Fact Check | ಲುಲು ಮಾಲ್‌ಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ

ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಲುಲು ಮಾಲ್ ಗೆ ಸಂಬಂಧಪಟ್ಟ ಹಾಗೆ ವಿವಿಧ ನಿರೂಪಣೆಗಳೊಂದಿಗೆ ಸಾಕಷ್ಟು ಸುಳ್ಳು ಸುದ್ದಿಗಳು  ವೈರಲ್ ಆಗುತ್ತಿವೆ. ಅದೇ ರೀತಿಯಲ್ಲಿ ಈಗ ಲುಲು ಮಾಲ್‌ ಫೋಟೋವೊಂದನ್ನು ಹಾಕಿ ಅದರ ಹಿನ್ನೆಲೆ ದ್ವನಿಯಲ್ಲಿ ಲುಲು ಮಾಲ್‌ನಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಹಿಂದೂಗಳ ಜನಸಂಖ್ಯೆ ಹೆಚ್ಚಿರುವ ಕಡೆ ಲುಲು ಮಾಲ್‌ ತನ್ನ ಶಾಖೆಗಳನ್ನು ಆರಂಭಿಸುತ್ತಿದೆ. ಹಿಂದೂ ವ್ಯಾಪಾರಿಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಲುಲು ಮಾಲ್ ಕಾರ್ಯನಿರ್ವಹಿಸುತ್ತಿದೆ. ಈ ಜಿಹಾದ್‌ಗಳಿಗಾಗಿ ಲುಲು ಮಾಲ್‌ ಮಾಲಿಕ ಯೂಸುಪ್‌ ಆಲಿ ಕತಾರ್‌ನಿಂದ ಹಣ ಪಡೆದಿದ್ದಾರೆ ಎಂಬ ನಿರೂಪಣೆಯೊಂದಿಗೆ ಫೋಟೋವಿನೊಂದಿಗೆ AI ಹಿನ್ನೆಲೆ ಧ್ವನಿಹೊಂದಿರುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಲುಲು ಮಾಲ್‌ ವಿರುದ್ಧ ವಿವಿಧ ಆಪಾದನೆಗಳನ್ನು ಹೊರಿಸಿರುವ ವಿಡಿಯೋವನ್ನು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಲುಲು ಮಾಲ್‌ನಲ್ಲಿ ಲವ್‌ ಜಿಹಾದ್‌ ನಡೆಯುತ್ತಿದೆ ಎಂಬುದನ್ನು ಹೆಚ್ಚು ಒತ್ತಿ ಹೇಳಲಾಗುತ್ತಿರುವುದರಿಂದ ಸಾಕಷ್ಟು ಮಂದಿ ವೈರಲ್‌ ಪೋಸ್ಟ್‌ ಅನ್ನು ಹೆಚ್ಚಾಗಿ ಶೇರ್‌ ಮಾಡುತ್ತಿದ್ದಾರೆ. ಹೀಗೆ ಈ ವಿಡಿಯೋದಲ್ಲಿ ಲುಲು ಮಾಲ್‌ ವಿರುದ್ಧ ಹಲವು ಆರೋಪಗಳಿದ್ದು, ಇದರಲ್ಲಿ ಸತ್ಯ ಎಷ್ಟು ಸುಳ್ಳುಗಳು ಎಷ್ಟು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವಿಡಿಯೋದಲ್ಲಿ ಹೇಳಲಾದ ಪ್ರಮುಖ ಮೂರು ಅಂಶಗಳನ್ನು ವಿವಿಧ ಕೀ ವರ್ಡ್‌ಗಳಾಗಿ ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು, ವೈರಲ್‌ ವಿಡಿಯೋದಲ್ಲಿ ಮೊದಲು ಹೇಳಿದಂತೆ ಕಣ್ಣೂರು ಕಾಸರಗೋಡು ಕೋಝಿಕ್ಕೋಡ್, ಮಣಪುರಂನಲ್ಲಿ‌ ಲುಲು ಮಾಲ್ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಲಾಯಿತು ಆಗ ಲುಲು ಮಾಲ್‌ನ ಶಾಖೆ ಕೋಝಿಕ್ಕೋಡ್‌ನಲ್ಲಿ ಇರುವುದು ಪತ್ತೆಯಾಗಿದೆ ಹಾಗಾಗಿ ವೈರಲ್ ವಿಡಿಯೋದ ಮೊದಲ ಪ್ರತಿಪಾದನೆ ಸುಳ್ಳಾಗಿದೆ. ಮತ್ತು ಕೋಝಿಕ್ಕೋಡ್‌ನಲ್ಲಿ ಕೂಡ ಹಿಂದೂಗಳ ಜನಸಂಖ್ಯೆ ಹೆಚ್ಚಿದೆ.


ಇನ್ನು ವಿಡಿಯೋದಲ್ಲಿನ ಎರಡನೇ ಆಪಾದನೆ ಎಂದರೆ ಅದು ಲುಲು ಮಾಲ್ ಶಾಖೆ ನಿರ್ಮಾಣವಾದ ಬಳಿಕ ಹಿಂದೂ ವ್ಯಾಪಾರಸ್ಥರು ಸಂಕಷ್ಟಕ್ಕೆ ಈಡಾಗಿದ್ದಾರೆ, ಹಲವು ಹಿಂದುಗಳು ವ್ಯಾಪಾರ ನಡೆಸಲಾಗದೆ ತಮ್ಮ ವ್ಯಾಪರ-ವ್ಯವಹಾರಗಳನ್ನೇ ನಿಲ್ಲಿಸುವಂತಾಗಿದೆ ಎಂಬುದು. ಒಂದು ವೇಳೆ ಈ ಆಪಾದನೆ ನಿಜವಾಗಿದ್ದರೆ ಹಿಂದೂ ವರ್ತಕರಿಂದ ಕೇರಳದಲ್ಲಿ ಅಥವಾ ಲುಲು ಮಾಲ್ ಶಾಖೆ ಇರುವಲ್ಲಿ ಪ್ರತಿಭಟನೆಗಳು ನಡೆಯಬೇಕಿತ್ತು ಅಥವಾ ಹಿಂದೂ ವರ್ತಕರ ಒಕ್ಕೂಟ ಲುಲು ಮಾಲ್ ಸ್ಥಾಪನೆಯ ವಿರುದ್ಧ ಹೇಳಿಕೆಗಳನ್ನು ನೀಡಬೇಕಾಗಿತ್ತು. ಹೀಗಾಗಿ ಈ ಬಗ್ಗೆ ಯಾವುದಾದರೂ ವರದಿಗಳು ಪ್ರಕಟವಾಗಿವೆಯೇ ಎಂದು ಪರಿಶೀಲನೆ ನಡೆಸಲಾಯಿತು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಇನ್ನು ವಿಡಿಯೋದಲ್ಲಿ ಹೇಳಿದಂತೆ ಲುಲು ಮಾಲ್ ಇರುವ ಹಲವು ಕಡೆ ಹಿಂದುಗಳ ಜನಸಂಖ್ಯೆ ಹೆಚ್ಚಿರುವುದು ನಿಜ ಆದರೆ ಇದರಿಂದ ಹಿಂದೂ ವರ್ತಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬ ಹೇಳಿಕೆಗೆ ಯಾವುದೇ ಪುರಾವೆಗಳು ನಂಬಲು ಅರ್ಹವಾದ ಸಾಕ್ಷಿಗಳು ಲಭ್ಯವಿಲ್ಲ

ವಿಡಿಯೋದಲ್ಲಿರುವ ಮೂರನೇ ಆಪಾದನೆ ಲುಲು ಮಾಲ್‌ನಲ್ಲಿ ಕೆಲಸ ಮಾಡುವ 20,000 ನೌಕರರಲ್ಲಿ 15,000 ಪುರುಷರು ಇದ್ದು, ಇವರು ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಇನ್ನುಳಿದ 5000 ನೌಕರರು ಮಹಿಳೆಯರಾಗಿದ್ದು, ಇವರು ಹಿಂದುಗಳಾಗಿದ್ದಾರೆ ಎಂಬುದು. ಇದರ ಜೊತೆಗೆ ಈ 5000 ಹಿಂದೂ ಮಹಿಳೆಯರನ್ನು ಲವ್ ಜಿಹಾದ್‌ಗೆ ದೂಡಲು ಮುಸ್ಲಿಂ ಯುವಕರನ್ನು ನೇಮಿಸಲಾಗಿದೆ ಎನ್ನುವ ಗುಮಾನಿಯನ್ನು ಹಂಚಿಕೊಳ್ಳಲಾಗಿದೆ. ಈ ರೀತಿಯ ಆಪಾದನೆ ಕಳೆದ ಎರಡು ವರ್ಷಗಳಿಂದಲೂ ಲುಲು ಮಾಲ್‌ನ ಮೇಲೆ ಇದೆ. ಹೀಗಾಗಿ ಈ ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 19 ಜುಲೈ 2022 ರಂದು ದ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯಲ್ಲಿ ಲುಲು ಮಾಲ್‌ನಲ್ಲಿ “ಶೇ. 80ರಷ್ಟು ಸಿಬ್ಬಂದಿ ಹಿಂದೂ ನೌಕರರಿದ್ದಾರೆ ಮತ್ತು ಉಳಿದವರು ಮುಸಲ್ಮಾನರು, ಕ್ರಿಶ್ಚನರು ಹಾಗೂ ಇತರೆ ಸಮುದಾಯಕ್ಕೆ ಸೇರದ್ದವರಾಗಿದ್ದಾರೆ ಎಂದು ಲುಲು ಮಾಲ್‌ನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ,

ಇನ್ನು ಲುಲು ಮಾಲ್ ನಲ್ಲಿ ಮುಸ್ಲಿಂ ಸಿಬ್ಬಂದಿಗಳೇ ಹೆಚ್ಚಿದ್ದಾರೆ ಎಂದು ಈ ಹಿಂದೆ ಉತ್ತರ ಪ್ರದೇಶದಲ್ಲಿ ವಿವಾದ ಸೃಷ್ಟಿಯಾದಾಗ, ಅಲ್ಲಿನ ಬಿಜೆಪಿ ಸರ್ಕಾರದ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತ ಅವರು ಇದು ಲುಲು ಮಾಲ್ ಬಗ್ಗೆ ಹರಡಿರುವ ಸುಳ್ಳು ಸುದ್ದಿಯಾಗಿದೆ. ಇದು ಸಮಾಜ ವಿರೋಧಿಗಳ ಕೆಲಸವಾಗಿದೆ ಎಂದು ಹೇಳಿಕೆ ನೀಡಿರುವುದನ್ನು ಕೂಡ ನಾವು ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ವೈರಲ್ ವಿಡಿಯೋದಲ್ಲಿ ಹೇಳಲಾದ ಮೂರು ಅಂಶಗಳು ಕೂಡ ಸುಳ್ಳಿನಿಂದ ಕೂಡಿದೆ ಮತ್ತು ಇದಕ್ಕೆ ಯಾವುದೇ ರೀತಿಯ ಪುರಾವೆಗಳು ಕೂಡ ಇಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ರಾಜಸ್ಥಾನ-ಗುಜರಾತ್-ಮಹಾರಾಷ್ಟ್ರ ಹೆದ್ದಾರಿಯಲ್ಲಿರುವ 40 ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬುದಕ್ಕೆ ಆಧಾರವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *