Fact Check | ಆಂಧ್ರಪ್ರದೇಶದಲ್ಲಿ ಮುಸಲ್ಮಾನರು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದಾರೆ ಎಂಬುದು ಸುಳ್ಳು

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹಾನಿ ಮಾಡಲಾಗಿತ್ತು. ಸಾಕಷ್ಟು ಟಿವಿ ಚಾನಲ್ ಗಳು ಈ ಕುರಿತಂತೆ ಸುದ್ದಿಯನ್ನು ಬಿತ್ತರಿಸಿದ್ದವು. ಆದರೆ ಹಲವು ಮಾಧ್ಯಮಗಳು ಈ ಸುದ್ದಿಗೆ ಧರ್ಮದ ಲೇಪನ ಹಚ್ಚಿ ಸುದ್ದಿ ಪ್ರಸಾರ ಮಾಡಿವೆ. ಈ ದೇವಸ್ಥಾನ ಧ್ವಂಸ ಮಾಡುವ ಕೃತ್ಯದ ಹಿಂದೆ ಮುಸಲ್ಮಾನರಿದ್ದಾರೆ ಎಂದು ಭಾವನೆ ಬರುವಂತೆ ಹಲವು ಸುದ್ದಿ ಸಂಸ್ಥೆಗಳು ತಿರುಚಿ ಸುದ್ದಿಯನ್ನು ಪ್ರಕಟಿಸಿದ್ದವು. ಇದೀಗ ಈ ಘಟನೆಯನ್ನು ಹಲವರು ನಿಜವೆಂದು ಭಾವಿಸಿದ್ದಾರೆ.

ಸಾಕಷ್ಟು ಮಂದಿ ಸುದ್ದಿ ಸಂಸ್ಥೆಗಳು ಮಾಡಿದ ಎಡವಟ್ಟಿನ ಸುದ್ದಿಗಳನ್ನೇ ನಿಜವೆಂದು ನಂಬಿ ತಮ್ಮ ವೈಯಕ್ತಿ ಸಾಮಾಜಿಕ ಜಾಲತಾಣದ  ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಸುದ್ದಿ ನೋಡಿದ ಹಲವು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶಿಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಅಕ್ಟೋಬರ್ 16, 2024 ರಂದು ಇಂಡಿಯಾ ಟುಡೆ ಯೂಟ್ಯುಬ್‌ ಚಾನಲ್‌ನಲ್ಲಿ ಹಂಚಿಕೊಂಡ ವಿಡಿಯೋ ವರದಿಯೊಂದು ಕಂಡು ಬಂದಿದೆ. ಅದರಲ್ಲಿ ಚಿತ್ತೂರು ಜಿಲ್ಲೆಯ ಚೇವರೂರಿನ ಮಲ್ಕಾರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಬುಲೆಟಿನ್ ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಅಕ್ಟೋಬರ್ 18 ರಂದು ತೆಲಂಗಾಣ ಟುಡೆ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ “ಕನಗುಂಡ ಸ್ವಾಮಿ ದೇವಾಲಯದ ಅರ್ಚಕನಾಗಿರುವ ಹರಿನಾಥನಿಗೆ ಅಭಯ ಆಂಜನೇಯ ದೇವಾಲಯದ ಅರ್ಚಕನೊಂದಿಗೆ ಮನಸ್ತಾಪವಿತ್ತು. ದೇವಾಲಯಕ್ಕೆ ಬರುವ ಆದಾಯವನ್ನು ಹಂಚಿಕೊಳ್ಳುವ ವಿಷಯದಲ್ಲಿ ಈ ಮನಸ್ತಾಪ ಉಂಟಾಗಿತ್ತು” ಎಂದು ಉಲ್ಲೇಖಿಸಲಾಗಿದೆ.

ಈ ವರದಿಯಲ್ಲಿ ಇನ್ನೂ ಮುಂದುವರೆದು “ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ತನ್ನ ಅಧೀನಕ್ಕೆ ತಂದುಕೊಳ್ಳುವ ಉದ್ದೇಶವನ್ನು ಅರ್ಚಕ ಹರಿನಾಥ ಹೊಂದಿದ್ದ. ಆದರೆ ಅಭಯ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ವಿದ್ಯಾಸಾಗರ್ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಇದು ಹರಿನಾಥನಲ್ಲಿ ಸಿಟ್ಟು ತರಿಸಿತು. ಆದ್ದರಿಂದ ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ಸ್ಪೋಟಿಸುವುದಕ್ಕೆ ಹರಿನಾಥ ತಂತ್ರ ಹೆಣೆದ. ಅದಕ್ಕಾಗಿ ದೇವಸ್ಥಾನದಲ್ಲಿ ಸ್ಫೋಟಕಗಳನ್ನು ಇರಿಸಿದ. ಒಂದು ವೇಳೆ ಸ್ಪೋಟಕ ಸಿಡಿದು ದೇವಾಲಯಕ್ಕೆ ಹಾನಿ ಆದರೆ ಅಲ್ಲಿಂದ ಈ ವಿದ್ಯಾಸಾಗರ ಹೊರಟು ಹೋಗಬಹುದು ಎಂದು ಆತ ಅಂದಾಜಿಸಿದ್ದ. ಸ್ಪೋಟಕ ಸಿಡಿಯದೆ ಹೋದಾಗ ಸುತ್ತಿಗೆ ಇತ್ಯಾದಿಗಳನ್ನು ಬಳಸಿ ದೇವಸ್ಥಾನದ ಮೂರ್ತಿಗಳಿಗೆ ಹಾನಿ ಮಾಡಿದ್ದ” ಎಂಬುದನ್ನು ಕೂಡ ಈ ವರದಿಯಲ್ಲಿ ಕಾಣಬಹುದಾಗಿದೆ. ಇದೇ ಅಂಶವನ್ನು ಇನ್ನೂ ಹಲವು ಪತ್ರಿಕೆಗಳ ವರದಿಗಳಲ್ಲಿ ಕಾಣಬಹುದಾಗಿದೆ.

ಇನ್ನು ಅನ್ನಮಯ್ಯ ಜಿಲ್ಲೆಯ ಪೊಲೀಸರು ಇದೀಗ ಅರ್ಚಕ ಹರಿನಾಥ ಸೇರಿದಂತೆ ಇನ್ನೂ 5 ಮಂದಿಯನ್ನ ಬಂಧಿಸಿದ್ದಾರೆ. ಈ ಬಗ್ಗೆ ಅನ್ನಮಯ್ಯ ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ಎಕ್ಸ್‌ ಖಾತೆ ಹಾಗೂ ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿಯನ್ನು ನೀಡಿದ್ದು, ಈ ಗಲಭೆಗೆ ಮುಸಲ್ಮಾನರೇ ಕಾರಣ ಎಂಬ ಅಂಶ ಎಲ್ಲೂ ಉಲ್ಲೇಖವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಅಭಯ ಅಂಜನೇಯ ದೇವಸ್ಥಾನವನ್ನು ಮುಸಲ್ಮಾನರು ಧ್ವಂಸ ಮಾಡಿದ್ದಾರೆ ಎಂಬುದು ಸುಳ್ಳು. ಈ ಕೃತ್ಯ ದೇವಸ್ಥಾನದ ಅರ್ಚಕರ ನಡುವೆ ಇರುವ ವೈಮನಸ್ಯದಿಂದ ನಡೆದಿದೆ. ಇದಕ್ಕೂ ಮುಸಲ್ಮಾನರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಪೊಲೀಸರು ನೀಡಿರುವ ಮಾಹಿತಿಯಲ್ಲೂ ಈ ಘಟನೆಗೆ ಅರ್ಚಕರ ನಡುವಿನ ಕಲಹವೇ ಕಾರಣ ಹೊರತು ಯಾವುದೇ ಕೋಮು ಆಯಾಮವಿಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್‌ ಪೋಸ್ಟ್‌ ಅನ್ನು ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಹಸುಗಳು ಆಮ್ಲಜನಕವನ್ನು ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುತ್ತವೆ ಎಂದು ಸುಳ್ಳು ಹೇಳಿದ ಬಿಜೆಪಿ ಸಚಿವೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *