Fact Check | ಬ್ರೆಜಿಲ್ ಸರ್ಕಾರವು ಬೈಕ್‌ನಲ್ಲಿ ಬರುವ ದರೋಡೆಕೋರರನ್ನು ಕೊಲ್ಲಲು ಅನಿಮತಿ ನೀಡಿದೆ ಎಂಬುದು ಸುಳ್ಳು

“ರಸ್ತೆ ಪ್ರಯಾಣಿಕರನ್ನು ದರೋಡೆ ಮಾಡಲು ಪ್ರಯತ್ನಿಸುವ ಬೈಕ್ ಸವಾರರು ಮತ್ತು ಇನ್ನಿತರ ದರೋಡೆಕೋರರನ್ನು ಕೊಲ್ಲಲು ಬ್ರೆಜಿಲ್ ಸರ್ಕಾರ ಅನುಮತಿಯನ್ನು ನೀಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳಲ್ಲಿ “ಬ್ರೆಜಿಲ್ ಸರ್ಕಾರದ ಹೊಸ ಆದೇಶದಿಂದಾಗಿ ಕಾರಿನ ಸವಾರರು ಬೈಕ್‌ನಲ್ಲಿ ಬರುವ ಎಲ್ಲಾ ದರೋಡೆಕೋರರನ್ನು ಕೊಲ್ಲುತ್ತಿದ್ದಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ವಿವಿಧ ವಿಡಿಯೋ ಕ್ಲಿಪ್‌ಗಳ ಕೊಲಾಜ್‌ ಆಗಿರುವುದನ್ನು ಗಮನಿಸಬಹುದಾಗಿದೆ. ಈ ಬಹುತೇಕ ಕ್ಲಿಪ್‌ಗಳಲ್ಲಿ ಕಾರಿನ ಸವಾರರು ಬೈಕ್ ಸವಾರರ ಮೇಲೆ ಕಾರು ಚಲಾಯಿಸಿ ಕೊಲ್ಲುವುದನ್ನು ಮತ್ತು ಕೊಲೆ ಯತ್ನಕ್ಕೆ ಪ್ರಯತ್ನಿಸುವುದನ್ನು ಕಾಣಬಹುದಾಗಿದೆ. ಹಾಗಾಗಿ ಈ ವಿಡಿಯೋ ನೋಡಿದ ಬಹುತೇಕರು ಇದು ನಿಜವಿರಬಹುದು ಎಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ನಲ್ಲಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು, ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಬ್ರೆಜಿಲ್ ಅಂತಹ ಕಾನೂನನ್ನು ಅಂಗೀಕರಿಸಿದ ಬಗ್ಗೆ ಅಥವಾ ಬ್ರೆಜಿಲಿಯನ್ ಸರ್ಕಾರವು ಜನರು ತಮ್ಮ ಕಾರುಗಳಿಂದ ಮೋಟರ್‌ ಸೈಕಲ್‌ ದರೋಡೆಕೋರರನ್ನು ಕೊಲ್ಲಲು ಅನುಮತಿಸಿದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಅಲ್ಲದೆ, ಈ ಹುಡುಕಾಟ ಪ್ರಕ್ರಿಯೆಯಲ್ಲಿ, ಬ್ರೆಜಿಲ್ 1988 ರಲ್ಲಿ ಮಿಲಿಟರಿಗೆ ಸಂಬಂಧಿಸಿದ ಎಲ್ಲಾ ಮಿಲಿಟರಿಯೇತರ ಅಪರಾಧಗಳಿಗೆ ಮರಣ ದಂಡನೆಯನ್ನು ರದ್ದುಗೊಳಿಸಿದೆ ಎಂಬ ಅಂಶವು ಪತ್ತೆಯಾಗಿದೆ. ಇದರ ಪ್ರಕಾರ ಬ್ರೆಜಿಲ್‌ ಸರ್ಕಾರ ಮರಣ ದಂಡನೆಯ ವಿರುದ್ಧ ಇದೆ ಎಂಬುಸು ಸ್ಪಷ್ಟವಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಪರಿಶೀಲನೆ ನಡೆಸಿದಾಗ ಈ ವಿಡಿಯೋಗಳು ಬೇರೆ ಬೇರೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದುಬಂದಿದೆ. ಈ ವಿವಿಧ ವಿಡಿಯೋಗಳು ಬ್ರೆಜಿಲ್‌ನ ಬೇರೆ ಬೇರೆ ಪ್ರದೇಶಗಳಿಂದ ಬಂದಿದೆ ಎಂಬುದು ತಿಳಿದು ಬಂದಿದ್ದು, ಇವು ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದು ವಿವಿಧ ವರದಿಗಳಿಂದ ಸ್ಪಷ್ಟವಾಗಿದೆ. ಇನ್ನು ಈ ಎಲ್ಲಾ ವಿಡಿಯೋ ಕ್ಲಿಪ್‌ಗಳು ಕೂಡ ಕಾರ್‌ನಲ್ಲಿರುವ ಸವಾರರು ಬೈಕ್‌ ಸವಾರರ ಮೇಲೆ ದಾಳಿ ಮಾಡುವುದಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಹಲವರು ಬ್ರೆಜಿಲ್‌ನಲ್ಲಿ, ಈ ರೀತಿಯ ಕಾನೂನು ಜಾರಿಗೆ ತರಲಾಗಿದೆ ಎಂದು ನಂಬಿಕೊಂಡಿದ್ದಾರೆ. ಈ ಕುರಿತು ಆಂಗ್ಲ ಸುದ್ದಿ ಸಂಸ್ಥೆ ಫ್ಯಾಕ್ಟ್‌ಲೀ ಜಿಲಿಯನ್ ಫ್ಯಾಕ್ಟ್-ಚೆಕಿಂಗ್ ಸಂಸ್ಥೆ ‘Aos Fatos’ ಅನ್ನು ಸಂಪರ್ಕಿಸಿದ್ದು ಅದು ಕೂಡ  ಮೋಟಾರು ಸೈಕಲ್‌ಗಳಲ್ಲಿ ಕಳ್ಳತನ ಮಾಡುವವರನ್ನು ಕೊಲ್ಲಲು ಬ್ರೆಜಿಲ್‌ನಲ್ಲಿ ಯಾವುದೇ ಕಾನೂನು ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಬ್ರೆಜಿಲ್ ಸರ್ಕಾರವು ತನ್ನ ನಾಗರಿಕರನ್ನು ಕಳ್ಳತನ ಮಾಡುವ ಅಥವಾ ಮೋಟರ್‌ ಸೈಕಲ್‌ಗಳಲ್ಲಿ ಬರುವ ದರೋಡೆಕೋರರನ್ನು ಕೊಲ್ಲಲು ಅನುಮತಿ ನೀಡಿದೆ ಎಂಬುದು ಸುಳ್ಳು. ಆ ರೀತಿಯ ಯಾವುದೇ ಕಾನೂನನ್ನು ಬ್ರೆಜಿಲ್‌ ಜಾರಿಗೆ ತಂದಿಲ್ಲ. ಸುಳ್ಳು ಸುದ್ದಿಗಳೊಂದಿಗೆ ವೈರಲ್‌ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಪೋಸ್ಟ್‌ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಪೀರ್‌ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *