Fact Check | 2024ರಲ್ಲಿ ಉತ್ತರಾಖಂಡ್‌ನಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ.16ರಷ್ಟು ಹೆಚ್ಚಾಗಿದೆ ಎಂಬುದು ಸುಳ್ಳು

“ದಯವಿಟ್ಟು ಗಮನಿಸಿ, ದೇಶಾದ್ಯಂತ ಮುಸಲ್ಮಾನರ ಜನಸಂಖ್ಯೆ ಪ್ರತಿ ವರ್ಷ ಭಯಾನಕವಾಗಿ ಏರಿಕೆಯಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಇದಕ್ಕೆ ಉತ್ತಮ ಉದಾಹರಣೆಯೆಂದರೆ ಉತ್ತರಖಂಡದಲ್ಲಿ ಮುಸ್ಲಿಂ ಜನಸಂಖ್ಯೆಯು 2024ರ ಆರಂಭದಿಂದ ಕೇವಲ 10 ತಿಂಗಳಲ್ಲಿಯೇ ಶೇಕಡ 16ರಷ್ಟು ಏರಿಕೆಯಾಗಿದೆ. ಈ ಹಿಂದೆ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇಕಡ 1.5 ರಷ್ಟು ಇತ್ತು. ಇದು ಹಿಂದೂಗಳಿಗೆ ಅಪಾಯ” ಎಂಬ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಅಂಕಿ ಅಂಶಗಳನ್ನು ಆಧಾರವಾಗಿರಿಸಿಕೊಂಡು ಹಲವು ಮಂದಿ “ಮುಸಲ್ಮಾನರು ಹಿಂದುಗಳ ವಿರುದ್ಧ ಭವಿಷ್ಯದಲ್ಲಿ ದಾಳಿ ನಡೆಸಲು ತಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಹಿಂದುಗಳು ಕೂಡ ತಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಕಡೆ ಗಮನ ಹರಿಸಬೇಕು. ಹಿಂದೂ ತಾಯಂದಿರು ಹೆಚ್ಚು ಮಕ್ಕಳನ್ನು ಹರೆಬೇಕಾಗಿದೆ” ಎಂದು ಹಲವರು ಪ್ರತಿಪಾದಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ಪೋಸ್ಟ್ ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಬರಹಕ್ಕೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 22 ಜನವರಿ 2015 ರಂದು ಇಂಡಿಯಾ ಟುಡೇ ಮಾಡಿದ ವರದಿ ಮತ್ತು 2 ಸೆಪ್ಟೆಂಬರ್ 2024 ರಂದು ಝೀ ನ್ಯೂಸ್ ಮಾಡಿದ್ದ ಮತ್ತೊಂದು ವರದಿ ಕಂಡುಬಂದಿದೆ. ಈ ಎರಡು ವರದಿಗಳಲ್ಲಿ ಕೂಡ ಉತ್ತರಖಂಡದ ಮುಸ್ಲಿಂ ಜನಸಂಖ್ಯೆಯು 11.9 ರಿಂದ 13.9 ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಉತ್ತರಖಂಡದ ಅಧಿಕೃತ ಸರ್ಕಾರಿ ವೆಬ್‌ಸೈಟ್‌ ಅನ್ನು ಪರಿಶೀಲನೆ ನಡೆಸಲಾಯಿತು. 2011 ರ ಜನಗಣತಿಯ ವಿವರಗಳ ಪ್ರಕಾರ, ಉತ್ತರಾಖಂಡವು 1.01 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಇದು 2001 ರ ಜನಗಣತಿಯಲ್ಲಿನ 84.89 ಲಕ್ಷಕ್ಕಿಂತ ಹೆಚ್ಚಾಗಿದೆ. ಇತ್ತೀಚಿನ ಜನಗಣತಿಯ ಮಾಹಿತಿಯ ಪ್ರಕಾರ ಉತ್ತರಾಖಂಡದ ಒಟ್ಟು ಜನಸಂಖ್ಯೆಯು 10,086,292 ಆಗಿದ್ದು ಅದರಲ್ಲಿ ಪುರುಷರು ಮತ್ತು ಮಹಿಳೆಯರು ಕ್ರಮವಾಗಿ 5,137,773 ಮತ್ತು 4,948,519. 2001 ರಲ್ಲಿ, ಒಟ್ಟು ಜನಸಂಖ್ಯೆಯು 8,489,349 ಆಗಿತ್ತು, ಇದರಲ್ಲಿ ಪುರುಷರು 4,325,924 ಮತ್ತು ಮಹಿಳೆಯರು 4,163,425. ಈ ದಶಕದಲ್ಲಿ ಒಟ್ಟು ಜನಸಂಖ್ಯೆಯ ಬೆಳವಣಿಗೆಯು ಶೇಕಡಾ 18.81 ರಷ್ಟಿದ್ದರೆ ಹಿಂದಿನ ದಶಕದಲ್ಲಿ ಅದು ಶೇಕಡಾ 19.20 ರಷ್ಟಿತ್ತು. ಉತ್ತರಾಖಂಡದ ಜನಸಂಖ್ಯೆಯು 2011 ರಲ್ಲಿ ಭಾರತದ ಶೇಕಡಾ 0.83 ರಷ್ಟಿದೆ. 2001 ರಲ್ಲಿ, ಈ ಅಂಕಿ ಅಂಶವು ಶೇಕಡಾ 0.83 ರಷ್ಟಿತ್ತು.

ಇನ್ನು ಇದೇ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಉತ್ತರಾಖಂಡ ರಾಜ್ಯದಲ್ಲಿ 82.97% ಅನುಯಾಯಿಗಳೊಂದಿಗೆ ಹಿಂದೂ ಧರ್ಮವು ಬಹುಸಂಖ್ಯಾತ ಧರ್ಮವಾಗಿದೆ. ಉತ್ತರಾಖಂಡ ರಾಜ್ಯದಲ್ಲಿ ಇಸ್ಲಾಂ ಎರಡನೇ ಅತ್ಯಂತ ಜನಪ್ರಿಯ ಧರ್ಮವಾಗಿದ್ದು, ಸರಿಸುಮಾರು 13.95 % ಅದನ್ನು ಅನುಸರಿಸುತ್ತದೆ. ಉತ್ತರಾಖಂಡ್ ರಾಜ್ಯದಲ್ಲಿ ಕ್ರಿಶ್ಚಿಯಾನಿಟಿಯನ್ನು 0.37 %, ಜೈನ ಧರ್ಮವನ್ನು 0.09 %, ಸಿಖ್ ಧರ್ಮವನ್ನು 2.34 % ಮತ್ತು ಬೌದ್ಧ ಧರ್ಮವನ್ನು 2.34 % ಅನುಸರಿಸುತ್ತಿದ್ದಾರೆ. ಸುಮಾರು 0.01 % ಜನರು ‘ಇತರ ಧರ್ಮ’ ಎಂದು ಹೇಳಿದ್ದಾರೆ, ಸರಿಸುಮಾರು 0.12 % ಜನರು ‘ನಿರ್ದಿಷ್ಟ ಧರ್ಮವಿಲ್ಲ’ ಎಂದು ಹೇಳಿದ್ದಾರೆ.

ಉತ್ತರಾಖಂಡ ರಾಜ್ಯದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದು ಒಟ್ಟು ಜನಸಂಖ್ಯೆಯ 13.95% ರಷ್ಟಿದ್ದಾರೆ. 13 ಜಿಲ್ಲೆಗಳಲ್ಲಿ ಯಾವ ಜಿಲ್ಲೆಯಲ್ಲೂ ಕೂಡ ಇಸ್ಲಾಂ ಧರ್ಮದ ಜನರು ಬಹುಸಂಖ್ಯಾತರಾಗಿಲ್ಲ. ಈ ಅಧಿಕೃತ ವೆಬ್‌ಸೈಟ್‌ನ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿದಾಗ ಇದರಲ್ಲಿ ಎಲ್ಲಿಯೂ ಕೂಡ ಮುಸಲ್ಮಾನರ ಜನಸಂಖ್ಯೆ ವಿಪರೀತವಾಗಿ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇಲ್ಲಿರುವ ಅಂಕಿ ಅಂಶಗಳನ್ನು ಗಮನಿಸಿದಾಗ ಉತ್ತರಖಂಡದಲ್ಲಿ ಶೇ3 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮುಸಲ್ಮಾನರ ಜನಸಂಖ್ಯೆ ಏರಿಕೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಉತ್ತರಖಂಡದಲ್ಲಿ 2024ರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡ 16 ಏರಿಕೆ ಆಗಿದೆ ಎಂಬುದು ಸುಳ್ಳಾಗಿದೆ. ಉತ್ತರಖಂಡದ ಒಟ್ಟು ಜನಸಂಖ್ಯೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಕೇವಲ ಶೇ.13ರಷ್ಟಿದೆ. ಈ ಮಾಹಿಯ ಆಧಾರದಲ್ಲಿ ಹೇಳುವುದಾದರೆ ಅಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ.3ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದೆ.  ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ, ಈ ಪೋಸ್ಟ್‌ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಕ್ರಿಡಾಂಗಣದ ಮೇಲ್ಛಾವಣಿ ಕುಸಿದು 5000 ಜನರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *