Fact Check : ದನದ ಕೊಟ್ಟಿಗೆ ಶುಚಿಗೊಳಿಸಿ, ಅಲ್ಲಿ ಮಲಗಿದರೆ ಬಿಪಿ-ಕ್ಯಾನ್ಸರ್ ಗುಣವಾಗುತ್ತದೆ ಎಂಬುದು ಸುಳ್ಳು

ಕ್ಯಾನ್ಸರ್ ರೋಗದಿಂದ ಗುಣಮುಖರಾಗಲು ರೋಗಿಗಳು ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ಅತ್ಯಾಧುನಿಕ ವೈದ್ಯಕೀಯ ವಿಜ್ಞಾನದ ಮೊರೆ ಹೋಗುತ್ತಾರೆ. ಆದರೆ, ಉತ್ತರ ಪ್ರದೇಶ ಬಿಜೆಪಿ ಸಚಿವರೊಬ್ಬರು “ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನು ಶುಚಿಗೊಳಿಸಿ, ಅಲ್ಲಿ ಮಲಗಿದರೆ ಕ್ಯಾನ್ಸರ್ ಕೂಡ ವಾಸಿಯಾಗುತ್ತದೆ ಮತ್ತು ಅಧಿಕ ರಕ್ತದೊತ್ತಡದ ಕಾಯಿಲೆ ಗುಣವಾಗುತ್ತದೆ” ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

“ಅಧಿಕ ರಕ್ತದೊತ್ತಡದ (ಬಿಪಿ) ರೋಗಿಗಳಿದ್ದರೆ ಕೇಳಿ. ಇಲ್ಲಿ ಹಸುಗಳಿವೆ. ನೀವು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಸುಗಳ ಮೈ ನೇವರಿಸುವುದರಿಂದ ಔಷಧವನ್ನು ಅರ್ಧ ಪ್ರಮಾಣಕ್ಕೆ ಇಳಿಸಬಹುದು. ಒಬ್ಬ ವ್ಯಕ್ತಿ ರಕ್ತದೊತ್ತಡಕ್ಕೆ ಔಷಧಿಯಾಗಿ 20 ಮಿ.ಗ್ರಾಂ ಡೋಸ್ ತೆಗೆದುಕೊಳ್ಳುತ್ತಿದ್ದರೆ, ಹಸುಗಳ ಸೇವೆಯಿಂದ 10 ದಿನಗಳಲ್ಲಿ 10 ಮಿ.ಗ್ರಾಂಗೆ ಔಷಧಿ ಪ್ರಮಾಣ ಇಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಗೋಶಾಲೆಗಳೊಂದಿಗೆ ಜನರನ್ನು ಸಂಪರ್ಕಿಸುವುದು ನಮ್ಮ ಪ್ರಯತ್ನ. ಜನ ತಮ್ಮ ವಿವಾಹ ವಾರ್ಷಿಕೋತ್ಸವ ಹಾಗೂ ಮಕ್ಕಳ ಜನ್ಮದಿನವನ್ನು ಗೋಶಾಲೆಯಲ್ಲಿ ಆಚರಿಸಬೇಕು. ನೀವು ಹಸುವಿನ ಬೆರಣಿ ಸುಟ್ಟರೆ, ಸೊಳ್ಳೆಗಳ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಆದ್ದರಿಂದ ಪಶುಸಂಗೋಪನೆ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ ಎಂದು ಕಬ್ಬು ಬೆಳೆ ಅಭಿವೃದ್ಧಿಯ ಸಚಿವ ಗಂಗ್ವಾರ್, ತಮ್ಮ ಕ್ಷೇತ್ರವಾದ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹಿಂದೆಯೂ ವಿವಿಧ ರಾಜ್ಯಗಳ ಬಿಜೆಪಿ ಸಚಿವರು ಗೋವು, ಸೆಗಣಿ, ಗೋಮೂತ್ರಕ್ಕೆ ಸಂಬಂಧಿಸಿದಂತೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು,  ಜನಸಾಮಾನ್ಯರ ವೈಜ್ಞಾನಿಕ ತಿಳುವಳಿಕೆಗೆ ಘಾಸಿಯನ್ನುಂಟು ಮಾಡಲು ಶ್ರಮಿಸುತ್ತಿದ್ದಾರೆ. ನಿಜವಾಗಿಯೂ ಅಧಿಕ ರಕ್ತದೊತ್ತಡದ ರೋಗಿಗಳು ಮತ್ತು ಕ್ಯಾನ್ಸರ್ ರೋಗಿಗಳು ದನದ ಕೊಟ್ಟಿಗೆಯನ್ನು ಶುಚಿಗೊಳಿಸಿ, ಅಲ್ಲಿ ಮಲಗಿದರೆ ಕ್ಯಾನ್ಸರ್ ಕಾಯಿಲೆ ವಾಸಿಯಾಗುತ್ತದೆಯೇ? ರಕ್ತದೊತ್ತಡ ಶಮನವಾಗುತ್ತದೆ ಎಂಬುದನ್ನು ಪರಿಶೀಲಿಸೋಣಾ.

ಫ್ಯಾಕ್ಟ್‌ ಚೆಕ್:‌

ದನದ ಕೊಟ್ಟಿಗೆಯನ್ನು ಶುಚಿಗೊಳಿಸುವುದು ಅಥವಾ ಹಸುವಿನ ಮೈ ನೇವರಿಸುವುದರಿಂದ ಕ್ಯಾನ್ಸರ್ ಕಾಯಿಲೆ ಗುಣವಾಗುತ್ತದೆ ಮತ್ತು ರಕ್ತದೊತ್ತಡದ ಔಷಧಿಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾಗಿ, ಸಚಿವರು ನೀಡಿರುವ ಎರಡೂ ಹೇಳಿಕೆಗಳು ಜನರನ್ನು ಮೌಢ್ಯದತ್ತ ಆಹ್ವಾನಿಸುತ್ತವೆ. ಇದು ಅವೈಜ್ಞಾನಿಕ.

ಬಿಜೆಪಿ ಸಚಿವರ ಈ ವಾದವನ್ನು ಪರಿಶೀಲಿಸಲು, ಮೊದಲು ನಾವು ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಎರಡರ ಬಗ್ಗೆಯೂ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿರಬೇಕಾದ ಅಗತ್ಯತೆ ಇದೆ.

ಅಧಿಕ ರಕ್ತದೊತ್ತಡ (ಬಿಪಿ) ಎಂದರೇನು?

ಅಧಿಕ ರಕ್ತದೊತ್ತಡವು ಅಪಧಮನಿಗಳಲ್ಲಿನ ಅಧಿಕ ರಕ್ತದೊತ್ತಡದಿಂದ ಗುರುತಿಸಲ್ಪಟ್ಟ ದೀರ್ಘಕಾಲದ ವೈದ್ಯಕೀಯ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಹಲವು ವರ್ಷಗಳ ಕಾಲ ರೋಗಲಕ್ಷಣಗಳು ಕಾಣಿಸದೇ ಮುಂದುವರಿಯುತ್ತದೆ. ಅಧಿಕ ರಕ್ತದೊತ್ತಡವು ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಸ್ಥಿತಿಯಾಗಿದ್ದು, 30-79 ವರ್ಷ ವಯಸ್ಸಿನ ಸುಮಾರು 1.28 ಶತಕೋಟಿ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಪ್ರತಿ 4 ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ʼಭಾರತದಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ಶೇ12ರಷ್ಟು ಜನರು ಮಾತ್ರ ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಹೊಂದಿದ್ದಾರೆ. ಪ್ರಪಂಚದಾದ್ಯಂತ ಅಧಿಕ ರಕ್ತದೊತ್ತಡ ಹೊಂದಿರುವ ವಯಸ್ಕರಲ್ಲಿ ಅಂದಾಜು ಶೇ 46 ರಷ್ಟು ಮಂದಿಗೆ ತಾವು ಈ ಸಮಸ್ಯೆಯನ್ನು ಹೊಂದಿದ್ದೇವೆ ಎಂಬುದರ ಅರಿವೇ ಇಲ್ಲ.

ಕ್ಯಾನ್ಸರ್ ಎನ್ನುವುದು ಒಂದು ಮಾರಕ ಕಾಯಿಲೆ

ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಕ್ಯಾನ್ಸರ್ ಉಂಟಾದರೆ ಅದು ದೇಹದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಇರುತ್ತದೆ. ಇದು ಸಾಮಾನ್ಯವಾಗಿ ಇದು ಜೀವಕೋಶಗಳಲ್ಲಿ ಬದಲಾವಣೆ ಉಂಟು ಮಾಡುತ್ತದೆ. ಸಾಮಾನ್ಯವಾಗಿ, ಆರೋಗ್ಯಕರ ಮಾನವ ದೇಹದಲ್ಲಿ, ಜೀವಕೋಶ ವಿಭಜನೆ ಎಂಬ ಪ್ರಕ್ರಿಯೆಯಿಂದ ಮಾನವ ಜೀವಕೋಶಗಳು ಬೆಳೆಯುತ್ತವೆ ಮತ್ತು ವೃದ್ಧಿಯಾಗುತ್ತವೆ. ಜೀವಕೋಶಗಳು ಹಳೆಯದಾದಾಗ ಅಥವಾ ಹಾನಿಗೊಳಗಾದಾಗ, ಅವು ಸಾಯುತ್ತವೆ ಮತ್ತು ಹೊಸ ಜೀವಕೋಶಗಳು ಅಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ, ಕೋಶ ವಿಭಜನೆಯ ಈ ಕ್ರಮಬದ್ಧ ಪ್ರಕ್ರಿಯೆಯು ಮುರಿದುಹೋದಾಗ, ಮತ್ತು ಅಸಹಜ ಬೆಳವಣಿಗೆ ಕಂಡುಬಂದಾಗ ಅಥವಾ ಹಾನಿಗೊಳಗಾದ ಜೀವಕೋಶಗಳು ಅದೇ ಸ್ಥಿತಿಯಲ್ಲಿ ಹೆಚ್ಚುತ್ತಾ ಹೋದರೆ ಇವು ಗೆಡ್ಡೆಯ ರೂಪದಲ್ಲಿ ಒಟ್ಟಿಗೆ ಸೇರಿಕೊಳ್ಳುತ್ತವೆ. ಈ ಗೆಡ್ಡೆಗಳು ಕ್ಯಾನ್ಸರ್‌ಕಾರಿಯಾಗಿರಬಹುದು ಅಥವಾ ಕ್ಯಾನ್ಸರ್ ಅಲ್ಲದವುಗಳಾಗಿರಬಹುದು.

ಕ್ಯಾನ್ಸರ್ ಗಡ್ಡೆಗಳಿಗೆ ಚಿಕಿತ್ಸೆಯು ಒಬ್ಬನು ಪೀಡಿತವಾಗಿರುವ ಕ್ಯಾನ್ಸರ್ ಪ್ರಕಾರದ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಚಿಕಿತ್ಸೆಯು ಕೀಮೋಥೆರಪಿ, ವಿಕಿರಣ, ಹಾರ್ಮೋನ್ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳ ರೂಪದಲ್ಲಿ ಒಳಗೊಂಡಿರುತ್ತದೆ. ಆದರೆ ಯಾವುದೂ ಕ್ಯಾನ್ಸರ್‌ಗೆ ಖಚಿತವಾದ ಚಿಕಿತ್ಸೆ ಅಲ್ಲ. ಮತ್ತು, ಕ್ಯಾನ್ಸರ್ ದೇಹವನ್ನು ತೊರೆದರೂ ಅದು ಹಿಂತಿರುಗುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಹಸುವಿನ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು ಅಥವಾ ಅದರಲ್ಲಿ ಮಲಗುವುದು ಕ್ಯಾನ್ಸರ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗೆಯೇ ಹಸುವಿನ ಮೈ ನೇವರಿಸುವುದರಿಂದ ಅಧಿಕ ರಕ್ತದೊತ್ತಡ ಗುಣಪಡಿಸಬಹುದು ಎಂಬುದು ಸುಳ್ಳು ಎಂಬುದು ಇದರಿಂದ ಸಾಬೀತಾಗಿದೆ.


ಇದನ್ನು ಓದಿದ್ದೀರಾ?  Fact Check:  ಹೈದರಾಬಾದ್‌ನ ದೇವಸ್ಥಾನವೊಂದರಲ್ಲಿ ಕಿಡಿಗೇಡಿಗಳು ಕರುವಿನ ಮಾಂಸ ಎಸೆದಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *