊಂದು ಮುಖ್ಯ ಬೆಳವಣಿಗೆ ಎಂದರೆ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ಮಂಡಿಸಿರುವುದು, ಇದು ವಿವಾದಕ್ಕೆ ಕಾರಣವಾಗಿದೆ. ಈ ತಿದ್ದುಪಡಿಗಳು ವಕ್ಫ್ ಬೋರ್ಡುಗಳ ಮೇಲಿನ ಅಧಿಕಾರವನ್ನು ಕೇಂದ್ರೀಕೃತಗೊಳಿಸಲು(centralize) ಉದ್ದೇಶಿತವಾಗಿದ್ದು, ಇದರಿಂದ ರಾಜ್ಯ ಬೋರ್ಡುಗಳ ಸ್ವಾಯತ್ತತೆ ಕಡಿಮೆಯಾಗಬಹುದು ಮತ್ತು ವಕ್ಫ್ ಆಸ್ತಿಗಳು ಸಾರ್ವಜನಿಕ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲು ಸುಲಭವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ತಾತ್ಸಾರ ಮತ್ತು ಪಾರದರ್ಶಕತೆಯ ಕೊರತೆಯಿಂದಾಗಿ, ವಕ್ಫ್ ನಿಧಿಗಳು ಧಾರ್ಮಿಕ, ಶಿಕ್ಷಣ ಮತ್ತು ಸಮುದಾಯ ಸೇವೆಗಳಿಗೆ ಹೋಗದೆ ಅಸಮರ್ಪಕವಾಗಿ ಬಳಕೆಯಾಗುತ್ತಿವೆ, ಮತ್ತು ಇದು ವಕ್ಫ್ ನೆರವಿನ ಮೇಲೆ ಅವಲಂಬಿತವಾಗಿರುವ ಸಮುದಾಯಗಳಿಗೆ ಹೊಡೆತವಾಗಿದೆ. ಇದರಿಂದ ವಕ್ಫ್ ಆಸ್ತಿಗಳು ಸಮುದಾಯದ ಮೂಲ ಉದ್ದೇಶಗಳನ್ನು ಪೂರೈಸಲು ಅಗತ್ಯವಿರುವ ಸತತ ಆಡಳಿತಾತ್ಮಕ ಕ್ರಮಗಳು ಮತ್ತು ರಕ್ಷಣೆಗೆ ಬಲವಾದ ಬೇಡಿಕೆ ಮೂಡಿದೆ.

ಸಮುದಾಯಗಳ ಮೇಲೆ ಪ್ರಭಾವ

ವಕ್ಫ್ ಆಸ್ತಿಗಳ ಮೇಲಿನ ವಿವಾದಗಳು ಸಾಮಾಜಿಕ ಉದ್ವಿಗ್ನತೆ ಮತ್ತು ಎರಡು ಧರ್ಮಗಳ ಸಂಘರ್ಷಗಳಿಗೆ ಕಾರಣವಾಗಬಹುದು. ಈ ಆಸ್ತಿಗಳ ಕುರಿತಂತೆ ತಮ್ಮ ಹಕ್ಕುಗಳಿಗೆ ಬೆದರಿಕೆ ಇದೆ ಎಂದು ಜನಗಳು ಭಾವಿಸಿದಾಗ ಅಥವಾ ಸಂಪನ್ಮೂಲ ಹಂಚಿಕೆಯಲ್ಲಿ ಅನ್ಯಾಯವನ್ನು ಗ್ರಹಿಸಿದಾಗ, ಅದು ಸಮುದಾಯದ ಸದಸ್ಯರ ನಡುವೆ ವಿಭಜನೆ ಮತ್ತು ಹಗೆತನವನ್ನು ಉಂಟುಮಾಡಬಹುದು. ಇದಲ್ಲದೆ, ವೃತ್ತಿಪರ ತರಬೇತಿ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳಂತಹ ಅನೇಕ ಅಭಿವೃದ್ಧಿ ಕ್ರಮಗಳು ನಿಧಿಗಾಗಿ ವಕ್ಫ್ ಸಂಪನ್ಮೂಲಗಳನ್ನು ಅವಲಂಬಿಸಿವೆ. ವಕ್ಫ್ ಆಸ್ತಿಗಳ ನಿರ್ವಹಣೆ ಅಥವಾ ಲಭ್ಯತೆಯಲ್ಲಿನ ಅಡಚಣೆಗಳು ಈ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತವೆ, ಸಮುದಾಯದ ಅಭಿವೃದ್ಧಿ ಮತ್ತು ಪ್ರಗತಿಗೆ ಅವಕಾಶಗಳನ್ನು ಸೀಮಿತಗೊಳಿಸುತ್ತವೆ. ಅಂತಿಮವಾಗಿ, ವಕ್ಫ್ ಗುಣಲಕ್ಷಣಗಳು ಎದುರಿಸುತ್ತಿರುವ ಸವಾಲುಗಳು ತಕ್ಷಣದ ಸಂಪನ್ಮೂಲ ಲಭ್ಯತೆಯ ಮೇಲೆ ಪರಿಣಾಮ ಬೀರುವುದಲ್ಲದೆ ಸಾಮಾಜಿಕ ಒಗ್ಗಟ್ಟು ಮತ್ತು ಒಟ್ಟಾರೆ ಅಭಿವೃದ್ಧಿಯ ಪ್ರಯತ್ನಗಳಿಗೆ ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡುತ್ತದೆ.

ರೈತರ ಭೂಕಬಳಿಸುತ್ತಿರುವುದು ನಿಜವೇ?

ವಿಜಯಪುರದಲ್ಲಿ ಕೆಲವು ರೈತರ ಜಮೀನುಗಳು ವಕ್ಫ್‌ ಆಸ್ತಿಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸರ್ಕಾರ ಅಂತವರಿಗೆ ನೋಟಿಸ್‌ ಕೊಟ್ಟಿರುವುದು ನಿಜ. ಆದರೆ ಇದು ರಾಜ್ಯದಾದ್ಯಂತ ಸುದ್ದಿಯಾದ ಮೇಲೆ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಬಿಜೆಪಿಯವರು ತಮ್ಮದೇ ಸರ್ಕಾರದ ಅವಧಿಯಲ್ಲಿ 200ಕ್ಕೂ ಹೆಚ್ಚು ರೈತರಿಗೆ ವಕ್ಫ್‌ ನೋಟಿಸ್‌ ನೀಡಿ, ಈಗ ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸ. ವಕ್ಫ್‌ ನೀಡಿರುವ ನೋಟಿಸನ್ನು ಹಿಂಪಡೆಯುವಂತೆ ಸೂಚನೆ ನೀಡಿದ್ದೇನೆ. ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ. ಮತ್ತು ಯಾವುದೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ” ಎಂದು ರೈತರಿಗೆ ಮಾಧ್ಯಮಗಳ ಮೂಲಕ ಭರವಸೆ ನೀಡಿದ್ದಾರೆ.

ರೈತರಿಗೆ ಈ ರೀತಿ ನೋಟಿಸ್‌ ಕೊಟ್ಟಿದ್ದಾರೆ ಎಂದರೆ ಆ ಜಮೀನಿನ ಮೇಲೆ ಅವರಿಗೆ ಸ್ವಾಧೀನ ಇದೆ ಎಂಬ ಕಾರಣಕ್ಕಾಗಿಯೇ ಕೋರ್ಟ್‌ ನೋಟೀಸ್‌ ನೀಡಿರುತ್ತದೆ. ಆ ಸಂದರ್ಭದಲ್ಲಿ ರೈತರು ತಮ್ಮ ಮಾಲಿಕತ್ವವನ್ನು ನಿರೂಪಿಸುವ ಎಲ್ಲಾ ಅವಕಾಶಗಳು ಇರುತ್ತವೆ. ಆದರೆ ಕಾಂಗ್ರೆಸ್‌ ನೋಟಿಸ್‌ ನೀಡಿದೆ ಎಂದು ಖಂಡಿಸುತ್ತಿರುವ ಬಿಜೆಪಿ ಮುಖಂಡರು ಇಬ್ಬಗೆಯ ನ್ಯಾಯವನ್ನು ಅನುಸರಿಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2022ರ ಸೆಪ್ಟೆಂಬರ್ 17ನೇ ತಾರಿಕು ವಿಜಯಪುರದ ಅನೇಕ ರೈತರಿಗೆ ವಕ್ಫ್‌ ಬೋರ್ಡ್‌ ಆಸ್ತಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ್ದಾರೆ. ವಿಜಯಪುರದ ಬಡಿಯ್ ಜಮಾನ್ ಲಹೊರಿ, ಬಸವರಾಜು, ಉಮಾ, ದಯಾನಂದ್ ಅವರಿಗೆ ನೋಟಿಸ್ ಕೊಟ್ಟಿದೆ. ಅದೇ ದಿನ ರವಿ, ಶಾಂತ, ಸಂಜು, ಖಾಜಸಾಬ್, ಕೃಷ್ಣ ಎನ್ನುವವರೆಗೂ ಮತ್ತೊಂದು ನೋಟಿಸ್ ಕೊಟ್ಟಿದ್ದಾರೆ. ಗೋವಿಂದ್ ಮತ್ತು ಅಶೋಕ್ ಎನ್ನುವವರೆಗೂ ಪ್ರತ್ಯೇಕ ನೋಟಿಸ್ ಗಳು ಹೋಗಿವೆ.

ಅಂದರೆ ವಿಜಯಪುರ ಮಾತ್ರವಲ್ಲದೆ ರಾಜದಾದ್ಯಂತ ಹಲವು ರೈತರಿಗೆ ಬೊಮ್ಮಾಯಿ ಸರ್ಕಾರ ನೋಟಿಸ್ ಕೊಟ್ಟಿತ್ತು ಮಾತ್ರವಲ್ಲದೆ ನೋಟಿಸ್ ಅನ್ನು ಕೊಡದೆ ರೈತರಿಂದ ಏಕಾಏಕಿ ಭೂಮಿ ವಾಪಸ್ ತೆಗೆದುಕೊಂಡಿದ್ದಾರೆ. ಪಹಣಿ ಕಾಲಂ 9 ಮತ್ತು 11ರಲ್ಲಿ ಬದಲಾವಣೆ ಮಾಡಿದ್ದಾರೆ. ಕೆಲವರಿಗೆ ನೋಟಿಸ್ ಕೊಟ್ಟು, ಕೆಲವರಿಗೆ ನೋಟಿಸ್ ಕೊಡದೆ ವಕ್ ಆಸ್ತಿಗಳನ್ನು ವಾಪಸ್ ವಕ್ಫ್ ಬೋರ್ಡಿಗೆ ಕೊಡಿಸಿದ್ದಾರೆ. ಇಷ್ಟೆಲ್ಲ ಸರ್ಕಾರಿ ದಾಖಲೆಗಳು ಇದ್ದರೂ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ರಾಜ್ಯದ ಜನರಿಗೆ ಸುಳ್ಳು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ವಕ್ಫ್‌ ವಿಚಾರದಲ್ಲಿ ಭ್ರಷ್ಟಾಚಾರವಿರುವುದು ವಾಸ್ತವ. ಇತರ ದೇವಸ್ಥಾನ, ಮಂದಿರಗಳಂತೆ ಅಲ್ಲಿಯೂ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳು ಇದ್ದೇ ಇವೆ. ಹಾಗೆಯೇ ಇದರ ಫಲಾನುಭವಿಗಳು ಮತ್ತು ಅತಿಕ್ರಮಣ ಮಾಡಿದವರಲ್ಲಿ ಹಿಂದೂ-ಮುಸ್ಲಿಂ ಎರಡೂ ಸಮುದಾಯದ ರೈತರಿದ್ದಾರೆ. ಅದನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ವಕ್ಫ್‌ ಬೋರ್ಡ್ ಮತ್ತು ಮುಸ್ಲಿಂ ಸಮುದಾಯದ ಕಾನೂನಿನ ಪ್ರಕಾರ ಬಗೆಹರಿಸಿಕೊಳ್ಳುವುದು ಅತ್ಯಗತ್ಯ. ಅಂತಹ ಒಂದು ಪ್ರಕ್ರಿಯೆ ನಡೆಯುತ್ತಿರುವಾಗ, ಅದನ್ನು ಹಿಂದೂ ಮುಸ್ಲಿಂ ವಿಚಾರ ಮಾಡಲು ಹೊರಟಿರುವ ಕೋಮುವಾದಿ ಶಕ್ತಿಗಳಿಗೆ ಈ ರಾಜ್ಯದ ಹಿತಾಸಕ್ತಿಯಾಗಲಿ, ರೈತರ ಹಿತಾಸಕ್ತಿಯಾಗಲಿ ಇಲ್ಲದಿರುವುದು ಎದ್ದು ಕಾಣುತ್ತಿದೆ. ಮತ್ತು ಬಿಜೆಪಿ ಬೆಂಬಲಿಗರು “ದೇಶದಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆಯ ನಂತರ ಅತಿ ದೊಡ್ಡ ಆಸ್ತಿ ಹೊಂದಿರುವುದು ವಕ್ಫ್ ಇಲಾಖೆ. ಒಂದು ಸಾರಿ ವಕ್ಫ್ ಇಲಾಖೆಯವರು ಯಾವುದಾದರೂ ಆಸ್ತಿಯನ್ನು ತಮ್ಮದೆಂದು ತೀರ್ಮಾನಿಸಿ ಬಿಟ್ಟರೆ ಅದು ಅವರದ್ದೇ ಆಸ್ತಿಯಾಗಿಬಿಡುತ್ತದೆ” ಎಂಬ ಹಸಿ ಸುಳ್ಳೊಂದನ್ನು ಜನರಲ್ಲಿ ಹರಿಬಿಟ್ಟಿದ್ದಾರೆ.

ಈ ಹಿಂದೆ ವಕ್ಫ್‌ ವಿಚಾರವಾಗಿ ರಾಜ್ಯದ ರೈತರಿಗೆ ನೋಟಿಸ್‌ ನೀಡಿದಾಗ ರೈತ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿಯಂತಹ ಜನಪರ ಸಂಘಟನೆಗಳು ರೈತರ ಪರವಾಗಿ ದನಿ ಎತ್ತಿವೆಯೇ ಹೊರತು, ಈವರೆಗೂ ಬಿಜೆಪಿ ನಾಯಕರು ರೈತರ ಪರವಾಗಿ ಈ ವಿಚಾರದಲ್ಲಿ ನಿಲುವನ್ನು ತೆಗೆದುಕೊಂಡಿಲ್ಲ ಎಂಬುದನ್ನು ಗಮನಿಸಬೇಕು. ಈಗ ಉಪಚುನಾವಣೆ ಇರುವುದರಿಂದ ಈ ಘಟನೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸಮಯ ಸಾಧಕರು ಮತ್ತು ಸುಳ್ಳು ಹೇಳುವ ರಾಜಕೀಯ ನಾಯಕರು ಸೃಷ್ಟಿಸುತ್ತಿರುವ ಹುಸಿ ವಿವಾದಗಳನ್ನು ಜನರು ಎಚ್ಚರಿಕೆಯಿಂದ ಪರಿಗಣಿಸಬೇಕಿದೆ.


ಇದನ್ನು ಓದಿ: ಮುಸಲ್ಮಾನರ ಮೇಲೆ ಹಿಂದೂಗಳ ದಾಳಿ ಎಂದು ಹಾಸ್ಟೆಲ್‌ ಯುವಕರು ಪಟಾಕಿ ಸಿಡಿಸುವ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *