Fact Check : ಸ್ವಯಂ ಚಾಲಿತ ಕಾರು ಹೊತ್ತಿ ಉರಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ

ಹೊತ್ತಿ ಉರಿಯುತ್ತಿರುವ ಕಾರೊಂದು ಚಲಿಸುತ್ತಾ ಮುಂದೆ ಬರುತ್ತಿರುವ ಮತ್ತು ಏಕಾಏಕಿ ಕಾರು ಚಲಿಸಿದ್ದರಿಂದ ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾಗಿ ಓಡುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವ್ಯಂಗ್ಯಾತ್ಮಕವಾಗಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು “ಬೆಂಕಿ ಆರಿಸದೇ ದೂರ ನಿಂತು  ತಮಾಷೆ ನೋಡುತ್ತಿರುವವರಿಗೆ, ನನ್ನ ಬೆಂಕಿ ಆರಿಸಿ ಎಂದು ಹತ್ತಿರ ಬಂದ ಕಾರು….” ಎಂದು ಹಂಚಿಕೊಂಡಿದ್ದಾರೆ.

Oplus_131072

ಇದಲ್ಲದೇ ದೇಶದ ವಿವಿಧ ನಗರಗಳನ್ನು ಹೆಸರಿಸಿ ಈ ಘಟನೆ ನಡೆದಿದೆ ಎಂದು ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕಾರು ಹೊತ್ತಿ ಉರಿಯುತ್ತಿರುವ ಘಟನೆಯನ್ನು ದೆಹಲಿಯದ್ದು ಎಂದರೆ, ಮತ್ತೆ ಕೆಲವರು ಗೋರಖ್‌ಪುರದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಬಳಕೆದಾರರು ಮುಂಬೈ ಮತ್ತು ರಾಜ್‌ಕೋಟ್‌ನದ್ದು ಎಂದು ಹೆಸರಿಸಿ ಇದೇ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

ವೀಡಿಯೊವನ್ನು ಅಪ್‌ಲೋಡ್ ಮಾಡಿರುವ ಫೇಸ್‌ಬುಕ್ ಬಳಕೆದಾರ ಕೆ.ಪಿ ಕುಲದೀಪ್, “ಇದು ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂದಿದೆ” ಎಂದು ಬರೆದುಕೊಂಡಿದ್ದು, ವೀಡಿಯೊದ ಮೇಲೆ, “ಧಗಧಗಿಸುತ್ತಿರುವ ಕಾರಿನ ಮುಂದೆ ನಿಂತು ನೋಡುತ್ತಿರುವವರಿಗೆ, ನಿಲ್ಲಿ, ನಾನು ನಿಮಗೆ ಸ್ವಲ್ಪ ಹತ್ತಿರದಿಂದ ಚಮತ್ಕಾರವನ್ನು ತೋರಿಸುತ್ತೇನೆ ಎಂದು ಮುಂದೆ ಚಲಿಸಿದ ಕಾರು ” ಎಂದು ತಮಾಷೆಯ ವಿಷಯ ಎಂಬಂತೆ ಬರೆದು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್:‌

ಕಾರು ಹೊತ್ತಿ ಉರಿಯುತ್ತಾ ಮುಂದೆ ಚಲಿಸಿದ ಘಟನೆಯು ಜೈಪುರದಲ್ಲಿ ನಡೆದಿದ್ದು, ಅಕ್ಟೋಬರ್ 12ರಂದು ಜೈಪುರದ ಎಲಿವೇಟೆಡ್ ರಸ್ತೆಯಲ್ಲಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿತ್ತು. ಈ ವಿಡಿಯೋವನ್ನು ವಿವಿಧ ನಗರಗಳ ಹೆಸರಿನಲ್ಲಿ ವೈರಲ್ ಮಾಡಿ ಗೊಂದಲ ಮೂಡಿಸಲಾಗುತ್ತಿದೆ. 

ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿರುವುದಾಗಿ ಎನ್‌ಡಿಟಿವಿ, ಕ್ವಿಂಟ್‌ ಸೇರಿದಂತೆ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

 

View this post on Instagram

 

A post shared by Pratidin Time (@pratidintime)

ಇದರ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು, ಗೂಗಲ್ ಲೆನ್ಸ್ ಟೂಲ್ ಮೂಲಕ ಹುಡುಕಾಟ ನಡೆಸಿದಾಗ ಜೈಪುರದ ಹೆಸರಿನಲ್ಲಿ ಅನೇಕ ಯೂಟ್ಯೂಬ್ ಚಾನೆಲ್‌ಗಳಲ್ಲಿ ಮೂಲ ವೀಡಿಯೊವನ್ನು ಲಭಿಸಿದ್ದು, ಇದರಲ್ಲಿ ಪ್ರಮುಖವಾಗಿ ನ್ಯೂಸ್20 ಅಜ್ಮೀರ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ “ಜೈಪುರದ ರಸ್ತೆಯಲ್ಲಿ ಚಾಲಕ ರಹಿತ ಕಾರು ಸುಟ್ಟು ಭಸ್ಮವಾದ ದೃಶ್ಯ” ಎಂದು ವೀಡಿಯೊವನ್ನು ಪೋಸ್ಟ್ ಮಾಡಿದೆ.

ಅದೇ ರೀತಿಯಲ್ಲಿ ಬಿಬಿಸಿ ನ್ಯೂಸ್ ಹಿಂದಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ವರದಿ ಮಾಡಿದ್ದು, “ಬೆಂಕಿಯ ಉಂಡೆಯಾಗಿ ಮಾರ್ಪಟ್ಟ ಕಾರು ಶನಿವಾರ ಜೈಪುರದಲ್ಲಿ ಚರ್ಚೆಯ ವಿಷಯವಾಯಿತು” ಎಂದು ವರದಿ ಮಾಡಿದೆ. “ಎಲಿವೇಟೆಡ್ ರಸ್ತೆಯಲ್ಲಿದ್ದಾಗ ಏಕಾಏಕಿ ಕಾರಿನ ಎಸಿಯಿಂದ ಹೊಗೆ ಬರಲಾರಂಭಿಸಿದ್ದನ್ನು ಗಮನಿಸಿದೆ. ಇದಾದ ನಂತರ ಕಾರನ್ನು ನಿಲ್ಲಿಸಿ ಬಾನೆಟ್ ತೆರೆದು ನೋಡಿದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಕೆಲ ಕ್ಷಣಗಳ ನಂತರ ಹೊತ್ತಿ ಉರಿಯುತ್ತಿದ್ದ ಕಾರು ಚಲಿಸಲು ಆರಂಭಿಸಿದ್ದು, ನಿಂತು ನೋಡುತ್ತಿದ್ದ ಜನರನ್ನು ಭಯಭೀತಗೊಳಿಸಿತು. ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಅದು ಸ್ವಯಂಚಾಲಿತವಾಗಿ ನಿಂತಿದೆ” ಎಂದು ಸಂಪೂರ್ಣ ಘಟನೆಯ ಬಗ್ಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಜಿತೇಂದ್ರ ಬಿಬಿಸಿ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

 

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವಿಡಿಯೋ ಜೈಪುರದ್ದಾಗಿದ್ದು, ಈ ಘಟನೆಯು 2024ರ ಅಕ್ಟೋಬರ್ 12 ರಂದು ಎಲಿವೇಟೆಡ್ ರಸ್ತೆಯಲ್ಲಿ ಸಂಭವಿಸಿತ್ತು. ವಿವಿಧ ನಗರಗಳ ಹೆಸರಿನಲ್ಲಿ ಜೋಡಿಸಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ? : Fact Check : ದುರ್ಗಾ ಮಾತಾ ಆರತಿಯ ವೇಳೆ ಇಸ್ಲಾಮೀ ಘೋಷಣೆ ಕೂಗಲಾಗಿದೆ ಎಂದು ಟಿಎಂಸಿ ರ್ಯಾಲಿಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *