Fact Check | ಆಸ್ಟ್ರೇಲಿಯಾದ ವಿಡಿಯೋವನ್ನು ಬೆಂಗಳೂರಿನಲ್ಲಿ ಮಳೆಗೆ ರಸ್ತೆಯಲ್ಲಿ ಶಾರ್ಟ್‌ ಸರ್ಕ್ಯೂಟ್ ಎಂದು ಹಂಚಿಕೆ

“ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ…. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ” ಎಂದು ರಾಜ್ಯ ಸರ್ಕಾರದ ವಿರುದ್ದ ವಿಡಿಯೋವೊಂದನ್ನು ಹಂಚಿಕೊಂಡಿರುವ ಹಲವು ಸಾಮಾಜಿಕ ಜಾಲತಾಣದ ಬಕೆದಾರರು, ಬ್ರ್ಯಾಂಡ್‌ ಬೆಂಗಳೂರು ಎಂಬುದು ಹೆಸರಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸುತ್ತಿದ್ದಾರೆ. ಇದರ ಜೊತೆಗೆ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಕೂಡ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪ್ರಶ್ನೆ ಮಾಡಿದ್ದಾರೆ.

ಹೀಗೆ ವಿವಿಧ ಬರಹಗಳೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನಿಜವೆಂದು ಭಾವಿಸಿರುವ ಹಲವರು, ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಳಿ ಈಗ ಹಣವಿಲ್ಲ ಮತ್ತು ಯಾವುದೇ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಸಾಕಷ್ಟು ಮಂದಿ ಕಿಡಿ ಕಾರಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್ ಗಳನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ 16 ಅಕ್ಟೋಬರ್ 2024 ರಂದು @anthraxxx781 ಎಂಬ ಖಾತೆಯಿಂದ ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡುಬಂದಿದ್ದು, ಇದರಲ್ಲಿ ವಿಯೆಟ್ನಾಂ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಇದರ ಆಧಾರದ ಮೇಲೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ನಲ್ಲಿ ಹುಡುಕಾಟವನ್ನು ನಡೆಸಿದಾಗ ವಿಯೆಟ್ನಾಂ ಪ್ಲಸ್ ಎಂಬ ಸುದ್ದಿ ತಾಣದಲ್ಲಿ ಕ್ಯಾನ್‌ ಥೋ ಪ್ರದೇಶದ ಪ್ರವಾಹ ಪೀಡಿತ ರಸ್ತೆಯಲ್ಲಿ, ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿರುವ ಆಘಾತಕಾರಿ ವಿಡಿಯೋ ಕಂಡು ಬಂದಿದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವರದಿಯ ಪ್ರಕಾರ ಈ ವೈರಲ್‌ ವಿಡಿಯೋ ವಿಯೆಟ್ನಾಂಗೆ ಸಂಬಂಧಿಸಿದೆಯೇ ಹೊರತು ಬೆಂಗಳೂರಿನ ಬಗ್ಗೆ ಈ ವರದಿಯಲ್ಲಿ ಎಲ್ಲಿಯೂ ಉಲ್ಲೇಖವೇ ಇಲ್ಲ.

ಇನ್ನು ಅಫ್ಯಾಮಿಲಿ ಎಂಬ ಸುದ್ದಿ ತಾಣವು 16 ಅಕ್ಟೋಬರ್ 2024 ರಂದು ಹಂಚಿಕೊಂಡಿರುವ ವರದಿಯಲ್ಲಿ ಕೂಡ ಇದೇ ಅಂಶವನ್ನು ಉಲ್ಲೇಖಿಸಲಾಗಿದೆ ಇದರಲ್ಲಿ ಭಾರಿ ಚಂಡಮಾರುತದ ಸಮಯದಲ್ಲಿ ಹೈ ವೋಲ್ಟೇಜ್ ವಿದ್ಯುತ್ ತಂತಿಯೊಂದು ತುಂಡಾಗಿ ಪ್ರವಾಹದಲ್ಲಿ ಮುಳುಗಿ ಬಿದ್ದಿದೆ. ಇದರಿಂದ ವಿದ್ಯುತ್ ಕಿಡಿಗಳು ಹಾರಿದೆ ಎಂದು ತನ್ನ ವರದಿಯಲ್ಲಿ ವಿವರಿಸಿದೆ. ಇನ್ನೂ ಹಲವು ವರದಿಗಳು ಕೂಡ ವೈರಲ್‌ ವಿಡಿಯೋವನ್ನೇ ಹಂಚಿಕೊಂಡು ಈ ಘಟನೆ ವಿಯಟ್ನಾಂ ಅಲ್ಲಿ ನಡೆದಿದೆ ಎಂದು ಉಲ್ಲೇಖಿಸಿವೆ.

ಒಟ್ಟಾರೆಯಾಗಿ ಈ ಎಲ್ಲಾ ವರದಿಗಳು ಮತ್ತು ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋ ಬೆಂಗಳೂರಿನ ಮಳೆಗೆ ಸಂಬಂಧಪಟ್ಟಿದ್ದಲ್ಲ. ವಿಯೆಟ್ನಾಂಗೆ ವಿಡಿಯೋ ಸಂಬಂಧ ಪಟ್ಟಿದೆ. ಅಲ್ಲಿನ ರಸ್ತೆಯಲ್ಲಿ ನೀರು ತುಂಬಿದ ವೇಳೆ, ಹೈ ವೋಲ್ಟೇಜ್ ವಿದ್ಯುತ್ ತಂತಿ ನೀರಿನೊಳಗೆ ಬಿದ್ದು, ವಿದ್ಯುತ್ ಕಿಡಿಗಳು ಹಾರಿವೆ. ಈ ಕುರಿತು ಹಲವು ಮಾಧ್ಯಮಗಳು ಕೂಡ ವರದಿಯನ್ನು ಮಾಡಿವೆ. ಇದೇ ದೃಶ್ಯಗಳನ್ನು ಬಳಸಿಕೊಂಡು ಇದು ಬೆಂಗಳೂರಿನ ವಿಡಿಯೋ ಎಂದು ಸುಳ್ಳು ಸುದ್ದಿಯನ್ನು ಹಡಲಾಗುತ್ತಿದೆ. ಹಾಗಾಗಿ ಸುಳ್ಳು ನಿರೂಪಣೆಯಿಂದ ಕೂಡಿರುವ ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ ಮತ್ತು ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : 2024ರ ಯುಎಸ್‌ ಚುನಾವಣೆಗೂ ಮುಂಚೆ ಸ್ನೂಪ್ ಡಾಗ್ ಟ್ರಂಪ್‌ರನ್ನು ಟೀಕಿಸಿದ್ದಾರೆ ಎಂದು 2018ರ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *