Fact Check : ಕಾಶ್ಮೀರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ

ಮಹಮದ್ ರಫಿ ಹಾಡಿರುವ “ಜನ್ನತ್ ಕಿ ಹೈ ತಸ್ವೀರ್… ಯೇ ತಸ್ವೀರ್ ನಾ ಡೆಂಗೆ” ಅಂದರೆ “ಕಾಶ್ಮೀರವನ್ನು ನಾವು ಬಿಟ್ಟು ಕೊಡಲಾರೆವು” ಎಂದು ಅರ್ಥ. ಈ ಹಾಡಿನಲ್ಲಿ ನಾಯಕ  ಕಾಶ್ಮೀರದ ಸೌಂದರ್ಯವನ್ನು ಹೊಗಳಿದ್ದಾನೆ ಮತ್ತು ನಾವೆಂದಿಗೂ ಕಾಶ್ಮೀರವನ್ನು ಬಿಟ್ಟು ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ. ಆದ್ದರಿಂದ ಈ ಹಾಡನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಪಾಕಿಸ್ತಾನ ಅಂದಿನ ಭಾರತದ ಪ್ರಧಾನಿಗೆ ಮನವಿ ಮಾಡಿದ್ದರಿಂದ ಆ ಹಾಡನ್ನು ನಿಷೇಧಿಸಲಾಗಿತ್ತು…. ಅದೆಂತ ಪ್ರೀತಿ ಪಾಕಿಸ್ತಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಪ್ರಶ್ನಿಸಿ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್‌ :

ಈ ಹಿಂದಿ ಹಾಡಿನ ಮೊದಲ ಸಾಲಿನ ‘ಜನ್ನತ್ ಕಿ ಹೈ ತಸ್ವೀರ್ ಯೇ’ ಎಂಬ ಕೀವರ್ಡ್ ಬಳಸಿ ಹುಡುಕಿದಾಗ ಇದು 1966ರಲ್ಲಿ ಬಿಡುಗಡೆಯಾದ ‘ಜೋಹರ್‌ ಇನ್ ಕಾಶ್ಮೀರ್‘ ಎಂಬ ಚಿತ್ರದ್ದು ಎಂದು ತಿಳಿದುಬಂದಿದೆ. ಈ ಚಿತ್ರ ಅಥವಾ ಹಾಡನ್ನು ನಿಷೇಧಿಸಲಾಗಿತ್ತೆ ಎಂಬುದರ ಕುರಿತು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.

ಆನಂತರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಹೆಸರಿನಲ್ಲಿ ಹುಡುಕಿದಾಗ 17 ಡಿಸೆಂಬರ್ 1966 ರ ದಿನಾಂಕದ ಗೆಜೆಟ್ ಆಫ್ ಇಂಡಿಯಾ ದಾಖಲೆಯೊಂದು ಸಿಕ್ಕಿದೆ. ಯಾವುದೇ ಭಾರತೀಯ ಅಥವಾ ಅಂತರಾಷ್ಟ್ರೀಯ ಸಿನಿಮಾಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಅವುಗಳನ್ನು ತೆಗೆಯಲು ಸೂಚಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

 

ಅಂತೆಯೇ ‘ಜೋಹರ್‌ ಇನ್ ಕಾಶ್ಮೀರ್’ ಚಿತ್ರದ ಐದನೇ ರೀಲ್‌ನಲ್ಲಿ ‘ಜನ್ನತ್ ಕಿ ಹೈ ತಸ್ವೀರ್ ಯೇ’ ಹಾಡಿನಲ್ಲಿ “ಹಾಜಿ ಪಿರ್” ಎಂಬ ಪದಗಳನ್ನು ತೆಗೆಯಬೇಕೆಂದು ಆದೇಶಿಸಿರುವುದು ಕಂಡುಬಂದಿದೆ. ಸದ್ಯ ಈ ಹಾಡು ಹಂಗಾಮಸ್ಪಾಟಿಫೈಯೂಟ್ಯೂಬ್ ಸೇರಿದಂತೆ ಹಲವೆಡೆ ಲಭ್ಯವಿದ್ದು, ಅದರಲ್ಲಿ ಹಾಜಿ ಪಿರ್ ಎಂಬ ಪದಗಳು ಕಂಡುಬಂದಿಲ್ಲ.

ಹಾಗಾಗಿ ಹಾಡಿನಲ್ಲಿ ಎರಡು ಪದಗಳನ್ನು ತೆಗೆಯಬೇಕೆಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸೂಚಿಸಿತ್ತೇ ಹೊರತು ಹಾಡನ್ನಾಗಲಿ, ಆ ಚಿತ್ರವನ್ನಾಗಲಿ ಭಾರತದಲ್ಲಿ ಬ್ಯಾನ್‌ ಮಾಡಿ ಎಂದು ಹೇಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ʼಕಾಶ್ಮೀರವನ್ನು ನಾವು ಬಿಟ್ಟು ಕೊಡಲಾರೆವುʼ ಎಂಬ ಹಾಡನ್ನು ಭಾರತದ ಆಗಿನ ಕಾಂಗ್ರೇಸ್‌ ಸರ್ಕಾರ ಬ್ಯಾನ್ ಮಾಡಿಲ್ಲ. ಆ ಹಾಡು ಈಗಲೂ ಹಲವೆಡೆ ಲಭ್ಯವಿದೆ.


ಇದನ್ನು ಓದಿ :

Fact Check : ಕ್ರಿಡಾಂಗಣದ ಮೇಲ್ಛಾವಣಿ ಕುಸಿದು 5000 ಜನರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *