Fact Check | ಹದ್ದು ಸಿಂಹದ ಮೇಲೆ ಕುಳಿತಿರುವ ವೈರಲ್‌ ವಿಡಿಯೋ AI ನಿಂದ ರಚಿಸಲಾಗಿದೆ

ಸಿಂಹದ ಮೇಲೆ ಹದ್ದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಂಡು “ಹದ್ದು ಮತ್ತು ಸಿಂಹದ ಅಪರೂಪದ ಗೆಳೆತನ, ಪ್ರಾಣಿಗಳಲ್ಲಿರುವ ಈ ರೀತಿಯ ನಿಷ್ಕಲ್ಮಶ ಸ್ನೇಹ ಇತ್ತೀಚೆಗೆ ಮನುಷ್ಯನಲ್ಲಿ ಕಣ್ಮರೆಯಾಗುತ್ತಿದೆ, ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಬಾಂಧವ್ಯ ಹೆಚ್ಚಿದೆ” ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿವಿಧ ಬರಹಗಳ ಮೂಲಕ ವಿಡಿಯೋವಿನ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಈ ವಿಡಿಯೋ ಕೂಡ ನೋಡಲು ನಿಜವಾದ ವಿಡಿಯೋದಂತೆ ಭಾಸವಾಗುತ್ತಿರುವುದರಿಂದ ಸಾಕಷ್ಟು ಮಂದಿ ಈ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಹಲವು ಬಳಕೆದಾರರ ಅಚ್ಚರಿಗೆ ಕಾರಣವಾಗಿದ್ದು, ಕೆಲ ಪ್ರಾಣಿಪ್ರಿಯರು ಕೂಡ ವಿಡಿಯೋ ಬಗ್ಗೆ ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ವೈರಲ್‌ ವಿಡಿಯೋ ಸಾರ್ವಜನಿಕ ವಲಯದಲ್ಲಿ ಗೊಂದಲಕ್ಕೆ ಕೂಡ ಕಾರಣವಾಗಿದೆ. ಹೀಗೆ ವಿವಿಧ ಆಯಾಮಗಳಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ಮೊದಲು ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಈ ವೇಳೆ ನಮಗೆ ವಿಡಿಯೋದಲ್ಲಿ ಕೆಲವೊಂದು ಲೋಪಗಳಿರುವುದು ಕಂಡು ಬಂದಿದೆ. ಉದಾಹರಣೆಗೆ, ವೀಡಿಯೊದಲ್ಲಿನ ಒಂದು ಫ್ರೇಮ್‌ನಲ್ಲಿ, ಸಿಂಹವು ಹದ್ದಿಗೆ ಹೋಲುವ ರೆಕ್ಕೆಯನ್ನು ಹೊಂದಿರುವಂತೆ ಕಾಣುತ್ತದೆ. ಸಿಂಹದ ಎಡಭಾಗದಿಂದ ರೆಕ್ಕೆ ಸ್ಪಷ್ಟವಾಗಿ ಹೊರಬರುವುದನ್ನು ಕಾಣಬಹುದು. ಅಲ್ಲದೆ, ದೃಷ್ಯಗಳಲ್ಲಿ, ಹದ್ದಿನ ಕೊಕ್ಕು ಹಳದಿ ಬಣ್ಣದಲ್ಲಿದೆ, ಆದರೆ ಕೆಲವು ತುಣುಕಿನಲ್ಲಿ ಕೊಕ್ಕು ಕಪ್ಪು ಬಣ್ಣದಲ್ಲಿದೆ. ಇನ್ನೂ ಕೆಲವು ತುಣುಕುಗಳಲ್ಲಿ, ಹದ್ದಿನ ಮುಖವು ಬಿಳಿ ಬಣ್ಣದಿಂದ ಕಂದು ಬಣ್ಣಕ್ಕೆ ಬದಲಾಗುತ್ತದೆ. ಇಂತಹ ಲೋಪಗಳು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿಕೊಂಡು ರಚಿಸಲಾದ ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಸಾಧಾರಣವಾಗಿ ಕಂಡುಬರುತ್ತವೆ.

ಇನ್ನು ನಾವು ಈ ಬಗ್ಗೆ ಹೆಚ್ಚಿನ ಪರಿಶೀಲನೆಗಾಗಿ ಹೈವ್ ಎಂಬ AI ವಿಷಯ ಪತ್ತೆ ಸಾಧನದ ಮೂಲಕ ವೀಡಿಯೊವನ್ನು ಪರಿಶೀಲನೆ ನಡೆಸಿದೆವು. ಈ ಪರಿಶೀಲನೆಯ ವರದಿಯಲ್ಲಿ ವೀಡಿಯೊವು AI- ರಚಿತವಾಗಿರುವ 99.9% ಸಂಭವನೀಯತೆಯನ್ನು ಹೊಂದಿದೆ ಎಂದು ಎಂಬ ಫಲಿತಾಂಶ ಲಭ್ಯವಾಗಿದೆ. ಈ ವರದಿಯ ಆರ್ಕೈವ್ ಮಾಡಿದ ಆವೃತ್ತಿಯನ್ನು ನೀವು ಇಲ್ಲಿ ಕಾಣಬಹುದು.

ಈ ಬಗ್ಗೆ ಇನ್ನಷ್ಟು ಸ್ಪಷ್ಟನೆಯನ್ನು ಪಡೆದುಕೊಳ್ಳಲು, ಹಗ್ಗಿಂಗ್ ಫೇಸ್‌ನ ‘ಮೇಬೀಸ್ AI ಆರ್ಟ್ ಡಿಟೆಕ್ಟರ್‘ ನಲ್ಲಿ ವಿಡಿಯೋವಿನ ಹಲವು ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಪರಿಶೀಲನೆ ನಡೆಸಿದೆವು. ಈ ವೇಳೆ ವರದಿಯು ಇದು AIನಿಂದ ನಿರ್ಮಿತವಾದ ವಿಡಿಯೋ ಎಂಬುದನ್ನು ಖಚಿತ ಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಸಿಂಹ  ಮತ್ತು ಹದ್ದು ಒಟ್ಟಿಗೆ ಇರುವ ವಿಡಿಯೋ AI ನಿಂದ ರಚಿಸಲಾಗಿದೆ. ಇದು ನಿಜವಾದ ವಿಡಿಯೋವಲ್ಲ. ಹಾಗಾಗಿ ಈ ವಿಡಿಯೋ ನಿಮಗೆ ಕಂಡು ಬಂದರೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ನಿರೂಪಣೆಯಿಂದ ಕೂಡಿರುವ ಸುದ್ದಿ ಅಥವಾ ಅದಕ್ಕೆ ಸಂಬಂಧ ಪಟ್ಟ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಸುಳ್ಳು ಹಂಚಿಕೊಂಡ ಬಿಜೆಪಿ ನಾಯಕರು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *