Fact Check : ಯೋಗಿ ಆದಿತ್ಯನಾಥ್‌ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ ಮುಸ್ಲಿಮರಿಗೆ ಶಿಕ್ಷೆ ನೀಡಿದ್ದಾರೆ ಎಂದು ಪಾಕಿಸ್ತಾನದ ಹಳೆಯ ವಿಡಿಯೋ ಹಂಚಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜಘಾತುಕ ಶಕ್ತಿಗಳ ವಿರುದ್ದ ಯುದ್ಧವನ್ನೇ ಸಾರಿದ್ದಾರೆ. ತಪ್ಪು ಮಾಡಿರುವ ಮುಸ್ಲಿಂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರಿಂದಾಗಿ “ಬುಲ್ಡೋಜರ್ ಬಾಬಾ” ಎಂದು ಕೆಲವರಿಂದ ಶ್ಲಾಘನೆಗೆ ಒಳಗಾಗಿದ್ದಾರೆ. ಆದಿತ್ಯನಾಥ್‌ ಕಾನೂನುಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸಿದ್ದಾರೆ. ಆದ್ದರಿಂದಾಗಿ ಹೋರಾಟಗಾರರು, ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಯೋಗಿ ಆದಿತ್ಯನಾಥ್ ಅವರು ಅಪರಾಧಿಗಳಿಗೆ ಶಿಕ್ಷೆ ನೀಡುತ್ತಿದ್ದಾರೆ ಎಂದು ಹೇಳಿ ವಿಡಿಯೊ ವೈರಲ್

ಅಪರಾಧ  ಕೃತ್ಯಗಳಲ್ಲಿ ಭಾಗಿಯಾಗಿರುವ ಮುಸ್ಲಿಮರಿಗೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ “ಮುರ್ಗಾ” ಎನ್ನುವ ಶಿಕ್ಷೆಯನ್ನು ವಿಧಿಸಿ ಕಿವಿ ಹಿಡಿಸಿ ನಡೆಸಿದ್ದಾರೆ ಎಂದು ಕೆಲವು ಬಳಕೆದಾರರು ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವನ್ನು ಪರಿಶೀಲಿಸಲು ನಮ್ಮ ಕನ್ನಡ ಫ್ಯಾಕ್ಟ್‌ ಚೆಕ್‌ ತಂಡವು ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಬಳಸಿಕೊಂಡು ಹುಡುಕಾಟ ನಡೆಸಿದಾಗ, 2020ರ ಮಾರ್ಚ್ 29ರಂದು “ಉರ್ದು ಅಪ್‌ಡೇಟ್ಸ್” ಎಂಬ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೊರೆತಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ “ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರನ್ನು ಮನ್ಸೆಹ್ರಾ ಪೊಲೀಸರು ಹೇಗೆ ಶಿಕ್ಷಿಸುತ್ತಿದ್ದಾರೆ” ಎಂದು ಬರೆದು ಹಂಚಿಕೊಳ್ಳಲಾಗಿತ್ತು.

ಇದನ್ನೇ ಆಧಾರವಾಗಿ ತೆಗೆದುಕೊಂಡು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಜಿಯೋ ನ್ಯೂಸ್‌ 2020ರ ಮಾರ್ಚ್ 29ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದ ವರದಿ ಲಭಿಸಿದೆ.

ಈ ವಿಡಿಯೋದ ವರದಿಯಲ್ಲಿ, ವೈರಲ್ ವಿಡಿಯೋದ ಪೂರ್ಣ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಅದು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಮನ್ಸೆಹ್ರಾ ಜಿಲ್ಲೆಯಲ್ಲಿ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಗಿಸಿ ಸಿಕ್ಕಿಬಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ಎಲ್ಲರಿಗೂ “ಮುರ್ಗಾ” ಶಿಕ್ಷೆಯನ್ನು ನೀಡಿದ್ದಾರೆ ಎಂದು ಉಲ್ಲೇಖವಾಗಿದೆ.

ಸಾಮಾನ್ಯವಾಗಿ ಈ ಶಿಕ್ಷೆಯ ಬಗ್ಗೆ ಹೇಳುವುದಾದರೆ,  ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಜಾರಿಯಲ್ಲಿರುವ “ಮುರ್ಗಾ” ಶಿಕ್ಷೆಯಲ್ಲಿ ( ಕಿವಿ ಹಿಡಿಯುವ) ನಡು ಬಗ್ಗಿಸಿ ಮೊಣಕಾಲುಗಳ ಹಿಂದಿನಿಂದ ಎರಡೂ ಕೈಗಳನ್ನು ಮೇಲೆ ತಂದುಕೊಂಡು ಕಿವಿಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಹುಂಜ ನಡೆಯುವ ರೀತಿಯಲ್ಲಿ ಶಿಕ್ಷೆಯನ್ನು ವಿಧಿಸುವ ಕ್ರಿಯೆಗೆ ಮುರ್ಗಾ ಶಿಕ್ಷೆ ಎಂದು ಹೇಳಲಾಗುತ್ತದೆ.

ಮನ್ಸೆಹ್ರಾ ಪೊಲೀಸರು 2020ರ ಮಾರ್ಚ್ 30ರಂದು ಕೆಲವು ಪೊಲೀಸರು ಟ್ವಿಟ್ಟರ್‌ಗೆ ಪ್ರತಿಕ್ರಿಯಿಸಿ, ಜನರನ್ನು ನಡೆಸಿಕೊಂಡಿರುವ ಕ್ರಮ ಖಂಡನೀಯವಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಮನ್ಸೆಹ್ರಾ ಜಿಲ್ಲೆಯಲ್ಲಿ ಕೊರೋನಾ ಸಂದರ್ಭದಲ್ಲಿ ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ನೀಡಿದ ಮುರ್ಗಾ ಶಿಕ್ಷೆಯನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಪರಾದಿಗಳಿಗೆ ನೀಡಿರುವ ಶಿಕ್ಷೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಸ್ಪಷ್ಟವಾಗಿ ತಿಳಿಯದೇ ಹಂಚಿಕೊಳ್ಳಬೇಡಿ.


ಇದನ್ನು ಓದಿ :

Fact Check : ಬಾಬಾ ಸಿದ್ದಿಕಿ ಹತ್ಯೆಯ ನಂತರ ʼಸಲ್ಮಾನ್ ಖಾನ್ ಭಯಭೀತರಾಗಿದ್ದಾರೆʼ ಎಂದು ಕೋವಿಡ್‌ ಲಾಕ್‌ಡೌನ್‌ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *