Fact Check | ಪ್ರಸಾದ ವಿತರಿಸುತ್ತಿದ್ದ RSS ಕಾರ್ಯಕರ್ತರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬುದು ಸುಳ್ಳು

ದೇವಸ್ಥಾನದಲ್ಲಿ ಪ್ರಸಾದ ವಿತರಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದವರ(ಆರ್‌ಎಸ್‌ಎಸ್‌) ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಆರ್‌ಎಸ್ಎಸ್ ಕಾರ್ಯಕರ್ತರು ಶರದ್ ಪೂರ್ಣಿಮೆಯ ಆಚರಣೆ ಪ್ರಯುಕ್ತ ಪ್ರಸಾದವಾಗಿ ಖೀರ್ ವಿತರಿಸುತ್ತಿದ್ದಾಗ ನಸೀಬ್ ಎಂಬ ಮುಸ್ಲಿಂ ವ್ಯಕ್ತಿ ದೇವಾಸ್ಥಾನಕ್ಕೆ ತನ್ನ ಸಹಚರನೊಂದಿಗೆ ನುಗ್ಗಿ ದಾಳಿ ನಡೆಸಿದ್ದಾನೆ. ಈ ಘಟನೆ ಅಕ್ಟೋಬರ್ 17ರಂದು ರಾಜಸ್ಥಾನದ ಜೈಪುರದಲ್ಲಿ ನಡೆದಿದೆ” ಎಂದು ಆರೋಪಿಸಿ ಸುದರ್ಶನ್ ನ್ಯೂಸ್‌‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಅನ್ನು ಹಂಚಿಕೊಂಡಿದೆ.

ಮುಸ್ಲಿಮರು ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಹಿಂದೂಗಳು ಯಾವುದೇ ಕಾರ್ಯಕ್ರಮವನ್ನು ನಡೆಸಬಾರದು,  ಎಂಬ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂಬ ಕೋಮುದ್ವೇಷ ಪ್ರೇರಿತ ಸಂದೇಶದೊಂದಿಗೆ ಇದೇ ರೀತಿಯ ಹಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್ ಚೆಕ್: 

ಕನ್ನಡ ಫ್ಯಾಕ್ಟ್ ಚೆಕ್ ತಂಡವು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಸುಳ್ಳಿನಿಂದ ಕೂಡಿದೆ ಎಂಬುದನ್ನು ಪತ್ತೆ ಹೆಚ್ಚಿದೆ.

ಘಟನೆಯ ಕುರಿತು ಕೆಲವು ಪದಗಳನ್ನು ಬಳಸಿ ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ದಿ ಟೆಲಿಗ್ರಾಫ್, ಎನ್‌ಡಿಟಿವಿ, ಡಿಡಿ ನ್ಯೂಸ್ ಸೇರಿದಂತೆ ಹಲವು ವರದಿಗಳು ಲಭಿಸಿವೆ.

ಚೂರಿ ಮತ್ತು ಕೋಲಿನಿಂದ ಹಲ್ಲೆ ನಡೆಸಿದವರನ್ನು ‘ನಸೀಬ್ ಸಿಂಗ್ ಚೌದರಿ’ ಆತನ ಪತ್ನಿ ನಿರ್ಮಲಾ ಹಾಗೂ ಪುತ್ರ ಭೀಷ್ಮ ಚೌಧರಿ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ‌. ‘ನಸೀಬ್’ ಎಂಬ ಹೆಸರನ್ನು ಕೇಳಿದಾಗ ಈತ ಮುಸ್ಲಿಮ್ ಸಮುದಾಯಕ್ಕೆ ಸೇರಿದವನಾಗಿರಬೇಕು ಎಂದು ತಪ್ಪಾಗಿ ಅರ್ಥೈಸಿ ಮುಸ್ಲಿಮ್ ಸಮುದಾಯವನ್ನ ಗುರಿಯಾಗಿಸಿ ದ್ವೇಷ ಹರಡಲಾಗುತ್ತಿದೆ.

“ಈ ಪ್ರಕರಣದಲ್ಲಿ ಹಲ್ಲೆಗೊಳಗಾದವರು ಮತ್ತೆ ಹಲ್ಲೆ ನಡೆಸಿದ ವ್ಯಕ್ತಿಗಳು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಈ ಘಟನೆಯಲ್ಲಿ ಮುಸ್ಲಿಮ್ ಸಮುದಾಯದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ” ಎಂದು ಜೈಪುರ ಕಮಿಷನರೇಟ್‌ನ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕುವಾರ್ ರಾಷ್ಟ್ರದೀಪ್ ಮಾಹಿತಿ ನೀಡಿದ್ದಾರೆ.

ಹಲ್ಲೆಗೆ ಕಾರಣವೇನು ಗೊತ್ತಾ?

ತಡ ರಾತ್ರಿಯವರೆಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಆಯೋಜಿಸಿದ ಕಾರ್ಯಕ್ರಮದಿಂದಾಗಿ ತಮ್ಮ ನೆರೆಹೊರೆಯಲ್ಲಿ ಬಹಳಷ್ಟು ಸದ್ದುಗದ್ದಲವಾಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಬಳಿಕ ವಾಗ್ವಾದ ನಡೆದ್ದಿದ್ದು ಹಲ್ಲೆ ಹಾಗೂ ಬಂಧನದೊಂದಿಗೆ ಅಂತ್ಯವಾಗಿದೆ. ಇದಲ್ಲದೇ,

ದೇವಸ್ಥಾನದ ಜಮೀನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಹಲ್ಲೆ ನಡೆಸಿದ ಆರೋಪಿ ನಜೀಬ್ ಸಿಂಗ್ ಚೌದರಿಗೆ ಸೇರಿದ ಕಟ್ಟಡದ ಒಂದು ಭಾಗವನ್ನು ಕೆಡವಿದ್ದರು.

ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ ಎಂದು ಪೋಲಿಸ್ ಕಮಿಷನರ್ (ಎಸಿಪಿ) ಕುವಾರ್ ರಾಷ್ಟ್ರದೀಪ್ ಡಿಡಿ ನ್ಯೂಸ್‌ಗೆ  ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಘಟನೆಗೆ ಕೋಮು ಆಯಾಮ ನೀಡಿ ಸುಳ್ಳು ಸಂದೇಶ ಹಂಚಿಕೊಳ್ಳಲಾಗುತ್ತಿದ್ದು, ಇಂತಹ ಸಂದೇಶಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ.


ಇದನ್ನು ಓದಿದ್ದೀರಾ? : Fact Check : ಹಿಂದೂ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವುದನ್ನು ಶರೀಯಾ ಕಾನೂನಿನ ಪ್ರಕಾರ ಶಿಕ್ಷೆ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *