ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಲೆಬನಾನ್‌ನ ಹೆಜ್ಬುಲ್ಲಾ ಉಗ್ರಸಂಘಟಣೆಯ ನಡುವೆ ನಡೆಯುತ್ತಿರುವ ಸಂಘರ್ಷ ಪ್ರತಿನಿತ್ಯವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆ ಈ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ರೀತಿಯಾದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿಯಲ್ಲಿ ಹೆಜ್ಬುಲ್ಲಾ ಉಗ್ರರು ಇಸ್ರೇಲ್ ವಿರುದ್ಧ ಹೋರಾಡಲು ತಮ್ಮ ಬಳಿ ಇರುವ ಆಯುಧಗಳನ್ನು ಪ್ರದರ್ಶಿಸಿ ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋ ನೋಡಿದ ಹಲವು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ನಿಜವಿಂದು ಭಾವಿಸಿ ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಜೊತೆಗೆ ಹೆಜ್ಬುಲ್ಲ ಉಗ್ರರು ಇಸ್ರೆಲ್ ಅನ್ನು ಸೋಲಿಸಲು ಸಂಪೂರ್ಣವಾಗಿ ತಯಾರಾಗಿದ್ದಾರೆ ಎಂಬ ಶೀರ್ಷಿಕೆಯನ್ನು ನೀಡಿ, ವಿವಿಧ ರೀತಿಯ ಅಭಿಪ್ರಾಯಗಳೊಂದಿಗೆ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 21 ಮೇ 2023 ರಂದು ಎಕ್ಸ್‌ನಲ್ಲಿ(ಈ ಹಿಂದಿನ ಟ್ವಿಟರ್) ಹಂಚಿಕೊಳ್ಳಲಾದ ಪೋಸ್ಟ್‌ವೊಂದರಲ್ಲಿ ವಿಡಿಯೋವೊಂದು ಕಂಡುಬಂದಿದೆ. ಆ ಮೂಲಕ ವೈರಲ್ ಫೋಟೋ ಈ ವಿಡಿಯೋವಿನ ಒಂದು ಭಾಗ ಎಂಬುದು ತಿಳಿದುಬಂದಿದೆ. ಇದನ್ನು ಒಂದು ವರ್ಷದ ಹಿಂದೆ ಹಂಚಿಕೊಳ್ಳಲಾಗಿದ್ದು, ಇದು ಇತ್ತೀಚೆಗಿನ ಇಸ್ರೇಲ್ ಮತ್ತು ಹೆಜ್ಬುಲ್ಲಾ ಉಗ್ರ ಸಂಘಟನೆ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಾವು ವಿವಿಧ ಕೀವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದವು, ಈ ವೇಳೆ ಉಗ್ರಗಾಮಿ ಚಟುವಟಿಕೆ ಮತ್ತು ಪ್ರಪಂಚದಾದ್ಯಂತ ಶಸ್ತ್ರ ಸಂಘರ್ಷದ ವಿಶ್ಲೇಷಣೆಯ ಮೇಲೆ ಕೇಂದ್ರೀಕರಿಸಿ ವರದಿ ಮಾಡುವ ಮಿಲಿಟೆಂಟ್ ವೈರ್ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ವೈರಲ್ ಚಿತ್ರವು ಇದ್ದು 21 ಮೇ 2023 ರಂದು ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಮಿಲಿಟರಿ ಡ್ರಿಲ್ ಅನ್ನು ನಡೆಸಿದೆ ಎಂದು ಉಲ್ಲೇಖಿಸಲಾಗಿದೆ.
ನಾವು ಈ ಮಿಲಿಟರಿ ಡ್ರಿಲ್ ಕುರಿತು ಹುಡುಕಾಟ ನಡೆಸಿದಾಗ, ಈ ಬಗ್ಗೆ ಹಲವಾರು ಸುದ್ದಿ ಸಂಸ್ಥೆಗಳು ಪ್ರಕಟಿಸಿದ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಅದರ ಪ್ರಕಾರ 21 ಮೇ 2023 ರಂದು ಇಸ್ರೇಲ್ ಗಡಿಯಿಂದ ಉತ್ತರಕ್ಕೆ ಕೇವಲ ಹನ್ನೆರಡು ಮೈಲುಗಳಷ್ಟು ದೂರದಲ್ಲಿರುವ ದಕ್ಷಿಣ ಲೇಬನಾನ್ ಹಳ್ಳಿಯಾದ ಆರಾಮ್ಟಾದ ಶಿಬಿರವೊಂದರಲ್ಲಿ ಹೆಜ್ಬುಲ್ಲಾ ಉಗ್ರ ಸಂಘಟನೆ ಮಿಲಿಟರಿ ವ್ಯಾಯಾಮವನ್ನು ನಡೆಸಿದೆ ಎಂದು ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಆಗುತ್ತಿರುವ ಫೋಟೋ 21 ಮೇ 2023ರ ಹೆಜ್ಫುಲ್ಲಾದ ಮಿಲಿಟರಿ ಡ್ರಿಲ್‌ಗೆ ಸಂಬಂಧಿಸಿದೆ. ಇದು ವಿಡಿಯೋದ ಆಯ್ದ ಭಾಗದಿಂದ ನಿರ್ಮಿಸಲಾದ ಫೋಟೋವಾಗಿದೆ. ಇದಕ್ಕೂ ಇತ್ತೀಚೆಗಿನ ಇಸ್ರೇಲ್ ಮತ್ತು ಲೆಬನಾನ್ ಸಂಘರ್ಷಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
ಇದನ್ನೂ ಓದಿ : “OBC, ST ಮತ್ತು SC ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವೇಶ್ಯೆಯರನ್ನಾಗಿ ಮಾಡಬೇಕು” ಎಂದು ಗೋಳ್ವಾಲ್ಕರ್ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.