Fact Check | ಮುಸ್ಲಿಂ ವ್ಯಕ್ತಿ ಬಿರಿಯಾನಿ ತಯಾರಿಕೆಯಲ್ಲಿ ಚರಂಡಿ ನೀರನ್ನು ಬಳಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಈ ವಿಡಿಯೋ ನೋಡಿ.. ಇಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಚರಂಡಿಯಿಂದ ನೀರನ್ನು ತೆಗೆದು ಅದರ ಮೂಲಕ ಆಹಾರವನ್ನು ತಯಾರಿಸುತ್ತಿದ್ದಾನೆ. ಅವರು ಕೇವಲ ಆಹಾರಕ್ಕೆ ಉಗುಳುವುದು ಮಾತ್ರವಲ್ಲ. ಈ ರೀತಿಯಾಗಿ ಆಹಾರಕ್ಕೆ ಕೊಳಕು ನೀರನ್ನು ಸೇರಿಸಿ, ಹಿಂದೂಗಳ ವಿರುದ್ಧ ಆಹಾರದ ಜಿಹಾದ್‌ ಅನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಸನಾತನಿ ಹಿಂದೂಗಳು ಎಚ್ಚರದಿಂದಿರಬೇಕು. ಮುಂದಿನ ದಿನಗಳಲ್ಲಿ ಮುಸಲ್ಮಾನರ ಹೋಟೆಲ್‌ಗಳಲ್ಲಿ ಆಹಾರ ಖರಿದಿಸುವುದನ್ನು ಹಿಂದೂಗಳು ನಿಲ್ಲಿಸಬೇಕಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ವಿಡಿಯೋವನ್ನು ನೋಡಿದ ಹಲವು ಮಂದಿ ಈ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಬರಹವನ್ನು ನೋಡಿ, ಮತ್ತು ವಿಡಿಯೋದಲ್ಲಿನ ಮುಸ್ಲಿಂ ವ್ಯಕ್ತಿಯನ್ನು ಗಮನಿಸಿ ವೈರಲ್‌ ವಿಡಿಯೋವನ್ನು ನಿಜವೆಂದು ಭಾವಿಸಿದ್ದಾರೆ. ಹೀಗಾಗಿ ಹಲವರು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರ ಜೊತೆಗೆ ವೈರಲ್‌ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಕಿಡಿ ಕಾರುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿರುವ ವೈರಲ್‌ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟನ್ನು ನಡೆಸಿದೆವು. ಈ ವೇಳೆ ನಮಗೆ 16 ಆಗಸ್ಟ್‌ 2023ರಂದು ಕಲ್ಕ ಪಿಂಜೋರ್‌ ಲೈವ್‌ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾದ ವರದಿಯೊಂದು ಕಂಡು ಬಂದಿದೆ

ಇದರ ಪ್ರಕಾರ ರೆಸ್ಟೋರೆಂಟ್‌ನಲ್ಲಿ ಕ್ಲೀನಿಂಗ್‌ ಮಾಡಿದ ನೀರನ್ನು ರಸ್ತೆ ಮತ್ತು ಚರಂಡಿಗೆ ಬಿಡುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೀಗಾಗಿ ಕೆಲವರು ಈ ರೆಸ್ಟೋರೆಂಟ್‌ಗೆ ದಾಳಿ ನಡೆಸಿ, ಡಾಬಾದ ನೀರನ್ನು ಗಟಾರಕ್ಕೆ ಬಿಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಹೋಟೆಲ್‌ ಮಾಲೀಕರು ಕೂಡ ಕೊಳಕು ನೀರನ್ನು ರಸ್ತೆಗೆ ಬಿಟ್ಟಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಕೂಡ ಲಿಖಿತವಾಗಿ ಕ್ಷಮಾಪಣೆಯನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಆಲ್ಟ್‌ ನ್ಯೂಸ್‌ ಕೂಡ ಪಿಂಜೋರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ವಿಚಾರಿಸಿದ್ದು, ಇದೇ ಮಾಹಿತಿಯನ್ನು ಪೊಲೀಸರು ಕೂಡ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್‌ ವಿಡಿಯೋದೊಂದಿಗೆ ಹಂಚಿಕೊಳ್ಳಲಾದ ಪ್ರತಿಪಾದನೆಯಂತೆ ಮುಸ್ಲಿಂ ವ್ಯಕ್ತಿಯೊಬ್ಬ ಕೊಳಚೆ ನೀರನ್ನು ಬಳಸಿಕೊಂಡು ಬಿರಿಯಾನಿ ತಯಾರಿಸಿದ್ದಾನೆ ಎಂಬುದು ಸುಳ್ಳು. ಇಲ್ಲಿ ಚರಂಡಿಯಿಂದ ನೀರನ್ನು ಹೋಟೆಲ್‌ಗೆ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಹೋಟೆಲ್‌ನಿಂದ ನೀರನ್ನು ಚರಂಡಿಗೆ ಮತ್ತು ರಸ್ತೆಗೆ ಬಿಡಲಾಗುತ್ತಿದೆ. ಆದರೆ ಕಿಡಿಗೇಡಿಗಳು ತಿರುಚಿ ವಿಡಿಯೋ ಮಾಡಿದ್ದಾರೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹರಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಬೈರುತ್‌ನಲ್ಲಿ ಭೀಕರ ಬಾಂಬ್‌ ದಾಳಿಯ ನಡುವೆಯೂ ವಿಮಾನವೊಂದು ಲ್ಯಾಂಡಿಂಗ್‌ ಎಂಬುದು AI ಚಿತ್ರವಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *