Fact Check : ಕ್ರಿಡಾಂಗಣದ ಮೇಲ್ಛಾವಣಿ ಕುಸಿದು 5000 ಜನರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು

ಕ್ರೀಡಾಂಗಣದ ಮೇಲ್ಛಾವಣಿ ಕುಸಿದು ಸುಮಾರು 5000 ಜನರು ಸಾವನ್ನಪ್ಪಿದ್ದಾರೆ. “ಲೈವ್ ಸ್ಟೇಡಿಯಂ ಕ್ರ್ಯಾಶ್” 😭 ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಅನೇಕ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌:

ಈ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು, ವಿಡಿಯೋದ ಕೆಲವು ಚಿತ್ರಗಳನ್ನು ಸ್ಕ್ರೀನ್‌ಶಾಟ್‌ ತೆಗೆದು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2024ರ ಸೆಪ್ಟೆಂಬರ್ 25ರಂದು ಹಂಚಿಕೊಳ್ಳಲಾದ ವಿಡಿಯೋ ದೊರೆತಿದೆ. ಈ ಘಟನೆಯು ʼಮಲೇಷ್ಯಾದ ಶಾ ಆಲಂ ಸ್ಟೇಡಿಯಂʼನಲ್ಲಿ ನಡೆದಿದೆ ಎಂದು ವಿಡಿಯೋದಲ್ಲಿ ಹಂಚಿಕೊಳ್ಳಲಾಗಿತ್ತು.

ಈ ವೈರಲ್‌ ವಿಡಿಯೋ ಕುರಿತು ಮತ್ತಷ್ಟು ಹುಡುಕಿದಾಗ, 2024ರ ಸೆಪ್ಟೆಂಬರ್ 13ರಂದು ಪ್ರಕಟವಾದ ವರದಿಯೊಂದು ಲಭಿಸಿದೆ. 2020ರಲ್ಲಿ ಮಲೇಷ್ಯಾ ಫುಟ್‌ಬಾಲ್ ಲೀಗ್‌ನ್ನು ಮಲೇಷ್ಯಾದ ರಾಜಧಾನಿ ಸೆಲಂಗೋರ್‌ನಲ್ಲಿರುವ ಶಾ ಆಲಂ ಕ್ರೀಡಾಂಗಣದಲ್ಲಿ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಕಳಪೆ ನಿರ್ವಹಣೆಯಿಂದಾಗಿ ಛಾವಣಿಯು ಬಹಳಷ್ಟು ಹದಗೆಟ್ಟಿತ್ತು. ಆದ್ದರಿಂದ ಆ ಸ್ಥಳವನ್ನು ಅಸುರಕ್ಷಿತವೆಂದು ಘೋಷಿಸಿ, ಪಂದ್ಯಗಳಿಗೆ ಪರ್ಯಾಯ ಸ್ಥಳಗಳನ್ನು ಹುಡುಕಲು ಅಧಿಕಾರಿಗಳಿಗೆ ಒತ್ತಡವನ್ನು ಹೇರಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಸ್ಪಂದಿಸಿದ ಸರ್ಕಾರ 1994ರಲ್ಲಿ ನಿರ್ಮಿಸಿದ ಕ್ರೀಡಾಂಗಣವನ್ನು ಕೆಡವಿ, ಅದರ ಜಾಗದಲ್ಲಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ನಿರ್ಧರಿಸಿತ್ತು. ಜುಲೈ 2024ರಲ್ಲಿ ಕ್ರೀಡಾಂಗಣದ ಕಟ್ಟಡವನ್ನು ಬೀಳಿಸುವ ಕೆಲಸವನ್ನು ಪ್ರಾರಂಭಿಸಲಾಗಿದ್ದು, ಕಟ್ಟಡವನ್ನು ಕೆಡವಲಾದ ವಿಡಿಯೋವನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಹಂಚಿಕೊಳ್ಳಲಾಗಿದೆ. ಕಟ್ಟಡದ ಛಾವಣಿಯನ್ನು ಬೀಳಿಸುವಾಗ ಸ್ಥಳೀಯ ಜನರಿಗೆ ಯಾವುದೇ ತರಹದ ತೊಂದರೆಯಾಗದಂತೆ ವಿಶೇಷ ಕಾಳಜಿಯನ್ನು ವಹಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಟೇಡಿಯಂ ಕುಸಿದು 5,000 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುವ ವೈರಲ್ ವಿಡಿಯೋ ಸುಳ್ಳು ಮಾಹಿತಿಗಳಿಂದ ಕೂಡಿದೆ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ಪಪ್ಪು ಯಾದವ್‌ ಅಳುತ್ತಿರುವ ದೃಶ್ಯವನ್ನು ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *