ಮುಸ್ಲಿಮ್ ಬಾಲಕರಿಬ್ಬರು ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. “ಭಾರತದವರು ಯಾರು ಎಂಬುದೇ ಈ ಜಗತ್ತಿಗೆ ಗೊತ್ತಿರಲ್ಲ. ಅಂತಹ ಪರಿಸ್ಥಿತಿಗೆ ಇವರನ್ನು ತಳ್ಳುತ್ತೇವೆ. ಇವರನ್ನು ಸರ್ವನಾಶ ಮಾಡಿ ಬಿಡುತ್ತೇವೆ. ಕೇವಲ ಮುಸಲ್ಮಾನರು ಮಾತ್ರ ನೆನಪಿರಬೇಕು ಹಾಗೆ ಮಾಡುತ್ತೇವೆ….” ಎಂದು ಹೇಳುವ ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಮದರಸಾಗಳನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ. ಮದರಸಾಗಳನ್ನು ನಿಷೇಧಿಸಬೇಕು; ಭಾರತ ಸರ್ಕಾರವು ಮದರಸಾಗಳ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂಬ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ವೊಂದರಲ್ಲಿ,
“ಇದು ಮದರಸಾಗಳಿಂದ ಪ್ರಾರಂಭವಾಗುತ್ತದೆ. ನಂತರ ಇವರನ್ನು ಜಿಹಾದಿ ಮತ್ತು ಭಯೋತ್ಪಾದಕರನ್ನಾಗಿ ಸಿದ್ಧಪಡಿಸಲಾಗುತ್ತದೆ. ಅವರಿಗೆ ಇಸ್ಲಾಮೀಕರಣ ಮತ್ತು ಶಿಕ್ಷಣದ ಹೆಸರಿನಲ್ಲಿ ನಾಸ್ತಿಕರನ್ನು ಕೊಲ್ಲುವುದನ್ನು ಮೊದಲ ಪಾಠವಾಗಿ ಕಲಿಸಲಾಗುತ್ತದೆ. ಈಗ ಇವರ ತಯಾರಿಯೂ ಪೂರ್ಣಗೊಂಡಿದೆ. ಗಜ್ವಾ ಏ ಹಿಂದ್: ಹಿಂದೂಗಳ ಹಿಂದೂಸ್ತಾನವನ್ನು ಇಸ್ಲಾಮೀ ದೇಶವಾಗಿ ಬದಲಾಯಿಸಲು ಸಿದ್ಧವಾಗಿದ್ದಾರೆ. ಜಾತ್ಯತೀತ ಹಿಂದೂಗಳು ಈ ಮದರಸಾಗಳಲ್ಲಿನ ಶಿಕ್ಷಣದ ನೈಜತೆಯನ್ನು ನೋಡಿ, ಈ ಮಕ್ಕಳ ಮನಸ್ಸಿನಲ್ಲಿ ಏನು ತುಂಬಿದೆ ಎಂಬುದನ್ನು ನೋಡಿಕೊಳ್ಳಿ. ಇದರಲ್ಲಿ ನಮ್ಮ ಆತಿಥ್ಯವೂ ತಪ್ಪಿತಸ್ಥ, ಹಿಂದೂಗಳ ಹತ್ಯೆಗೆ ಮತ್ತು ಭಾರತದ ನಾಶಕ್ಕೆ ನಮ್ಮ ಸರಕಾರವು ಮದರಸಾಗಳಿಗೆ ನಮ್ಮ ತೆರಿಗೆಯಿಂದ ಕೋಟ್ಯಂತರ ರೂಪಾಯಿ ಅನುದಾನವನ್ನು ನೀಡುತ್ತದೆ. ಇಂದು ಬಹಿರಂಗವಾಗಿ ನಡೆಯುತ್ತಿರುವ ಈ ಬೆಳವಣಿಗೆಯು ಇವತ್ತೋ ನಾಳೆಯೋ ಈ ದೇಶದ ಅವನತಿ ಕಟ್ಟಿಟ್ಟ ಬುತ್ತಿ. ಭಾರತ ಸರ್ಕಾರವು ಮದರಸಾಗಳ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು. ಜೈ ಹಿಂದೂ ರಾಷ್ಟ್ರ” ಎಂದು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣಾ.
ಫ್ಯಾಕ್ಟ್‌ಚೆಕ್
“ಮದರಸಾದ ಮಕ್ಕಳು ಭಾರತದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಪಾಕಿಸ್ತಾನದ್ದು. ಇದರಲ್ಲಿ ಮಾತಾಡುತ್ತಿರುವವರು ಭಾರತೀಯರಲ್ಲ ಬದಲಾಗಿ ಪಾಕಿಸ್ತಾನಿ ಬಾಲಕರು” ಎಂಬುದನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡವು ಪರಿಶೀಲಿಸಿದೆ.
ಮೊದಲನೆಯದಾಗಿ ನಾವು ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೀಡಿಯೊದಲ್ಲಿ, ವ್ಯಕ್ತಿಯ ಕೈಯಲ್ಲಿರುವ ಮೈಕ್‌ನ್ನು ಗಮನಿಸಿದ್ದೇವೆ, ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುವ ವೇಳೇ ಮೈಕ್ ನಲ್ಲಿ ‘D7 NEWS’ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.
ಇದರ ಆಧಾರದ ಮೇಲೆ, ನಾವು ನಮ್ಮ ತನಿಖೆಯನ್ನು ಮುಂದುವರಿಸಿದ್ದು, Google ನಲ್ಲಿ ‘D7 NEWS’ ಎಂದು ಹುಡುಕಾಟ ನಡೆಸಿದಾಗ ನಮಗೆ ‘ D7 NEWS PAKISTAN OFFICIAL ‘ ಹೆಸರಿನ ಈ ಯೂಟ್ಯೂಬ್ ಚಾನೆಲ್ ಲಭಿಸಿದೆ. ಈ ಅಧಿಕೃತ ಚಾನೆಲ್‌ನಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ನೀವು ಹಲವು ವಿಡಿಯೋಗಳಲ್ಲಿ ಕಾಣಬಹುದು.
ಈ ಚಾನಲ್‌ನಲ್ಲಿ ಹುಡುಕಾಟ ನಡೆಸಿ ವೈರಲ್ ವಿಡಿಯೋವನ್ನು ನಾವು ಪತ್ತೆಹಚ್ಚಿದ್ದೇವೆ. ಆಗಸ್ಟ್ 31, 2024 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ವರದಿಗಾರ ಜನರೊಂದಿಗೆ ಮಾತನಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಅವರಲ್ಲಿ ಈ ಮಕ್ಕಳೂ ಸೇರಿದ್ದಾರೆ. ಈ ವರದಿಗಾರ ಜನರಲ್ಲಿ ಪ್ರಶ್ನೆ ಕೇಳುವಾಗ “ಐದು ವರ್ಷಗಳಲ್ಲಿ ನಾವು ಭಾರತದ ಎಲ್ಲಾ ಮುಸ್ಲಿಮರನ್ನು ನಾಶಪಡಿಸುತ್ತೇವೆ ಎಂದು ಅವರು(ಯೋಗಿ) ಹೇಳಿದ್ದಾರೆ. ಅವರು ಮುಸ್ಲಿಮರನ್ನು ನಿರ್ನಾಮ ಮಾಡಲು ಸಾಧ್ಯವೇ?” ಏಂದು ಪ್ರಶ್ನಿಸಿದ್ದು ಈ ಪ್ರಶ್ನೆಗೆ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಈ ಯೂಟ್ಯೂಬ್ ಚಾನೆಲ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ , ಇದನ್ನು ಪಾಕಿಸ್ತಾನದಿಂದ ಚಿತ್ರೀಕರಿಸಿದ ಬಗ್ಗೆ ಮಾಹಿತಿ ಲಭ್ಯವಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ವೀಡಿಯೊ ಭಾರತದಲ್ಲಿ ಚಿತ್ರಿಸಿದ್ದಲ್ಲ, ಬದಲಾಗಿ ಪಾಕಿಸ್ತಾನದಲ್ಲಿ ಚಿತ್ರೀಕರಿಸಿದ್ದು. ಪಾಕಿಸ್ತಾನದ ವಿಡಿಯೋವನ್ನು ಭಾರತೀಯ ಮುಸ್ಲಿಮರೊಂದಿಗೆ ಜೋಡಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ನಕಲಿ ಪೋಸ್ಟ್ ಶೇರ್ ಮಾಡಿದ ಫೇಸ್ ಬುಕ್ ಬಳಕೆದಾರರು ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲನೆ ನಡೆಸಿಕೊಳ್ಳುವುದು ಉತ್ತಮ.
ಇದನ್ನು ಓದಿದ್ದೀರಾ? : Fact Check : ರೋಗಿಗಳಿಗೆ ರಕ್ತ ಪೂರೈಸಲು ಕೇಂದ್ರ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.