Fact Check | ಕ್ರಿಸ್ಟಿಯಾನೋ ರೊನಾಲ್ಡೊ ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ ಎಂಬ ವಿಡಿಯೋ ಎಡಿಟೆಡ್ ಆಗಿದೆ

ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಅವರು ವಿರಾಟ್ ಕೊಹ್ಲಿ ಅವರನ್ನು ಹೊಗಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ವಿಡಿಯೋದಲ್ಲಿ ಕೂಡ ಕ್ರಿಸ್ಟಿಯಾನೋ ರೊನಾಲ್ಡೊ ಅವರು ವಿರಾಟ್ ಕೊಹ್ಲಿ ಅವರನ್ನು ಹೊಗಳುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಈ ವಿಡಿಯೋ ಈಗ ಕ್ರಿಕೆಟ್ ಪ್ರೇಮಿಗಳಿಗೆ ಸಂತಸವನ್ನು ಉಂಟು ಮಾಡಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ವಿಡಿಯೋ ನೋಡಿದ ಸಾರ್ವಜನಿಕರು ಕೂಡ ಫುಟ್ಬಾಲ್ ಆಟಗಾರ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಎಂಬುದನ್ನು ನಿಜವೆಂದು ನಂಬಿಕೊಂಡಿದ್ದಾರೆ. ವೈರಲ್ ವಿಡಿಯೋ ಕೂಡ ನೈಜ ವಿಡಿಯೋದಂತೆ ಭಾಸವಾಗುತ್ತಿದೆ. ಆದರೆ ವಿಡಿಯೋದ ಕೆಲ ಭಾಗಗಳು ಅಸ್ಪಷ್ಟವಾಗಿರುವಂತೆ ಕಾಣುತ್ತಿರುವುದರಿಂದ, ಇದು ಗೊಂದಲವನ್ನು ಕೂಡ ಸೃಷ್ಟಿಸಿದೆ. ಹೀಗೆ ವೈರಲ್‌ ವಿಡಿಯೋ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆ ಇದರ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದವು. ಈ ವೇಳೆ ನಮಗೆ 28 ಆಗಸ್ಟ್ 2024ರಂದು ಫೈಝಲ್ ಫುಟ್ಬಾಲ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ರಿಯೊ ಫರ್ಡಿನ್ಯಾಂಡ್ ಅವರಿಂದ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಸಂದರ್ಶನ ಎಂಬ ಶೀರ್ಷಿಕೆಯ, ಅಡಿಯಲ್ಲಿ ಕಿರು ವಿಡಿಯೋವೊಂದನ್ನು ಹಂಚಿಕೊಂಡಿರುವುದು ಕಂಡುಬಂದಿದೆ.

ಇದರ ಆಧಾರದ ಮೇಲೆ ಇನ್ನಷ್ಟು ಕೀ ವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದಾಗ ರಿಯೊ ಫರ್ಡಿನ್ಯಾಂಡ್ ಮತ್ತು ರೊನಾಲ್ಡೊ ಅವರ ಪೂರ್ಣ ವಿಡಿಯೋ 12 ಸೆಪ್ಟೆಂಬರ್ 2024 ರಂದು ರಿಯೊ ಫರ್ಡಿನ್ಯಾಂಡ್ ಪ್ರೆಸೆಂಟ್  YouTube ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿರುವುದು ಕಂಡುಬಂದಿದೆ. ಇದು ಸುಮಾರು 36 ನಿಮಿಷಗಳ ವಿಡಿಯೋವಾಗಿದ್ದು, ಈ ಸಂಪೂರ್ಣ ವಿಡಿಯೋದಲ್ಲಿ ಎಲ್ಲಿಯೂ ಕೂಡ ವಿರಾಟ್ ಕೊಹ್ಲಿ ಅವರ ಬಗೆಗಿನ ಉಲ್ಲೇಖಗಳೇ ಕಂಡುಬಂದಿಲ್ಲ. ಹಾಗಾಗಿ ವೈರಲ್‌ ವಿಡಿಯೋವನ್ನು AI ಟೂಲ್‌ ಬಳಸಿಕೊಂಡು ರೊನಾಲ್ಡೋ ಅವರ ಧ್ವನಿಯನ್ನು ನಕಲಿಸಿ ಸುಳ್ಳು ನಿರೂಪಣೆಯ ವಿಡಿಯೋ ಸೃಷ್ಟಿಸಲಾಗಿದೆ ಎಂಬುದು ಕೂಡ ಸ್ಪಷ್ಟವಾಗಿದೆ.

ಒಂದು ವೇಳೆ ವೈರಲ್ ವಿಡಿಯೋದಲ್ಲಿ ಹೇಳಿಕೊಂಡಂತೆ ರೊನಾಲ್ಡೋ ಅವರು ಕೊಹ್ಲಿಯವರನ್ನು ಹೊಗಳಿದ್ದು ನಿಜವೇ ಆಗಿದ್ದರೆ, ವಿವಿಧ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಹಾಗಾಗಿ ಈ ಕುರಿತು ಯಾವುದಾದರೂ ವರದಿ ಪ್ರಕಟವಾಗಿದೆಯೇ ಎಂದು ಹುಡುಕಾಟವನ್ನು ನಡೆಸಿದವು, ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ವರದಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ನಂಬಿಕೆಗೆ ಅರ್ಹವಾಗಿಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ವಿರಾಟ್ ಕೊಹ್ಲಿ ಅವರನ್ನು ತಮ್ಮ ಸಂದರ್ಶನದ ವೇಳೆ ಹೊಗಳಿದ್ದಾರೆ ಎಂಬುದು ಸುಳ್ಳಿನಿಂದ ಕೂಡಿದೆ. ವೈರಲ್ ವಿಡಿಯೋದ ಮೂಲ ವಿಡಿಯೋ 36 ನಿಮಿಷಗಳದ್ದಾಗಿದ್ದು, ಆ ಸಂಪೂರ್ಣ ವಿಡಿಯೋದಲ್ಲಿ ಎಲ್ಲಿಯೂ ಕೂಡ ರೊನಾಲ್ಡೋ ಅವರು ವಿರಾಟ್ ಕೊಹ್ಲಿ ಅವರ ಕುರಿತು ಮಾತನಾಡಿಲ್ಲ. ಹಾಗಾಗಿ ವೈರಲ್ ವಿಡಿಯೋ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಜಾಗೃತಿಗಾಗಿ ಮಾಡಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *