Fact Check : ಯೆಮೆನ್‌ ಸನಾದ ವಾರ್ಷಿಕೋತ್ಸವ ಮೆರವಣಿಗೆಯ ವಿಡಿಯೋವನ್ನು, ಯತಿ ನರಸಿಂಹಾನಂದರ ವಿರುದ್ಧ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಪ್ರವಾದಿ ಮುಹಮ್ಮದ್‌ರ ವಿರುದ್ಧ  ಯತಿ ನರಸಿಂಹಾನಂದ ಹೇಳಿಕೆ ನೀಡಿದ್ದಾರೆ. ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿದೇಶದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ನಿಜವನ್ನು ತಿಳಿದುಕೊಳ್ಳೋಣ.

ಫ್ಯಾಕ್ಟ್‌ ಚೆಕ್‌ :

ಯೆಮೆನ್ ಹೌತಿ ಗುಂಪಿನ ನೂರಾರು ಅನುಯಾಯಿಗಳು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಹತ್ತನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿಡಿಯೋವನ್ನು ಯತಿ ನರಸಿಂಹಾನಂದರ ವಿರುದ್ಧದ ಪ್ರತಿಭಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್‌ ವಿಡಿಯೋದ ಹಿನ್ನೆಲೆಯ ದೃಶ್ಯದಲ್ಲಿರುವ ಬ್ಯಾನರ್ ಯೆಮೆನ್ ಧ್ವಜವನ್ನು ಹೋಲುತ್ತಿದೆ. ಪ್ರತಿಭಟನೆಯ ಸ್ಥಳವನ್ನು ಈ ದೃಶ್ಯವು ಸೂಚಿಸುತ್ತದೆ. “ಯೆಮೆನ್ ಪ್ರತಿಭಟನೆ ಯತಿ ನರಸಿಂಹಾನಂದ” ಎಂಬ ಕೀವರ್ಡ್ ಬಳಸಿ ಹುಡುಕಿದಾಗ, ಅಂತಹ ಪ್ರದರ್ಶನದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ದೊರೆತಿಲ್ಲ.

ಈ ವೈರಲ್‌ ವಿಡಿಯೋದ ಕೆಲವು ಚಿತ್ರಗಳನ್ನು ಸ್ಕ್ರೀನ್‌ಶಾಟ್‌ ತೆಗೆದು Google ರಿವರ್ಸ್ ಇಮೇಜ್ ಬಳಸಿ ಹುಡುಕಿದಾಗ,  2024ರ ಸೆಪ್ಟೆಂಬರ್ 23ರಂದು ಜೋರ್ಡಾನ್ ಮೂಲದ ರೋಯಾ ಎಂಬ ಇಂಗ್ಲಿಷ್‌ ನ್ಯೂಸ್ ಯುಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋ ಲಭಿಸಿದೆ. “ಯೆಮೆನ್‌ನ ಹೌತಿಗಳು ಸನಾ ಸ್ವಾಧೀನಪಡಿಸಿಕೊಂಡ ನಂತರ ದಶಕದ ಸಂಭ್ರಮಾಚರಣೆಗಾಗಿ  ಮಿಲಿಟರಿ ಮೆರವಣಿಗೆಯನ್ನು ನಡೆಸಿದ್ದಾರೆ” ಎಂದು ಬರೆದು ಹಂಚಿಕೊಳ್ಳಲಾಗಿತ್ತು.

ಬ್ಯಾನರ್, ಧ್ವಜ, ಹಿನ್ನೆಲೆಯಲ್ಲಿ ಕಂಡುಬರುವ ಕಟ್ಟಡಗಳು, ಬಿಲ್‌ಬೋರ್ಡ್ ಮತ್ತು ಭಾಗವಹಿಸಿದವರು ಧರಿಸಿರುವ ಬಿಳಿ ಕ್ಯಾಪ್‌ಗಳ ದೃಶ್ಯಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಚಿತ್ರಗಳ ಹೋಲಿಕೆಗಳು ಒಂದನ್ನೊಂದು ಹೋಲುತ್ತವೆ.

ಮೆರವಣಿಗೆಗೆ ಸಂಬಂಧಿಸಿದ ಸುದ್ದಿ ವರದಿಗಳು ಲಭಿಸಿವೆ. ಯೆಮೆನ್ ಹೌತಿ ಗುಂಪಿನ ನೂರಾರು ಅನುಯಾಯಿಗಳು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಹತ್ತನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಿದವರು ಸಮವಸ್ತ್ರಗಳನ್ನು ಧರಿಸಿ, ಶಸ್ತ್ರಾಸ್ತ್ರಗಳನ್ನು ಮತ್ತು ಫಲಕಗಳನ್ನು ಹಿಡಿದು, ಯೆಮೆನ್ ಮತ್ತು ಪ್ಯಾಲೆಸ್ಟೈನ್ ಧ್ವಜಗಳನ್ನು ಹಾರಿಸುತ್ತ ರಾಜಧಾನಿ ಸನಾದಲ್ಲಿ ಸೇರಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಯೆಮೆನ್‌ನ ಸನಾದ ವಾರ್ಷಿಕೋತ್ಸವದ ಮೆರವಣಿಗೆಯ ವಿಡಿಯೋವನ್ನು, ಯತಿ ನರಸಿಂಹಾನಂದರ ವಿರುದ್ಧದ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ :

Fact Check : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೆಎಲ್ ರಾಹುಲ್‌ನನ್ನು ಹೆಗಲ ಮೇಲೆ ಎತ್ತಿಕೊಂಡಿರುವ ದೃಶ್ಯ ಎಡಿಟೆಡ್‌ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *