Fact Check | ಟರ್ಕಿಯ ಮಹಿಳಾ ಉಗ್ರಗಾಮಿ ಎಂದು ತಪ್ಪಾಗಿ ವಿಡಿಯೋ ಗೇಮ್ ಫೋಟೊ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ “ಬುಧವಾರ ಟರ್ಕಿಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಅಲ್ಲಿ ಭಯೋತ್ಪಾದಕರು ಏರೋ ಸ್ಪೇಸ್ ಮತ್ತು ರಕ್ಷಣಾ ಕಂಪನಿ TUSAS ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಈ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.” ಎಂದು ಉಲ್ಲೇಖಿಸಲಾಗಿದೆ. ಅದರಲ್ಲಿ ಈ ಮಹಿಳೆಯ ಚಿತ್ರವನ್ನು ಹಂಚಿಕೊಂಡು ಈಕೆ ಖುರ್ದಿಷ್ ಮಹಿಳೆ ಮತ್ತು ಮುಸ್ಲಿಂ ಉಗ್ರಗಾಮಿ ಎಂದು ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಕೆಲವರು ಇದೇ ವೈರಲ್ ಫೋಟೋವನ್ನು ಹಂಚಿಕೊಂಡು “ಟರ್ಕಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಭಯೋತ್ಪಾದಕರಲ್ಲಿ ಒಬ್ಬ ಮಹಿಳಾ ಭಯೋತ್ಪಾದಕೀಯ ಹೆಸರು ಫರಾ ಕರೀಮ್ ಈಕೆ ಮುಸ್ಲಿಂ ಸಮುದಾಯದವಳು. ಟರ್ಕಿಯ ಖುರ್ದ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ದಾಳಿಗಳಿಂದ ಫರಾ ಕೋಪಗೊಂದ್ದು, ಉಗ್ರಗಾಮಿಯಾಗಿದ್ದಾಳೆ” ಎಂದು ಫೋಟೋವನ್ನು ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋವಿನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯ್ತು. ಇದಕ್ಕಾಗಿ ನಾವು ಮೊದಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದವು. ಈ ವೇಳೆ ಟರ್ಕಿಯಲ್ಲಿನ ದಾಳಿಯ ಕುರಿತು ಹಲವು ಮಾಧ್ಯಮ ವರದಿಗಳು ಕಂಡು ಬಂದಿವೆ. ಈ ವರದಿಗಳ ಪ್ರಕಾರ ಅಕ್ಟೋಬರ್ 23ರಂದು ಟರ್ಕಿಯ ರಾಜಧಾನಿ ಅಂಕಾರದಲ್ಲಿರುವ ‘ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್’ ಪ್ರಧಾನ ಕಚೇರಿಯ ಹೊರಗೆ ನಡೆದ ಸ್ಪೋಟಕಗಳ ಹಿಂದೆ ಖುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಇದೆ ಎಂದು ಹೇಳಲಾಗಿದೆ. ಇದರಲ್ಲಿ ದಾಳಿಕೋರರ ಹೆಸರು “ಮೈನ್ ಸೆವ್ಗಿನ್ ಅಲ್ಸಿಸೆಕ್ (ಹೆಣ್ಣು)” ಮತ್ತು “ಅಲಿ ಓರೆಕ್ (ಪುರುಷ)” ಎಂದು ವರದಿ ಮಾಡಲಾಗಿದೆ. ಆದರೆ ವೈರಲ್ ಫೋಟೋವಿನೊಂದಿಗೆ ಹಂಚಿಕೊಳ್ಳಲಾದ ಫರಾ ಕರೀಮ್ ಎಂಬ ಹೆಸರು ಈ ವರದಿಯಲ್ಲಿ ಕಂಡುಬಂದಿಲ್ಲ

ಇನ್ನು ಹೆಚ್ಚಿನ ಮಾಹಿತಿಗಾಗಿ ವೈರಲ್ ಫೋಟೋವನ್ನು ಕಿ ಫ್ರೇಮ್‌ ಆಗಿ ಬಳಸಿಕೊಂಡು, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ನಟ ನಟಿಯರ ಕುರಿತು ಮಾಹಿತಿಯನ್ನು ಒದಗಿಸುವ ಆನ್ಲೈನ್ ಡೇಟಾಬೇಸ್ ವೆಬ್‌ಸೈಟ್‌ ಆದ IMDB ಯಲ್ಲಿ ಈ ಫೋಟೋ ಕಂಡು ಬಂದಿದೆ. ‘ಕಾಲ್ ಆಫ್ ಡ್ಯೂಟಿ: ಮಾಡರ್ನ್ ವಾರ್‌ಫೇರ್’ ಎಂಬ ಶಿರ್ಷಿಕೆಯಡಿ 2019ರಲ್ಲಿ ಬಿಡುಗಡೆಯಾದ ಗೇಮ್‌ನ ಪಾತ್ರಾದಾರಿಯಾಗಿದೆ. ಈ ಪಾತ್ರವನ್ನು ನಿರ್ವಹಿಸಿದವರು ಕ್ಲೌಡಿಯಾ ಡೌಮಿತ್ ಎಂಬ ನಟಿ ಎಂದು ತಿಳಿದು ಬಂದಿದೆ.

ಇದರಲ್ಲಿನ ಮಾಹಿತಿಯ ಆಧಾರದ ಮೇಲೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ, ಕ್ಲೌಡಿಯಾ ಡೌಮಿತ್ ಆಸ್ಟ್ರೇಲಿಯಾದ ನಟಿ.‌ ‘ಕಾಲ್ ಆಫ್ ಡ್ಯೂಟಿ: ಮಾಡರ್ನ್ ವಾರ್‌ಫೇರ್’ ಗೇಮ್‌ನಲ್ಲಿ  ಉರ್ಜಿಕ್ಸ್ತಾನ್ ಲಿಬರೇಶನ್ ಫೋರ್ಸ್‌ನ ನಾಯಕಿ ಫರಾಹ್ ಕರೀಮ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಗೇಮಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದವರಿಗೆ ಮತ್ತು ಈ ಗೇಮ್‌ ಆಡಿದವರಿಗೆ ಫರಾಹ್ ಕರೀಮ್ ಪಾತ್ರದ ಬಗ್ಗೆ ತಿಳಿದಿರುತ್ತದೆ. ಹೀಗಾಗಿ ವೈರಲ್‌ ಪೋಸ್ಟ್‌ ನಂಬಲು ಅರ್ಹವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ.. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ “ಟರ್ಕಿಯ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಮೂವರು ಭಯೋತ್ಪಾದಕರಲ್ಲಿ ಒಬ್ಬ ಮಹಿಳಾ ಭಯೋತ್ಪಾದಕಿ ಫರಾ ಕರೀಮ್” ಎಂದು ಹಂಚಿಕೊಳ್ಳಲಾದ ಫೋಟೋ ಗೇಮಿಂಗ್‌ಗೆ ಸಂಬಂಧಿಸಿದೆ. ಈ ವೈರಲ್‌ ಫೋಟೋದಲ್ಲಿರುವವರು ಆಸ್ಟ್ರೇಲಿಯಾದ ನಟಿ ಕ್ಲೌಡಿಯಾ ಡೌಮಿತ್. ವೈರಲ್‌ ಫೋಟೋ 2019ರಲ್ಲಿ ಬಿಡುಗಡೆಯಾದ ‘ಕಾಲ್ ಆಫ್ ಡ್ಯೂಟಿ: ಮಾಡರ್ನ್ ವಾರ್‌ಫೇರ್’ ಗೇಮ್‌ಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ ಮತ್ತು ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಪ್ರಸಾದ ವಿತರಿಸುತ್ತಿದ್ದ RSS ಕಾರ್ಯಕರ್ತರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *