Fact Check | ಬೈರುತ್‌ನಲ್ಲಿ ಭೀಕರ ಬಾಂಬ್‌ ದಾಳಿಯ ನಡುವೆಯೂ ವಿಮಾನವೊಂದು ಲ್ಯಾಂಡಿಂಗ್‌ ಎಂಬುದು AI ಚಿತ್ರವಾಗಿದೆ

“ಈ ವಿಡಿಯೋ ನೋಡಿ.. ಇದು ಲೆಬನಾನ್‌ನ ರಾಜಧಾನಿ ಬೈರುತ್‌ನ ಅಂತರಾಷ್ಟ್ರೀಯಾ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಾಗಿದೆ. ಈ ವಿಮಾನ ನಿಲ್ದಾಣದ ಮೇಲೆ, ಇಸ್ರೇಲ್ ಪಡೆಗಳು ಭೀಕರವಾದ ದಾಳಿ ನಡೆಸಿವೆ. ಇದರ ನಡುವೆ ಮಿಡಲ್‌ ಈಸ್ಟ್‌ ಏರ್ಲೈನ್ಸ್‌ನ ವಿಮಾನವೊಂದು ಪ್ರಯಾಣಿಕರನ್ನು ಹೊತ್ತು ಆ ಸಂದರ್ಭದಲ್ಲಿ ಬೈರುತ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಇಸ್ರೇಲಿ ಸೇನೆ ದಾಳಿಯನ್ನು ನಡೆಸಿತ್ತು. ಆದರೂ ಇದಕ್ಕೆ ಎದೆಗುಂದದ ಪೈಲೆಟ್ ಸಾಕಷ್ಟು ಸಮಯದ ಪ್ರಯತ್ನದ ನಂತರ, ಬಾಂಬ್‌ ದಾಳಿ ಮತ್ತು ದಟ್ಟವಾದ ಹೊಗೆಯ ನಡುವೆಯೇ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಾನೆ.” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ ಅನ್ನು ಹಲವು ಮಂದಿ ನಿಜವೆಂದು ಭಾವಿಸಿದ್ದಾರೆ ಹಾಗೂ ಇದನ್ನು ವ್ಯಾಪಕವಾಗಿ ಶೇರ್ ಕೂಡ ಮಾಡುತ್ತಿದ್ದಾರೆ. ಆದರೆ ಈ ರೀತಿಯ ಯುದ್ಧಗ್ರಸ್ಥ ಪ್ರದೇಶಕ್ಕೆ ಹೇಗೆ ನಾಗರಿಕ ಸಾರಿಗೆಯ ವಿಮಾನ ಒಂದು ಪ್ರವೇಶಿಸಲು ಅನುಮತಿಯನ್ನು ನೀಡಲಾಯಿತು ಎಂಬ ಅನುಮಾನಗಳು ಕೂಡ ಮೂಡಲು ಆರಂಭಿಸಿದೆ. ಹೀಗಾಗಿ ಹಲವು ಮಂದಿ ಇದು ಎಡಿಟೆಡ್ ಫೋಟೋ ಎಂದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಶೇರ್ ಆಗುತ್ತಿರುವ ವೈರಲ್‌ ಫೋಟೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಚಿತ್ರದ ಸ್ಕ್ರೀನ್‌ಶಾಟ್‌ ಅನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ 21 ಅಕ್ಟೋಬರ್ 2024 ರಂದು “eyesoflebanon” ಹೆಸರಿನ Instagram ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಇದೇ ರೀತಿಯ ಚಿತ್ರವೊಂದು ಕಂಡು ಬಂದಿದೆ. ಈ ಪೋಸ್ಟ್‌ನ ಶೀರ್ಷಿಕೆಯು ಈ ಚಿತ್ರ AI ನಿಂದ ನಿರ್ಮಿಸಲಾಗಿದೆ ಎಂಬುದನ್ನು ಖಚಿತ ಪಡಿಸಿದೆ.

ಈ ಚಿತ್ರದ ಜೊತೆಗೆ, ಬಳಕೆದಾರರು ಇದೇ ರೀತಿಯ ವೈರಲ್‌ ಫೋಟೋಗೆ ಹೋಲಿಕೆಯಾಗುವ ಇನ್ನಷ್ಟು AI- ರಚಿತ ಚಿತ್ರವನ್ನು ಕೂಡ ಇವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವು ಈ ವೈರಲ್‌ ಚಿತ್ರವನ್ನು  ಹೈವ್ AI ಡಿಟೆಕ್ಟರ್ ಅನ್ನು ಬಳಸಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್‌ ಚಿತ್ರದ ಫಲಿತಾಂಶದಲ್ಲಿ ಅದು 96.4% AI- ರಚಿತವಾಗಿದೆ ಎಂಬುದನ್ನು ದೃಢಪಡಿಸಿದೆ.

ಈ ಬಗ್ಗೆ ಮತ್ತಷ್ಟು ಪರಿಶೀಲಿಸಲು, ನಾವು ಮತ್ತೊಂದು ಟ್ರೂ ಮೀಡಿಯಾ AI ಡಿಟೆಕ್ಟರ್ ಎಂಬ AI ಉಪಕರಣವನ್ನು ಬಳಸಿದ್ದೇವೆ, ಇದು ಕೂಡ ನಮಗೆ ವೈರಲ್‌ ಚಿತ್ರ ಕೃತಕ ಬುದ್ಧಿಮತ್ತೆಯ ಸಹಾಯದಿಂದ  ರಚಿಸಲಾಗಿದೆ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಕಿ ಮತ್ತು ಹೊಗೆಯಿಂದ ಸುತ್ತುವರಿದಿರುವ ಬೈರುತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದ ಲ್ಯಾಂಡಿಂಗ್‌ನ AI- ರಚಿತವಾದ ಚಿತ್ರವನ್ನು ನಿಜವಾದ ಚಿತ್ರವೆಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವೈರಲ್‌ ಚಿತ್ರವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಲೆಬನಾನ್ ಮೇಲಿನ ದಾಳಿಯ ವೀಡಿಯೊವನ್ನು ಇಸ್ರೇಲ್‌ ಪ್ರಧಾನಿ ನಿವಾಸದ ಮೇಲಿನ ದಾಳಿ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *