Fact Check : ಬಾಬಾ ಸಿದ್ದಿಕಿ ಕೊಲೆಗೈದ ಆರೋಪಿ ಜೈಲಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿಲ್ಲ

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣದ) ನಾಯಕ ಬಾಬಾ ಸಿದ್ದಿಕಿಯ ಹತ್ಯೆಯ ನಂತರ ಪೊಲೀಸ್ ಕಸ್ಟಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಆರೋಪಿ ಮಾತನಾಡಿದ್ದಾನೆ ಎಂದು ಸುಳ್ಳು ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಬಾಬಾ ಸಿದ್ದಿಕಿ ಒಳ್ಳೆಯ ವ್ಯಕ್ತಿಯಲ್ಲ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅವನ ವಿರುದ್ಧ MCOCA (ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.  “ದಯವಿಟ್ಟು ಪೊಲೀಸ್ ಇಲಾಖೆ ಮತ್ತು ಎಲ್ಲಾ ನ್ಯಾಯಾಲಯಗಳನ್ನು ಮುಚ್ಚಿ, ಇನ್ನು ಮುಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

“ಬಾಬಾ ಸಿದ್ದಿಕಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಭೇಟಿ ಮಾಡಿ, ಅಪರಾಧಿಯೊಂದಿಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಈ ಹಿಂದೆ ಸಿದ್ದಿಕಿ ಹತ್ಯೆಯ ಹೊಣೆಯನ್ನು ಕುಮಾರ್ ಎಂಬಾತ ವಹಿಸಿಕೊಂಡಿದ್ದ. ದೆಹಲಿಯ ಜಿಮ್ ಮಾಲೀಕ ನಾದಿರ್ ಶಾ ಹತ್ಯೆಗೆ ಸಂಬಂಧಿಸಿದಂತೆ ಅವನನ್ನು ಒಂದು ತಿಂಗಳ ಹಿಂದೆ ಬಂಧಿಸಲಾಗಿತ್ತು, ಆದರೆ ಸಿದ್ದಿಕಿ ಹತ್ಯೆಯಲ್ಲಿ ಆತನನ್ನು  ಆರೋಪಿ ಎಂದು ಹೆಸರಿಸಲಾಗಿರಲಿಲ್ಲ. 2024ರ ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾದ ನಿರ್ಮಲ್ ನಗರದಲ್ಲಿ ಬಾಬಾ ಸಿದ್ದಿಕಿಯನ್ನು  ಗುಂಡಿಕ್ಕಿ ಕೊಲ್ಲಲಾಗಿತ್ತು.  ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಯೋಗೇಶ್ ಕುಮಾರ್. ಅವನು ಸಿದ್ದಿಕಿ ಹತ್ಯೆಯ ಆರೋಪಿಯಲ್ಲ ಎಂದು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡ ಕಂಡುಹಿಡಿದಿದೆ.

ಈ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಹುಡುಕಿದಾಗ, ನ್ಯೂಸ್ 24 ತನ್ನ X ಖಾತೆಯಲ್ಲಿ ಹಂಚಿಕೊಂಡ ಪೋಸ್ಟರ್‌ ಲಭಿಸಿದೆ. “ಪೊಲೀಸರಿಂದ ಬಂಧಿಸಲ್ಪಟ್ಟ ಬಿಷ್ಣೋಯ್ ಗ್ಯಾಂಗ್ ಶೂಟರ್, ‘ಬಾಬಾ ಸಿದ್ದಿಕಿ ಒಳ್ಳೆಯ ವ್ಯಕ್ತಿಯಾಗಿರಲಿಲ್ಲ’ ಎಂದು ಹೇಳಿದ್ದಾನೆ.

ಈ ವೈರಲ್‌ ವಿಡಿಯೋ ಕುರಿತು ಮತ್ತಷ್ಟು ತಿಳಿದುಕೊಳ್ಳಲು, ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವ್ಯಕ್ತಿಯ ಕುರಿತು ಸುದ್ದಿ ವರದಿಗಳು ದೊರೆತಿವೆ. ದಿ ಹಿಂದೂ ಮತ್ತು ಡೆಕ್ಕನ್ ಹೆರಾಲ್ಡ್‌ ಸುದ್ದಿವರದಿಗಳ ಪ್ರಕಾರ, ಯೋಗೇಶ್ ಅಲಿಯಾಸ್ ರಾಜು ಎಂಬಾತ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯಾಗಿದ್ದಾನೆ . ಅವನು ಲಾರೆನ್ಸ್ ಬಿಷ್ಣೋಯ್-ಹಶೀಮ್ ಬಾಬಾ ಗ್ಯಾಂಗ್‌ನ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದಾನೆ ಮತ್ತು ದೆಹಲಿಯ ಜಿಮ್ ಮಾಲೀಕ ನಾದಿರ್ ಶಾ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದಾನೆ ಎಂದು ಉಲ್ಲೇಖವಾಗಿದೆ.

ಯೋಗೇಶ್ ಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳು ಸಹ ಲಭಿಸಿವೆ. ಈ ವರದಿಗಳ ಪ್ರಕಾರ, ದೆಹಲಿ ಪೊಲೀಸರ ವಿಶೇಷ ಸೆಲ್ ನಾದಿರ್ ಶಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಯೋಗೇಶ್ ಕುಮಾರನಿಗಾಗಿ ಹುಡುಕಾಟ ನಡೆಸಿದಾಗ,  2024ರ ಅಕ್ಟೋಬರ್ 16ರಂದು ರಾತ್ರಿವೇಳೆ , ಅವರು ಮಥುರಾದ ರಿಫೈನರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮರುದಿನ ದೆಹಲಿ ಪೊಲೀಸರು ಮಥುರಾ ಪೊಲೀಸರೊಂದಿಗೆ ಹುಡುಕಾಟ ನಡೆಸಿದಾಗ, ಆರೋಪಿ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಎನ್‌ಕೌಂಟರ್‌ ದಾಳಿ ಮಾಡಲಾಗಿತ್ತು. ಆಗ ಆರೋಪಿಯಾದ ಯೋಗೇಶ್ ಕುಮಾರನ ಕಾಲಿಗೆ ಗುಂಡು ತಗುಲಿ ಪೋಲಿಸರ ಕೈಗೆ ಸಿಕ್ಕ ನಂತರ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ಆತನಿಂದ ಪಿಸ್ತೂಲ್, ಏಳು ಜೀವಂತ ಕಾಟ್ರಿಡ್ಜ್‌ಗಳು ಮತ್ತು ಕದ್ದ ಮೋಟಾರ್‌ಸೈಕಲ್‌ನ್ನು ವಶಪಡಿಸಿಕೊಂಡಿದ್ದಾರೆ.

ಬಾಬಾ ಸಿದ್ದಿಕಿ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದ ವರದಿಗಳು ಲಭಿಸಿವೆ. ಈ ಮಾಧ್ಯಮ ವರದಿಗಳ ಪ್ರಕಾರ, 2024ರ ಅಕ್ಟೋಬರ್ 18ರಂದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡೊಂಬಿವಲಿಯ ನಿತಿನ್ ಸಪ್ರೆ, ಪನ್ವೇಲ್‌ನ ರಾಮ್‌ಫುಲ್ ಚಂದ್ ಕನೋಜಿಯಾ, ಸಂಭಾಜಿ ಕಿಶೋರ್ ಪಾರ್ಧಿ, ಪ್ರದೀಪ್ ದತ್ತು ಥಾಂಬ್ರೆ ಮತ್ತು ಅಂಬರನಾಥದಿಂದ ಚೇತನ್ ಪಾರ್ಧಿ ಎಂಬ ವ್ಯಕ್ತಿಗಳು ಪ್ರಮುಖ ಶಂಕಿತರಿಗೆ ಶಸ್ತ್ರಾಸ್ತ್ರಗಳು ಮತ್ತು ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸುವಲ್ಲಿ ತೊಡಗಿಕೊಂಡಿದ್ದರು.

ಗುರ್ಮೈಲ್ ಬಲ್ಜೀತ್ ಸಿಂಗ್ ಮತ್ತು ಧರ್ಮರಾಜ್ ರಾಜೇಶ್ ಕಶ್ಯಪ್ ಎಂಬ ಇಬ್ಬರು ಶೂಟರ್‌ ಆರೋಪಿಗಳನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದು, ಮೂರನೇ ಶೂಟರ್ ಶಿವಕುಮಾರ್ ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಪರವಾಗಿ ಸಿದ್ದಿಕಿ ಹತ್ಯೆಯ ಹೊಣೆಯನ್ನು ಅವರ ಸಹೋದರ ಶುಭಂ ಲೋಂಕರ್ ವಹಿಸಿಕೊಂಡಿದ್ದು ಮತ್ತೊಬ್ಬ ಶಂಕಿತ ಪ್ರವೀಣ್ ಲೋಂಕರ್ ಎಂಬಾತನನ್ನು ಸಹ ಬಂಧಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯನ್ನು ದೆಹಲಿಯ ಜಿಮ್ ಮಾಲೀಕನ ಹತ್ಯೆಗೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆ ಬಂಧಿಸಲಾಗಿತ್ತೇ ಹೊರತು ಬಾಬಾ ಸಿದ್ದಿಕ್ ಹತ್ಯೆಯಲ್ಲಿ ಆ ವ್ಯಕ್ತಿಯು ಆರೋಪಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಲ್ಲ.


ಇದನ್ನು ಓದಿ :

Fact Check : ಕಾಶ್ಮೀರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *