Fact Check : ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶದಿಂದ ಮರಳಿ ಬಂದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಭಾರತೀಯ ಮೂಲದ ಅಮೇರಿಕದ ಗಗನಯಾತ್ರಿ ಮತ್ತು NASAದ ಹಿರಿಯ ಗಗನಯಾನಿಯಾಗಿರುವ ಸುನಿತಾ ವಿಲಿಯಮ್ಸ್‌ರವರು ಬಾಹ್ಯಾಕಾಶ ನೌಕೆಯಲ್ಲಿ 127 ದಿನಗಳ ಕಾರ್ಯಾಚರಣೆಯನ್ನು “ಯಶಸ್ವಿಯಾಗಿ ಪೂರ್ಣಗೊಳಿಸಿ ಭೂಮಿಗೆ ಮರಳಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ವೈರಲ್‌ ವಿಡಿಯೋದ ಕುರಿತು ನಿಜ ತಿಳಿದುಕೊಳ್ಳಲು, “ಸುನಿತಾ ವಿಲಿಯಮ್ಸ್”  ಎಂಬ ಕೀವರ್ಡ್‌ ಬಳಸಿಕೊಂಡು Google ನಲ್ಲಿ ಹುಡುಕಿದಾಗ, 2023ರ ಡಿಸೆಂಬರ್‌ನಲ್ಲಿ ಪ್ರಕಟವಾದ UNILAD ಎಂಬ ಲೇಖನವೊಂದು ದೊರೆತಿದೆ. “ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ವಿಶ್ರಾಂತಿಸಲು ವಿಲಕ್ಷಣವಾದ ಮಾರ್ಗವನ್ನು ತೋರಿಸಿದ್ದಾರೆ” ಎಂದು ಈ ಲೇಖನದಲ್ಲಿ ಉಲ್ಲೇಖವಾಗಿದೆ. ಇದು ವಿಲಿಯಮ್ಸ್ ಚಿತ್ರೀಕರಿಸಿದ ಹಳೆಯ ವಿಡಿಯೋ ಆಗಿದೆ. ಆ ವಿಡಿಯೋದಲ್ಲಿ ವಿಲಿಯಮ್ಸ್‌ 2012 ರಲ್ಲಿ ತಮ್ಮ ISS  ಕಾರ್ಯಾಚರಣೆಯ ಅಂತಿಮ ದಿನಗಳ ಕುರಿತು ವಿವರಿಸಿದ್ದಾರೆ. NASA ಕೂಡ 2012ರ ವಿಲಿಯಮ್ಸ್‌ರವರ ಬಾಹ್ಯಾಕಾಶದ ಪ್ರವಾಸವನ್ನು ಕುರಿತು YouTube ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. 2012 ರಲ್ಲಿ ISS ವಿಲಿಯಮ್ಸ್‌ ಬಾಹ್ಯಾಕಾಶ ಭೇಟಿಯ ವಿಡಿಯೋವನ್ನು UNILAD ಲೇಖನದಲ್ಲಿ ಹಂಚಿಕೊಂಡಿದೆ. ಆದ್ದರಿಂದ ಈ ವೈರಲ್ ವಿಡಿಯೋ ಹಳೆಯದಾಗಿದೆ ಎಂಬ ತೀರ್ಮಾನಕ್ಕೆ ಬರಬಹುದು.

ಇತ್ತೀಚೆಗೆ ಜೂನ್ 2024ರಲ್ಲಿ ಎಂಟು ದಿನಗಳಲ್ಲಿಯೇ ಭೂಮಿಗೆ ಮರಳಿ ಬರುವ ಯೋಜನೆಯೊಂದಿಗೆ ನಾಸಾದ ಗಗನಯಾತ್ರಿಗಳಾದ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್  ISS ( International Space Station ) ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. 8ರಿಂದ 10 ದಿನ ಅಲ್ಲಿದ್ದು ನಂತರ ಅವರು ಜೂನ್‌ 14ರ ವೇಳೆಗೆ ಸ್ಟಾರ್‌ಲೈನರ್‌ ಮೂಲಕವೇ ಭೂಮಿಗೆ ಮರಳಬೇಕಾಗಿತ್ತು. ಆದರೆ ಯೋಜನೆಯಂತೆ ಯಾವುದೂ ನಡೆಯಲಿಲ್ಲ. ಬೋಯಿಂಗ್ ಸ್ಟಾರ್‌ಲೈನರ್ ಪರೀಕ್ಷಾ ಹಾರಾಟದ ತಾಂತ್ರಿಕ ಸಮಸ್ಯೆ ಉಂಟಾಗಿ ವಿಲಿಯಮ್ಸ್ ಮತ್ತು ವಿಲ್ಮೋರ್‌ ಹಲವು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿರಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಅವರು ಮರಳಿ ಬರುವ ನಿರೀಕ್ಷಿತ ಅವಧಿ 240 ದಿನಗಳಾಗಿದ್ದು, ಫೆಬ್ರುವರಿ 2025 ರಲ್ಲಿ ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಕ್ಯಾಪ್ಸುಲ್‌ ಮೂಲಕ ಮರಳಿ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸುನಿತಾ ವಿಲಿಯಮ್ಸ್‌ 2024ರಲ್ಲಿ ಬಾಹ್ಯಾಕಾಶಕ್ಕೆ ಭೇಟಿ ನೀಡಿದ 127 ದಿನಗಳ ನಂತರ ಮರಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು 2012ರ ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಇಂತಹ ಅನುಮಾನಾಸ್ಪದ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ :

Fact Check : ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *