“ಲಾರೆನ್ಸ್ ಬಿಷ್ಣೋಯ್ ಪರವಾಗಿ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ್ದಾರೆ. ಆ ಮೂಲಕ ದೇಶದಲ್ಲಿ ಢಕಾಯಿತನೊಬ್ಬನಿಗೆ ಬೆಂಬಲವನ್ನು ನೇರವಾಗಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂಬುದನ್ನು ಒಪ್ಪಿಕೊಂಡಿದೆ.” ಎಂದು ರಾಜನಾಥ ಸಿಂಗ್ ಅವರ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ” ರಾಜನಾಥ್ ಸಿಂಗ್ ಅವರು ಲಾರೆನ್ಸ್ ಬಿಷ್ಣೋಯ್ ಅನ್ನು ಯಾರು ಕೂಡ ಮುಟ್ಟಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ
ರಾಜನಾಥ್ ಸಿಂಗ್ ಅವರ ಧ್ವನಿ ಇರುವ ವಿಡಿಯೋ ಕ್ಲಿಪ್ ಅನ್ನು ನೋಡಿದ ಹಲವು ಮಂದಿ ಇದು ನಿಜವಿರಬಹುದು ಎಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸಾಕಷ್ಟು ಮಂದಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಕೂಡ ಹೊರಹಾಕಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಹಲವು ರೀತಿಯ ಚರ್ಚೆಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಾಕಿದೆ. ಹೀಗೆ ಹಂಚುಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು, ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವಿಡಿಯೋವಿನ ವಿವಿಧ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ರಾಜನಾಥ್ ಸಿಂಗ್ ಅವರ ಅಧಿಕೃತ YouTube ಚಾನಲ್ನಲ್ಲಿ 29 ಜನವರಿ 2020 ರಂದು ಲೈವ್ ಆಗಿರುವ ವಿಡಿಯೋವೊಂದು ಕಂಡು ಬಂದಿದೆ. ಇದರಲ್ಲಿ ರಾಜನಾಥ ಸಿಂಗ್ ಅವರು ದೆಹಲಿಯ ಆದರ್ಶ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ವಿಡಿಯೋದ 47ನೇ ನಿಮಿಷದಲ್ಲಿ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಭಾರತದಲ್ಲಿರುವ ಮುಸಲ್ಮಾನರು ಈ ದೇಶದ ಪ್ರಜೆಗಳು. ಅವರ ಪೌರತ್ವವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ರಕ್ಷಣಾ ಸಚಿವನಾಗಿ ಹೇಳುತ್ತಿದ್ದೇನೆ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಇದು ನಾನು ನಿಮಗೆ ನೀಡುತ್ತಿರುವ ಭರವಸೆ ಎಂದು ಹೇಳಿಕೆ ನೀಡಿದ್ದಾರೆ. ಇಲ್ಲಿ ಎಲ್ಲಿಯೂ ಕೂಡ ಅವರು ಲಾರೆನ್ಸ್ ಬಿಷ್ಣೋಯ್ ಹೆಸರನ್ನ ಉಲ್ಲೇಖಿಸಲಾಗಿಲ್ಲ. ಈ ಬಗ್ಗೆ ಹೆಚ್ಚಿನ ಹುಡುಕಾಟವನ್ನು ನಡೆಸಿದಾಗ, 30 ಜನವರಿ 2020 ರಂದು ಆಜ್ತಕ್ ಸುದ್ದಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯೊಂದು ಕಂಡುಬಂದಿದ್ದು, ಅದರಲ್ಲೂ ಕೂಡ ಇದೇ ಅಂಶವನ್ನು ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಲಾರೆನ್ಸ್ ಬಿಷ್ಣೋಯ್ ಪರವಾಗಿ ಮಾತನಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. 29 ಜನವರಿ 2020 ರಂದು ಮುಸಲ್ಮಾನರನ್ನು ಉದ್ದೇಶಿಸಿ ಮಾತನಾಡಿದ ವಿಡಿಯೋವೊಂದನ್ನು ಎಡಿಟ್ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check: ದೀಪಾವಳಿ ಆಫರ್: ಕೇವಲ 99 ರೂಗೆ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ಸಿಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.