Fact Check : ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್ ವಿಡಿಯೋ ಕುರಿತು ನಿಜ ತಿಳಿದುಕೊಳ್ಳಲು, ವಿಡಿಯೋಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಿಲ್ಲ.

ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ 2021ರ ನವೆಂಬರ್ 28 ರಂದು  ಉತ್ತರಾಖಂಡದ ನ್ಯೂಸ್ 18 ಚಾನೆಲ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ  ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ “ಪೀರಾನ್ ಕಲಿಯಾರ್‌ನಲ್ಲಿರುವ ಸಾಬಿರ್ ಪಾಕ್‌ ದರ್ಗಾದಲ್ಲಿ ಮಾಜಿ ಸಿಎಂ ಹರೀಶ್ ರಾವತ್  ಪ್ರಾರ್ಥನೆ ಸಲ್ಲಿಸಿ, ಚಾದರ್‌ ಅರ್ಪಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮತಗಳ ಅಂತರದಿಂದ ಗೆಲ್ಲಲಿದೆ” ಎಂದು ಹೇಳಿದ್ದರು.

ಈ ಸುದ್ದಿಯ ಕುರಿತು ಮತ್ತಷ್ಟು ಹುಡುಕಿದಾಗ,  ಮಾಧ್ಯಮ ವರದಿಗಳು ಲಭಿಸಿದ್ದು, ಈ ವರದಿಗಳ ಪ್ರಕಾರ, 2022ರಲ್ಲಿ  ಹರೀಶ್ ರಾವತ್ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನ ರೂರ್ಕಿಯ ಪಿರಾನ್ ಕಲಿಯಾರ್‌ನಲ್ಲಿರುವ ಸಾಬಿರ್ ಪಾಕ್‌ನ ದರ್ಗಾಕ್ಕೆ ಭೇಟಿ ನೀಡಿದ್ದಾರೆಂದು ಉಲ್ಲೇಖಿಸಿದ್ದು, ಈ ಯಾವುದೇ ವರದಿಗಳು ರಾವತ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು  ಹೇಳಿಲ್ಲ. ಅವರು ದರ್ಗಾ ಮತ್ತು ಇತರ ಪೂಜಾ ಸ್ಥಳಗಳಿಗೆ ಭೇಟಿ ನೀಡಿದ ಹಲವಾರು ವರದಿಗಳು ಲಭಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್  ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ದರ್ಗಾಕ್ಕೆ ಭೇಟಿ ನೀಡಿದ ಹಳೆಯ ವಿಡಿಯೋವನ್ನು ಹಂಚಿಕೊಳ್ಲಲಾಗುತ್ತಿದೆ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಸತ್ಯಾಂಶವನ್ನು ತಿಳಿದುಕೊಂಡು ಹಂಚಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಫಡ್ನವೀಸ್‌ ಗನ್‌ ಹಿಡಿದಿರುವ ಹಳೆಯ ಪೋಸ್ಟರನ್ನು ಬಾಬಾ ಸಿದ್ದಿಕ್ ಹತ್ಯೆಯ ಬಳಿಕ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *