Fact Check | ಚೀನೀ ಪಡೆಗಳು ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಪೂರ್ವ ಲಡಾಖ್ ವಿಭಾಗದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಡೆಮ್‌ಚೋಕ್ ಮತ್ತು ಡೆಪ್ಪಾಂಗ್‌ನಿಂದ ಭಾರತ ಮತ್ತು ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಅಕ್ಟೋಬರ್ 25ರಂದು ಆರಂಭಗೊಂಡಿದೆ.

ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ
ರೇಖೆಯುದ್ದಕ್ಕೂ ಗಸ್ತು ಕಾರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದವೊಂದಕ್ಕೆ ಭಾರತ ಮತ್ತು ಚೀನಾ ಅ.21ರಂದು ಸಹಿ ಹಾಕಿದ್ದವು. ಈ ಒಪ್ಪಂದವು ಕಳೆದ ನಾಲ್ಕು ವರ್ಷಗಳಿಗೂ ಅಧಿಕ ಸಮಯದಿಂದ ತಲೆದೋರಿದ್ದ ಮಿಲಿಟರಿ ಬಿಕ್ಕಟ್ಟಿಗೆ ಅಂತ್ಯವನ್ನು ಸೂಚಿಸಿದೆ. 2020ರಲ್ಲಿ ಆರಂಭಗೊಂಡಿದ್ದ ಉಭಯ ದೇಶಗಳ ನಡುವಿನ ಮಿಲಿಟರಿ ಬಿಕ್ಕಟ್ಟಿಗೆ ಅಂತ್ಯಹಾಡಲು ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.

“ಜೈ ಶ್ರೀರಾಮ್” ಘೋಷಣೆಯೊಂದಿಗೆ ಡೆಮ್‌ಚೋಕ್ ಮತ್ತು ಡೆಪ್ಪಾಂಗ್‌ನಿಂದ ಭಾರತ ಮತ್ತು ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸೆಕ್ಯುಲರ್ ಎಂದು ಕರೆಸಿಕೊಳ್ಳುವವರು ಇದಕ್ಕೆ ಕೋಮು ಪ್ರೇರಿತ ಸೈನಿಕ ವಾಪಸಾತಿ ಎಂದು ಹೇಳದಿದ್ದರೆ ಸಾಕು” ಎಂಬ ಸಂದೇಶದೊಂದಿಗೆ ಎಕ್ಸ್ ಖಾತೆಯಲ್ಲಿ ಬಲಪಂಥೀಯರು ಹಂಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಉಭಯ ದೇಶಗಳ ಸೈನಿಕರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವುದನ್ನು ತೋರಿಸುತ್ತದೆ. ಅದರಲ್ಲಿ, ಭಾರತೀಯ ಸೈನಿಕರು, ಚೀನೀ ಸೈನಿಕರಿಗೆ “ಜೈ ಶ್ರೀ ರಾಮ್” ಎಂದು ಹೇಗೆ ಉಚ್ಚರಿಸಬೇಕು ಎಂಬುದನ್ನು ಕಲಿಸುವುದು ತದನಂತರ ಜೊತೆಗೂಡಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದನ್ನು ಕಾಣಬಹುದು.

ಫ್ಯಾಕ್ಟ್‌ ಚೆಕ್:

ಭಾರತೀಯ ಸೈನಿಕರು – ಚೀನೀ ಸೈನಿಕರು ಜೊತೆಗೂಡಿ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವ ವೀಡಿಯೊ 2024ರ ಜನವರಿ ತಿಂಗಳಿನದ್ದು. ಇದು ಸುಮಾರು ಒಂಬತ್ತು ತಿಂಗಳು ಹಳೆಯದು ಎಂಬುದು ಇದರಿಂದ ಸಾಬೀತಾಗಿದ್ದು ಇತ್ತೀಚೆಗೆ ನಡೆದ ಸೈನಿಕ ವಾಪಸಾತಿ ಪ್ರಕ್ರಿಯೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ.

ಈ ವಿಡಿಯೋದ ಕುರಿತು ಜನವರಿಯಲ್ಲಿ ಪ್ರಕಟವಾದ ಸುದ್ದಿ ವರದಿಗಳು ಲಭ್ಯವಾಗಿವೆ.

ಇಂಡಿಯಾ ಟಿವಿ ಪ್ರಕಾರ, ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲಿ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚೀನಾ ಮತ್ತು ಭಾರತವು ಗಡಿ ಬಿಕ್ಕಟ್ಟಿನ ಸಮಯದಲ್ಲಿ ವಾಸ್ತವ ನಿಯಂತ್ರಣ ರೇಖೆಯಿಂದ ವೀಡಿಯೊ ಹೊರಹೊಮ್ಮಿದ್ದಾಗಿ ವರದಿಗಳು ತಿಳಿಸಿದೆ.


ಟೇಬಲ್‌‌ನ ಮೇಲೆ ಇರಿಸಲಾದ ತಿಂಡಿಗಳು ಮತ್ತು ಪಾನೀಯಗಳು ಎರಡು ಕಡೆಯ ಪಡೆಗಳ ನಡುವಿನ ಸಭೆಯ ಸಮಯದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಿರಬಹುದು ಎಂದು ಸೂಚಿಸುತ್ತದೆ.

ಹಲವಾರು ಸುದ್ದಿವಾಹಿನಿಗಳು ಈ ವಿಡಿಯೋವನ್ನು ಅಯೋಧ್ಯೆಯ ರಾಮ ಮಂದಿರ ಪ್ರಾಣ್ ಪ್ರತಿಷ್ಠಾ ಸಮಾರಂಭದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿ ಮಾಡಿವೆ‌.

ಇನ್ನೂ ಕೆಲವು ವರದಿಗಳಲ್ಲಿ, ಈ ವಿಡಿಯೋ ಮೂರು ತಿಂಗಳ ಮೊದಲು, ಅಂದರೆ 2023ರ ದೀಪಾವಳಿಯ ಆಸುಪಾಸಿನಲ್ಲಿ ಸೈನಿಕರ ನಡುವಿನ ವಾಡಿಕೆಯ ಸಭೆಯ ಸಮಯದಲ್ಲಿ ಚಿತ್ರಿಸಿದ್ದು ಎಂದು ಹೇಳುತ್ತಿವೆ.

ಆದರೆ, ಈ ವಿಡಿಯೋದ ಬಗ್ಗೆ ಸೇನೆಯಿಂದ ಯಾವುದೇ ಅಧಿಕೃತ ದೃಢೀಕರಣಗಳು ಲಭ್ಯವಾಗಿಲ್ಲ.

ದಕ್ಷಿಣ ಲಡಾಖ್‌ನ ಚೆಪ್ಜಿ-ಚುಮಾರ್ ಗಡಿ ಪ್ರದೇಶಗಳಿಂದ ವೀಡಿಯೊವನ್ನು ಜಿಯೋಲೊಕೇಟ್ ಮಾಡಿದ ಜನವರಿ 22 ರ X ಪೋಸ್ಟ್  ಸಹ ಲಭ್ಯವಿದ್ದು ; ಇದು ಗೂಗಲ್ ಅರ್ಥ್‌ನಲ್ಲಿ ಕಂಡುಬರುವ ಹಿನ್ನೆಲೆ ವೈಶಿಷ್ಟ್ಯಗಳು ಮತ್ತು ಪರ್ವತಗಳು ವೀಡಿಯೊದ ಭೂಪ್ರದೇಶಕ್ಕೆ ಹೊಂದಿಕೆಯಾಗುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೇ, ಇತ್ತೀಚೆಗೆ ನಡೆದ ಭಾರತ ಮತ್ತು ಚೀನಾ ನಡುವಿನ ಸೈನಿಕ ವಾಪಸಾತಿ ಪ್ರಕ್ರಿಯಯೆಗೆ “ಜೈ ಶ್ರೀರಾಮ್” ಘೋಷಣೆ ಕೂಗುವ ಮೂಲಕ ಚಾಲನೆ ನೀಡಲಾಗಿದೆ ಎಂಬುದು ಸುಳ್ಳು. ಘೋಷಣೆ ಕೂಗುವ ವಿಡಿಯೋ ಕಳೆದ ಜನವರಿಯಿಂದ ಸುದ್ದಿ ಮಾಧ್ಯಮಗಳಲ್ಲಿ ಲಭ್ಯವಿದೆ.


ಇದನ್ನು ಓದಿದ್ದೀರಾ? : Fact Check | ಪ್ರಸಾದ ವಿತರಿಸುತ್ತಿದ್ದ RSS ಕಾರ್ಯಕರ್ತರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *