Fact Check: ರಾಜಸ್ಥಾನ-ಗುಜರಾತ್-ಮಹಾರಾಷ್ಟ್ರ ಹೆದ್ದಾರಿಯಲ್ಲಿರುವ 40 ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬುದಕ್ಕೆ ಆಧಾರವಿಲ್ಲ

ಮುಸ್ಲಿಂ

ರಾಜಸ್ಥಾನ-ಗುಜರಾತ್-ಮಹಾರಾಷ್ಟ್ರ ಹೆದ್ದಾರಿಯಲ್ಲಿರುವ 40ಕ್ಕೂ ಹೆಚ್ಚು ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಯುವಕನೊಬ್ಬ ಹೇಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮುಸ್ಲಿಂ ಹೋಟೆಲ್‌ಗಳಲ್ಲಿ ನಪುಂಸಕ ಔಷಧಿಗಳನ್ನು ಬೆರೆಸಲಾಗುತ್ತಿದೆ ಮತ್ತು ಮಾಂಸಾಹಾರಿ ವಸ್ತುಗಳನ್ನು ಬೆರೆಸಿ ಹಿಂದೂ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ.

ಈ ವಿಡಿಯೋವನ್ನು ಅನೇಕ ಬಿಜೆಪಿ ಬೆಂಬಲಿಗರು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೋಡಬಹುದು.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೋದಲ್ಲಿರುವ ಮಾಹಿತಿ ಸುಳ್ಳಾಗಿದ್ದು, ಇದೇ ಪೋಟೋಗಳನ್ನು ಬಳಸಿಕೊಂಡು ಈ ಹಿಂದೆ ಮುಸ್ಲಿಮರು ಆಹಾರ ಜಿಹಾದಿ ನಡೆಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗಿತ್ತು ಆ ಸಂದರ್ಭದಲ್ಲಿ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವೈರಲ್ ಸಂದೇಶವನ್ನು ಸತ್ಯ ಶೋಧನೆ ನಡೆಸಿ ಲೇಖನವನ್ನು ಪ್ರಕಟಿಸಿದೆ.

ನಾವು “40 ಮುಸ್ಲಿಂ ಹೋಟೆಲ್‌ಗಳ ಮೇಲೆ ಪೋಲಿಸ್‌ ದಾಳಿ”ಯ ಕುರಿತು ಅಂತರ್ಜಾಲದಲ್ಲಿ ಕೀವರ್ಡ್‌ ಹುಡುಕಾಟವನ್ನು ನಡೆಸಿದಾಗ, ಈ ಘಟನೆ ನಡೆದಿರುವ ಕುರಿತು ಯಾವುದೇ ಪತ್ರಿಕಾ ವರದಿಗಳು ಲಭ್ಯವಾಗಿಲ್ಲ.  ಇದಲ್ಲದೆ, ವೈರಲ್ ವೀಡಿಯೊದ 32 ಸೆಕೆಂಡುಗಳಲ್ಲಿ ನಾಲ್ಕು ಫೋಟೋಗಳನ್ನು ನೀಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಈ ಫೋಟೋಗಳ ಕುರಿತು ಹುಡುಕಿದ್ದೇವೆ. ಮೊದಲ ಫೋಟೋವನ್ನು ಜುಲೈ 11, 2019 ರಂದು ಬಿಜ್ನೋರ್ ಪೊಲೀಸರ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. “ಶೇರ್ಕೋಟ್ ಪೊಲೀಸ್ ಠಾಣೆಯಿಂದ ಮದರಸಾಕ್ಕೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರು ಆರೋಪಿಗಳನ್ನು ಪೊಲೀಸರು 01 ಪಿಸ್ತೂಲ್, 04 ಗನ್ನುಗಳು ಮತ್ತು ಭಾರಿ ಪ್ರಮಾಣದ ಕಾರ್ಟ್ರಿಜ್‌ಗಳೊಂದಿಗೆ @bijnorpolice ಬಂಧಿಸಿದ್ದಾರೆ.”

ಬಿರಿಯಾನಿಯ ಎರಡನೇ ಫೋಟೋವನ್ನು ನಾವು ಜುಲೈ 1, 2016 ರಂದು ಯೂಟ್ಯೂಬ್ ಚಾನೆಲ್ ‘ವಿಡಿಯೋಸ್ಮೈಲೈವ್ – ಹೌ ಟು’ ನಲ್ಲಿ ಕಂಡುಕೊಂಡಿದ್ದೇವೆ. ಈ ವೀಡಿಯೊದ ಶೀರ್ಷಿಕೆ ಹೀಗಿದೆ, ಭಾರತೀಯ ಮುಸ್ಲಿಂ ಹಬ್ಬದ ದಮ್ ಬಿರಿಯಾನಿ 30 ಜನರಿಗೆ ತಯಾರಿಸುವುದು ಹೇಗೆ- ಬೀದಿ ಆಹಾರ“. ಬಿರಿಯಾನಿ ತಯಾರಿಸುವ ವಿಡಿಯೋದ ಕವರ್ ಚಿತ್ರವನ್ನು ಆಹಾರ ಜಿಹಾದಿ ಎಂದು ಆರೋಪಿಸಲು ಬಳಸಿಕೊಂಡಿದ್ದಾರೆ.

ಮೇ 2, 2019 ರಂದು dailymirror.lk ನಲ್ಲಿ ಪ್ರಕಟವಾದ ಸುದ್ದಿ ಲೇಖನದಲ್ಲಿ ವೈರಲ್ ವಿಡಿಯೋದಲ್ಲಿ ತೋರಿಸಲಾಗಿರುವ ಮೂರನೇ ಮತ್ತು ನಾಲ್ಕನೇ ಫೋಟೋಗಳು, ಕೊಲಂಬೊದ ವೂಲ್ಫೆಂಡಾಲ್ ರಸ್ತೆಯಲ್ಲಿರುವ ವ್ಯಕ್ತಿ ಮತ್ತು ಅವರ ಮಗನ ಮನೆಯ ಮೇಲೆ ಎಸ್‌ಟಿಎಫ್ ದಾಳಿ ನಡೆಸಿದ ಸಂದರ್ಭದ್ದು ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ತಯಾರಿಸಿದ ಮತ್ತು ಶ್ರೀಲಂಕಾದಲ್ಲಿ ಮಾರಾಟಕ್ಕಾಗಿ ನಿಷೇಧಿಸಲಾದ ಟ್ರಾಮಾಡೋಲ್ ಮತ್ತು ಹಲವಾರು ಅಕ್ರಮ ಮಾದಕವಸ್ತುಗಳನ್ನು ಎಸ್‌ಟಿಎಫ್ ವಶಪಡಿಸಿಕೊಂಡಿದೆ.

ಆದ್ದರಿಂದ 40 ಮುಸ್ಲಿಂ ಹೋಟೆಲ್‌(ಡಾಭಾ)ಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ವೈರಲ್ ಹೇಳಿಕೆ ಸುಳ್ಳು. ವೀಡಿಯೊದಲ್ಲಿ ತೋರಿಸಲಾದ ವಿವಿಧ ಸ್ಥಳಗಳ ಫೋಟೋಗಳನ್ನು ಮುಸ್ಲಿಂ ಹೋಟೆಲ್‌ಗಳ ದಾಳಿ ಎಂದು ಪ್ರತಿಪಾದಿಸಲು ಬಳಸಿಕೊಳ್ಳಲಾಗಿದೆ. ಕೆಲವು ಬಲಪಂಥೀಯರು “ಜಿಹಾದ್” ಎಂಬ ಪದವನ್ನು ಅರ್ಥವಿಲ್ಲದಂತೆ ಬಳಸುತ್ತಿದ್ದು ಮುಸ್ಲಿಮರ ಎಲ್ಲಾ ನಡೆಗಳನ್ನೂ ಜಿಹಾದ್‌ ಎಂದು ಕರೆಯುತ್ತಿದ್ದಾರೆ. ಜಿಹಾದ್ ಎಂಬ ಅರೇಬಿಕ್ ಪದದ ಅರ್ಥ ತ್ಯಾಗ ಅಥವಾ ಬಲಿದಾನ ಎಂದು. 

ಆದ್ದರಿಂದ ಯಾವುದೇ ಫೋಟೋ ಅಥವಾ ವಿಡಿಯೋ ನೋಡಿದ ತಕ್ಷಣ ನಿಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳಬೇಡಿ. ಅನೇಕ ಬಾರಿ ಮೇಲಿನಂತೆ ಸಂಬಂಧವಿಲ್ಲದ ಪೋಟೋಗಳನ್ನು ಬಳಸಿಕೊಂಡು ಸುಳ್ಳು ಆರೋಪ ಮಾಡಲಾಗುತ್ತಿರುತ್ತದೆ.


ಇದನ್ನು ಓದಿ: BRICS ಸದಸ್ಯತ್ವ ಪಡೆಯುವ ಟರ್ಕಿಯ ಪ್ರಯತ್ನವನ್ನು ಭಾರತ ತಿರಸ್ಕರಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *