Fact Check | ಯುವಕನೊಬ್ಬ ಹಸುವನ್ನು ಹಿಂಸಿಸಿದ್ದಕ್ಕೆ ಪೊಲೀಸರು ಆತನಿಗೆ ಥಳಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಅದರಲ್ಲಿ ” ಈ ವಿಡಿಯೋವನ್ನು ಸರಿಯಾಗಿ ಗಮನವಿಟ್ಟು ನೋಡಿ, ಆ ಯುವಕ ಹಸುವಿಗೆ ಚಿತ್ರಹಿಂಸೆ ನೀಡಿದ್ದಾನೆ, ಇದನ್ನು ವಿಡಿಯೋ ಮಾಡಿ ಹಂಚಿಕೊಂಡು ವಿಕೃತವಾಗಿ ಆನಂದಿಸಿದ್ದಾನೆ. ಆದರೆ ಇದಾದ ಬಳಿಕ ಆತನಿಗೆ ಬಂದ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೂಡ ನೀವು ಈ ವಿಡಿಯೋದಲ್ಲಿ ನೋಡಬಹುದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಇಂತಹ ಕಿಡಿಗೇಡಿಗಳಿಗೆ ಪೊಲೀಸರು ಇದೇ ರೀತಿಯ ಶಿಕ್ಷೆಯನ್ನು ನೀಡಬೇಕು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದಲ್ಲಿ ಎರಡೂ ವಿಡಿಯೋಗಳ ಕೊಲಾಜ್‌ ಕಂಡು ಬಂದಿದೆ. ಒಂದರಲ್ಲಿ ಯುವಕನೊಬ್ಬ ಹಸುವಿನ ತಲೆಯನ್ನು ತಿರುಗಿಸಿ, ನೆಲಕ್ಕೆ ಬಿಳಿಸಿ ಹಿಂಸಿಸಿದ್ದಾನೆ, ಮತ್ತೊಂದು ವಿಡಿಯೋದಲ್ಲಿ ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಈ ಎರಡೂ ವಿಡಿಯೋಗಳ ಕೊಲಾಜ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೋಮು ನಿರೂಪಣೆಯನ್ನು ನೀಡಿದ್ದಾರೆ. ಹೀಗಾಗಿ ವಿಡಿಯೋ ಕೂಡ ವೈರಲ್‌ ಆಗಿದೆ. ಹೀಗೆ ವಿವಿಧ ಸುದ್ದಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. Instagram ಬಳಕೆದಾರ tedthestoner ಎಂಬುವವರು ಈ ವೈರಲ್‌ ವಿಡಿಯೋವನ್ನು  ಮಾರ್ಚ್ 23, 2022 ರಂದು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಆದರೆ ಈ ಯುವಕನ ಹೆಸರು ಮತ್ತು ವಿಳಾಸ ಮತ್ತು ವೀಡಿಯೊದ ಸ್ಥಳದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಸುಮಾರು ಎರಡೂವರೆ ವರ್ಷಗಳಿಂದ ಈ ವೀಡಿಯೋ ಅಂತರ್ಜಾಲದಲ್ಲಿ ಇದೆ ಎಂಬುದು ಸ್ಪಷ್ಟವಾಯಿತು.

ಇದರ ನಂತರ, ನಾವು ಎರಡನೇ ವೀಡಿಯೊದ ಕೀಫ್ರೇಮ್ ಅನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ದಕ್ಕೆ ಸಂಬಂಧಿಸಿದ ವೀಡಿಯೊ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ 6 ಮೇ 2021 ರಂದು ಪ್ರಕಟಿಸಲಾಗಿದೆ. ಇದರಲ್ಲಿ ವೈರಲ್ ವಿಡಿಯೋದ ಎರಡನೇ ಭಾಗವನ್ನು ನೋಡಬಹುದು. ಇದರ ಪ್ರಕಾರ, ಚಂದೌಲಿ ಜಿಲ್ಲೆಯ ಬಲುವಾ ಪೊಲೀಸ್ ಠಾಣೆಯ ವಿಷಯವಾಗಿದ್ದು, ಮೊಬೈಲ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಅಪ್ರಾಪ್ತರನ್ನು ಥಳಿಸಿದ್ದಾರೆ. ವೀಡಿಯೊ ವೈರಲ್ ಆದ ನಂತರ, ಬಲುವಾ ಪೊಲೀಸ್ ಠಾಣೆಯ ಪ್ರಭಾರಿ ಮತ್ತು ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ.

ಮೇ 2, 2021 ರಂದು, ಚಂಡೌಲಿ ಪೊಲೀಸರು ಈ ವೈರಲ್‌ ವಿಡಿಯೋ ಕುರಿತು  ಪೋಸ್ಟ್ ಮಾಡಿ “ಮೊಬೈಲ್ ಅಂಗಡಿಗೆ ಕಳ್ಳತನ ಮಾಡುವ ಉದ್ದೇಶದಿಂದ ಪ್ರವೇಶಿಸಿದ ಮೂವರು ಹುಡುಗರು ಸಿಕ್ಕಿಬಿದ್ದಿದ್ದಾರೆ” ಎಂದು ತಿಳಿಸಿದ್ದರು. “ಅದರಲ್ಲಿ ಒಬ್ಬ ಆರೋಪಿಯನ್ನು ಇಬ್ಬರು ಪೊಲೀಸರು ಥಳಿಸಿದ್ದಾರೆ. ವಿಡಿಯೋ ಹೊರಬಿದ್ದ ನಂತರ ಇಬ್ಬರೂ ಪೊಲೀಸರನ್ನು ಅಮಾನತು ಮಾಡಲಾಗಿದೆ.” ಎಂಬ ಮಾಹಿತಿಯನ್ನು ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಎರಡು ವೀಡಿಯೊಗಳ ಕೊಲಾಜ್ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎರಡು ಸಹ ಬೇರೆ ಬೇರೆ ವಿಡಿಯೋಗಳು ಒಂದಕ್ಕೊಂದು ಸಂಬಂಧವಿಲ್ಲ.  ಯುವಕನೊಬ್ಬ ಹಸುವಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಎರಡೂವರೆ ವರ್ಷಗಳಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆದರೆ, ವಿಡಿಯೋ ಇರುವ ಸ್ಥಳ ಹಾಗೂ ಯುವಕನ ಹೆಸರು ವಿಳಾಸದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಲ್ಲದೆ, ಯುವಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಎರಡನೇ ವಿಡಿಯೋ ಯುಪಿಯ ಚಂದೌಲಿಯಲ್ಲಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಮೊಬೈಲ್ ಕಳ್ಳತನದ ಶಂಕೆಯಲ್ಲಿ ಪೊಲೀಸರು ಅಪ್ರಾಪ್ತ ವಯಸ್ಕನನ್ನು ಥಳಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.


ಇದನ್ನೂ ಓದಿ : Fact Check : ಡೊನಾಲ್ಡ್ ಟ್ರಂಪ್ ವಿಡಿಯೋ ಗೇಮ್‌ಗಳನ್ನು ಬ್ಯಾನ್‌ ಮಾಡಬೇಕೆಂದು ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *