Fact Check | ಮಣಿಪುರದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಿಂದ ಕ್ರಿಶ್ಚಿಯನ್ ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಣಿಪುರದಲ್ಲಿನ ಗಲಭೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಯುತ್ತಿದೆ. ಅವರ ರಕ್ಷಣೆಗೆ ಯಾರು ಧಾವಿಸುತ್ತಿಲ್ಲ. ಈಗಾಗಲೇ ಸಾವಿರಾರು ಕ್ರೈಸ್ತರು ಮಣಿಪುರದಲ್ಲಿನ ಸಶಸ್ತ್ರ ಪಡೆಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈಗ ಅಮಾಯಕ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು, ಇದೇ ಸಶಸ್ತ್ರ ಪಡೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಈ‌ ಮೂಲಕ ಈಗ ಅಲ್ಲಿ ಉಳಿದಿರುವ ಕೆಲವೇ ಕೆಲವು ಕ್ರೈಸ್ತರಲ್ಲೂ ಭಯದ ವಾತಾವರಣವನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ

ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರನ್ನು ಥಳಿಸುತ್ತಿರುವುದು ಮತ್ತು ತನ್ನನ್ನು ಹೊಡೆಯದಂತೆ ಮಹಿಳೆ ಅಂಗಲಾಚುತ್ತಿರುವುದನ್ನು ನಾನು ನೋಡಬಹುದಾಗಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಇದು ನಿಜವಾಗಿಯೂ ನಡೆದ ಘಟನೆ ಮತ್ತು ಆಕೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳು ಎಂದು ಭಾವಿಸಿ, ವೈರಲ್ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ, ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು, ಈ ವೇಳೆ ನಮಗೆ 23 ಜುಲೈ 2024ರಂದು ಮಣಿಪುರ ಫ್ಯಾಕ್ಟ್‌ಚೆಕ್ ಎಂಬ ಸುದ್ದಿ ತಾಣಗೊಂದರ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಕಂಡು ಬಂದಿದೆ. ಇದರಲ್ಲಿ ಕೂಡ ವೈರಲ್ ವಿಡಿಯೋದಲ್ಲಿ ಕಂಡು ಬಂದ ಮಹಿಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳ ಪ್ರಕಾರ ಈಕೆ ಕ್ರೈಸ್ತ ಸಮುದಾಯಕ್ಕೆ ಸೇರಿದವಳಲ್ಲ. ಈಕೆಯ ಹೆಸರು ಇಬೆಮ್ ಬೇಗಂ, ಇವರಯ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದರೆ. ಈ ಘಟನೆ ಮಾದಕವಸ್ತು ಸಂಬಂಧಿತ ಹಿಂಸಾಚಾರದಿಂದ ತೊಂದರೆಗೊಳಗಾದ ಪ್ರದೇಶವಾದ, ಮಣಿಪುರದ ಇಂಫಾಲ್‌ನಲ್ಲಿ ಇಬೆಮ್ ಬೇಗಂ ಅವರನ್ನು ಡ್ರಗ್ ಡೀಲರ್ ಎಂಬ ಆರೋಪ ಹೊರಿಸಿ ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಸದಸ್ಯರು ಆಕೆಯನ್ನು ಥಳಿಸಿದ್ದಾರೆ. ವರದಿಗಳ ಪ್ರಕಾರ, ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (UNLF) ಮೈತಿ (Meitei) ದಂಗೆಕೋರ ಗುಂಪಿನ ಒಂದು ಬಣ ಎಂದು ತಿಳಿದು ಬಂದಿದ್ದು, 2023ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಈ ಗುಂಪು ಸಹಿ ಹಾಕಿತ್ತು ಎಂಬುದು ತಿಳಿದು ಬಂದಿದೆ. ಈ ಕುರಿತು ಹಲವು ವರದಿಗಳಲ್ಲಿ ಕೂಡ ಉಲ್ಲೇಖವಾಗಿದೆ

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಮಣಿಪುರ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ಲಭ್ಯವಾಗಿದೆ ಅದರ ಪ್ರಕಾರ ದುಷ್ಕರ್ಮಿಗಳು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯನ್ನು ಥಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದರಲ್ಲಿ ಯಾವುದೇ ಕೋಮುವಾದಿ ಕೋನವಿಲ್ಲ ಎಂದು ವೈರಲ್ ವೀಡಿಯೊದಲ್ಲಿ ಸಂತ್ರಸ್ತ ಮಹಿಳೆ ಡ್ರಗ್ ಡೀಲರ್ ಎಂದು ಸೂಚಿಸುವ ಹಲವಾರು ಪೋಸ್ಟ್‌ಗಳನ್ನು ಕೂಡ ನಾವು ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಡ್ರಗ್ ಪ್ರಕರಣದಲ್ಲಿ UNLF ಸದಸ್ಯರು ಮುಸ್ಲಿಂ ಮಹಿಳೆಯೊಬ್ಬರನ್ನು ಥಳಿಸುತ್ತಿರುವುದನ್ನು ತೋರಿಸುವ ಜುಲೈ 2024 ರ ಹಳೆಯ ವೀಡಿಯೊವನ್ನು ಇತ್ತೀಚೆಗೆ ಕ್ರಿಶ್ಚಿಯನ್ನರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇನ್ನು ಇಲ್ಲಿ ಕೋಮು ಆಯಾಮದ ಕಾರಣದಿಂದ‌ ಹಲ್ಲೆ ನಡೆಸಲಾಗಿದೆ ಎಂಬುದು ಕೂಡ ಸುಳ್ಳಾಗಿದೆ. ಹಾಗಾಗಿ ಈ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ


ಇದನ್ನೂ ಓದಿ :Fact Check : ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *