ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಅಕ್ಟೋಬರ್ 24 ರಿಂದ 26 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಜರ್ಮನಿಯ ವಿದೇಶಾಂಗ ವ್ಯವಹಾರಗಳ ಸಚಿವೆ ಅನ್ನಾಲೆನಾ ಬೇರ್ಬಾಕ್ ಮತ್ತು ಹಲವಾರು ಅಧಿಕಾರಿಗಳು ಸಹ ಆಗಮಿಸಿದ್ದರು. ಈ ಭೇಟಿಯ ಸಮಯದಲ್ಲಿ, ಶೋಲ್ಜ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ವ್ಯಾಪಕ ಚರ್ಚೆಯನ್ನು ನಡೆಸಿದ್ದಾರೆ.
ಆದರೆ, ಅನ್ನಾಲೆನಾ ಬೇರ್ಬಾಕ್ ವಿಮಾನದಿಂದ ಇಳಿಯುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಮಾನದಿಂದ ಇಳಿದ ನಂತರ, ಅವಳು ಭದ್ರತಾ ಸಿಬ್ಬಂದಿಗೆ ಏನನ್ನೋ ಹೇಳುತ್ತಿರುವುದು ಕೇಳಿಸುತ್ತದೆ. ಕೆಲವು ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು”ಜರ್ಮನ್ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರು ಭಾರತಕ್ಕೆ ಬಂದಾಗ ಟಾರ್ಮಾಕ್ನಲ್ಲಿ ಯಾವುದೇ ಔಪಚಾರಿಕ ಸ್ವಾಗತ ಇಲ್ಲದಿರುವುದನ್ನು ಕಂಡು ಆಶ್ಚರ್ಯಚಕಿತರಾದರು” ಎಂದು ಬರೆದಿದ್ದಾರೆ. ಅನೇಕರು ಈ ವೀಡಿಯೊ ಚೀನಾದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಫ್ಯಾಕ್ಟ್ ಚೆಕ್:
ವೈರಲ್ ವಿಡಿಯೋ ಜನವರಿ 12 ರಂದು ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಆದ್ದರಿಂದ ಇದು ಅನ್ನಾಲೆನಾ ಬೇರ್ಬಾಕ್ ಅವರು ಭಾರತ ಅಥವಾ ಚೀನಾ ಭೇಟಿ ನೀಡಿದ ಸಂದರ್ಭದ್ದಲ್ಲ.
ನಾವು ವೈರಲ್ ವೀಡಿಯೊದಿಂದ ಕೆಲವು ಕೀಫ್ರೇಮ್ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅಕ್ಟೋಬರ್ 28 ರಂದು ಎಕ್ಸ್ ಖಾತೆಯಿಂದ ಹಂಚಿಕೊಂಡ ಅದೇ ವಿಡಿಯೋವಿಗೆ ನಮ್ಮನ್ನು ನಿರ್ದೇಶಿಸಿತು. ಈ ವಿಡಿಯೋ ತುಣುಕು ಚೀನಾದ್ದಾಗಿದೆ ಎಂದು ಅದು ಉಲ್ಲೇಖಿಸಿದೆ. ಆದಾಗ್ಯೂ, ಪೋಸ್ಟ್ನಲ್ಲಿನ ಕಮುನಿಟಿ ನೋಟ್ನಲ್ಲಿ ಈ ವೀಡಿಯೊವನ್ನು ಈ ವರ್ಷದ ಜನವರಿಯಲ್ಲಿ ಮಲೇಷ್ಯಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಮೇಲಿನ ಮಾಹಿತಿಯ ಆಧಾರದ ಮೇಲೆ,ಇನ್ನಷ್ಟು ಹುಡುಕಾಟ ನಡೆಸಿದಾಗ ಜನವರಿ 19 ರಂದು ಆಗ್ನೇಯ ಏಷ್ಯಾಕ್ಕಾಗಿ ಜರ್ಮನ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಖಾತೆಯಿಂದ ಹಂಚಿಕೊಂಡ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. “ಪಾಲುದಾರರಿಗೆ ಭೇಟಿ – ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರ ಆಗ್ನೇಯ ಏಷ್ಯಾ ಭೇಟಿಯ ವಿಡಿಯೋವನ್ನು ಆನಂದಿಸಿ” ಎಂದು ಪೋಸ್ಟ್ ಹೇಳಿದೆ.
A visit to partners – enjoy the video recap of Foreign Minister Annalena Baerbock’s visit to #SoutheastAsia.
🤔 What were the topics & who did she meet?
▶️ Watch to find out. pic.twitter.com/0zcTeEJ0uJ
— GIC Southeast Asia (@GermanyInSEAsia) January 19, 2024
ವಿಡಿಯೋದ ಮೊದಲ ಐದು ಸೆಕೆಂಡುಗಳ ವಿವರವಾದ ವಿಶ್ಲೇಷಣೆಯು ವೈರಲ್ ವಿಡಿಯೋದೊಂದಿಗೆ ನೇರ ಹೋಲಿಕೆಯನ್ನು ಬಹಿರಂಗಪಡಿಸುತ್ತದೆ. ಎರಡೂ ವೀಡಿಯೊಗಳಲ್ಲಿ ಬೇರ್ಬಾಕ್ ಅವರ ಉಡುಪು ಮತ್ತು ಹಿನ್ನೆಲೆ ಒಂದೇ ಆಗಿವೆ, ಎರಡನ್ನೂ ಒಂದೇ ಸ್ಥಳದಲ್ಲಿ ಮತ್ತು ಒಂದೇ ಸಮಯದಲ್ಲಿ ಆದರೆ ವಿಭಿನ್ನ ಕೋನ(angle)ಗಳಿಂದ ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ.
ಜನವರಿ 16 ರ ಡಾಯ್ಚ ವೆಲ್ಲೆ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದು ಅನ್ನಾಲೆನಾ ಬೇರ್ಬಾಕ್ ಅವರ ಫೋಟೋವನ್ನು ಒಳಗೊಂಡಿದೆ, ಇದು ವೈರಲ್ ವೀಡಿಯೊಗೆ ಹೊಂದಿಕೆಯಾಗುತ್ತದೆ. ವರದಿಯ ಪ್ರಕಾರ, ಜನವರಿ 12 ರಂದು ಬೇರ್ಬಾಕ್ ಮಲೇಷ್ಯಾದ ಕೌಲಾಲಂಪುರದ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಆರ್ಐಎ ನೊವೊಸ್ಟಿ ಅಕ್ಟೋಬರ್ 28 ರಂದು ಪ್ರಕಟಿಸಿದ ಮತ್ತೊಂದು ವರದಿಯಲ್ಲಿ, ಜರ್ಮನ್ ವಿದೇಶಾಂಗ ಸಚಿವಾಲಯದ ಅಧಿಕಾರಿ ಸೆಬಾಸ್ಟಿಯನ್ ಫಿಶರ್, “ಅನ್ನಾಲೆನಾ ಬೇರ್ಬಾಕ್ ಅವರ ಭಾರತ ಅಥವಾ ಚೀನಾ ಭೇಟಿಯನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊ ತಪ್ಪುದಾರಿಗೆಳೆಯುತ್ತದೆ. ವಾಸ್ತವವಾಗಿ, ಈ ವರ್ಷದ ಜನವರಿಯಲ್ಲಿ ಮಲೇಷ್ಯಾದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ, ತಪ್ಪು ತಿಳುವಳಿಕೆಯಿಂದಾಗಿ ವಿಮಾನವನ್ನು ತಪ್ಪಾಗಿ ನಿಲ್ಲಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಅಕ್ಟೋಬರ್ 24 ರಿಂದ 26 ರವರೆಗೆ ಬೇರ್ಬಾಕ್ ಭಾರತಕ್ಕೆ ಭೇಟಿ ನೀಡಿದಾಗ, ಭಾರತದ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ನವದೆಹಲಿ ವಿಮಾನ ನಿಲ್ದಾಣದಲ್ಲಿ ಜರ್ಮನ್ ನಿಯೋಗವನ್ನು ಸ್ವಾಗತಿಸಿದರು. ಮತ್ತು ಅಕ್ಟೋಬರ್ 11 ರಂದು ಡಾಯ್ಚ ವೆಲ್ಲೆ ಪ್ರಕಟಿಸಿದ ವರದಿಯ ಪ್ರಕಾರ, ಬೀಜಿಂಗ್ ಪ್ರವಾಸವು ಬೇರ್ಬಾಕ್ನ ಪಟ್ಟಿಯಲ್ಲಿತ್ತು. ಆದಾಗ್ಯೂ, ಈ ಪ್ರವಾಸದ ವಿವರಗಳ ಬಗ್ಗೆ ನಮಗೆ ಹೆಚ್ಚಿನ ವರದಿಗಳು ಕಂಡುಬಂದಿಲ್ಲ.
ಹೀಗಾಗಿ, ವೈರಲ್ ವೀಡಿಯೊ ಅನ್ನಾಲೆನಾ ಬೇರ್ಬಾಕ್ ಅವರ ಭಾರತ ಅಥವಾ ಚೀನಾ ಭೇಟಿಯ ಸಂದರ್ಭದ್ದಲ್ಲ, ಆದರೆ ಮಲೇಷ್ಯಾದ ಕೌಲಾಲಂಪುರದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನು ಓದಿ: ರಾಜನಾಥ್ ಸಿಂಗ್ ಅವರು ಲಾರೆನ್ಸ್ ಬಿಷ್ಣೋಯ್ ಪರ ಮಾತನಾಡಿದ್ದಾರೆ ಎಂಬ ವಿಡಿಯೋ ಎಡಿಟೆಡ್ ಆಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.