Fact Check : ಗಂಗಾಸ್ನಾನ ಮಾಡುವಾಗ ದಲಿತ ಯುವಕರ ಮೇಲೆ ಹಲ್ಲೆ ಎಂದು ತಪ್ಪಾಗಿ ಮಧ್ಯಪ್ರದೇಶದ ವಿಡಿಯೋ ಹಂಚಿಕೆ

ಉತ್ತರ ಪ್ರದೇಶದಲ್ಲಿ ಚಮರ್ ಸಮುದಾಯದ ಜನರು ಗಂಗಾ ಸ್ನಾನ ಮಾಡುತ್ತಿದ್ದಾಗ, ಮನುವಾದಿ ವ್ಯಕ್ತಿಗಳು ಅವರನ್ನು ಥಳಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಉತ್ತರ ಪ್ರದೇಶ: ಕಾಶಿಯ ಮಹಾದೇವ ದೇಗುಲಕ್ಕೆ ಭೇಟಿ ನೀಡಲು ತೆರಳಿದ್ದ ಧೋಬಿ ಮತ್ತು ಚಾಮರ್ ಸಮುದಾಯದ ಜನರನ್ನು ಮೇಲ್ಜಾತಿ ಜನರು ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಒಡೆದರೆ ಇಬ್ಭಾಗವಾಗುವುದು ವಾಸ್ತವ ಏನೆಂದರೆ ಹಿಂದುಗಳಾದರೆ ಬಟ್ಟೆ ಬಿಚ್ಚಿಸಿ ಥಳಿಸುತ್ತಾರೆ. ಖಂಡನೀಯ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ವೈರಲ್ ಮಾಡಲಾಗುತ್ತಿದೆ.


ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,   2024ರ ಸೆಪ್ಟೆಂಬರ್ 12ರಂದು ಧಮ್ನೋದ್ ಸಮಾಚಾರ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋ ದೊರೆತಿದೆ. “ಮಹೇಶ್ವರದ ನರ್ಮದಾ ನದಿದಲ್ಲಿ ಯುವಕರು ಬೆತ್ತಲೆಯಾಗಿ ಸ್ನಾನ ಮಾಡುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಯುವಕರನ್ನು ಭಕ್ತರು ತೀವ್ರವಾಗಿ ಥಳಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿವರಣೆಯ ಆಧಾರದಲ್ಲಿ ಮತ್ತಷ್ಟು ಕೀವರ್ಡ್‌ಗಳನ್ನು ಬಳಸಿಕೊಂಡು Googleನಲ್ಲಿ ಹುಡುಕಿದಾಗ ಈ ಘಟನೆಗೆ ಸಂಬಂಧಿಸಿದ ಹಲವು  ಮಾಧ್ಯಮ ವರದಿಗಳು ಲಭಿಸಿವೆ. ಈ ವರದಿಗಳ ಪ್ರಕಾರ, “ಮಧ್ಯಪ್ರದೇಶದ ಘಾಟ್ ಮಹೇಶ್ವರದ ಅಹಲ್ಯಾ”ದಲ್ಲಿ ಕೆಲವು ಯುವಕರು ಬೆತ್ತಲೆಯಾಗಿ ಸ್ನಾನ ಮಾಡುವಾಗ ಅಕ್ಕಪಕ್ಕದ ಜನರಿಗೆ ತೊಂದರೆ ಕೊಟ್ಟಿದ್ದಾರೆ. ಆಗ ಇನ್ನುಳಿದ ಕೆಲವು ಸ್ಥಳಿಯರು ಈ ಘಟನೆಯ ಕುರಿತು ಮತ್ತೊಂದು ಸಮುದಾಯದ  ಜನರಿಗೆ ಮಾಹಿತಿಯನ್ನು ನೀಡಿದ್ದಾರೆ. ಆ ಸಮುದಾಯದ ಜನರು ಘಾಟ್‌ಗೆ ಬಂದು ಬೆತ್ತಲೆಯ ಯುವಕರನ್ನು ನದಿಯಿಂದ ಹೊರಗೆಳೆದು ಥಳಿಸಿದ್ದಾರೆ. ಕೆಲ ಸ್ಥಳೀಯರು ಪೊಲೀಸರಿಗೂ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಬರುವ ಮುನ್ನವೇ ಆ ಎಲ್ಲಾ ಯುವಕರು ಕ್ಷಮೆ ಕೇಳಿ ಓಡಿ ಹೋಗಿದ್ದಾರೆ.

ಮಹೇಶ್ವರ ಪೊಲೀಸ್ ಅಧಿಕಾರಿ ಈ ಘಟನೆಯ ಕುರಿತು ಮಾತನಾಡಿ ಘಾಟ್‌ನಲ್ಲಿ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಕೆಲವು ಯುವಕರು ಕುಡಿದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾರೆ. ಆದ್ದರಿಂದ ಸ್ಥಳೀಯರು ಅವರನ್ನು ಥಳಿಸಿ ಓಡಿಸಿದ್ದಾರೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ,  ಅಹಲ್ಯಾ ಘಾಟ್‌ನಲ್ಲಿ ಯುವಕರು ಬೆತ್ತಲೆಯಾಗಿ ಸ್ನಾನ ಮಾಡಿ, ಅಲ್ಲಿರುವ ಜನರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ ಸ್ಥಳೀಯರು ಅವರನ್ನು ಥಳಿಸಿದ್ದಾರೆ. ಆದರೆ ಈ ಘಟನೆಯನ್ನು ಗಂಗಾಸ್ನಾನ ಮಾಡುವಾಗ ದಲಿತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ :

Fact Check : ಡೊನಾಲ್ಡ್ ಟ್ರಂಪ್ ವಿಡಿಯೋ ಗೇಮ್‌ಗಳನ್ನು ಬ್ಯಾನ್‌ ಮಾಡಬೇಕೆಂದು ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *