Fact Check:1946 ಮತ್ತು 1956 ರ ನಡುವೆ 53 ದೇಶಗಳು ಸ್ವಾತಂತ್ರ್ಯ ಹೋರಾಟವಿಲ್ಲದೆ, ವಿಭಜನೆ ಇಲ್ಲದೆ ಸ್ವಾತಂತ್ರ್ಯಗೊಂಡಿವೆ ಎಂಬುದು ಸುಳ್ಳು

ಸ್ವಾತಂತ್ರ್ಯ ಹೋರಾಟ

ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರು ಕೊಡುಗೆಗಳು ಅಪಾರ. ಕೇವಲ ಕೆಲವು ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಸ್ವಾತಂತ್ರ್ಯ ಚಳುವಳಿಯನ್ನು ಭಾರತದ ಉದ್ದಗಲಕ್ಕೂ ತಲುಪುವಂತೆ ಮಾಡಿ, ಜನರನ್ನು ಸಂಘಟಿಸಲು ಸಾಧ್ಯವಾಗಿದ್ದು ಮಹಾತ್ಮ ಗಾಂಧಿಯವರಿಂದ. ಅವರು ರೂಪಿಸಿದ ಅಸಹಕಾರ ಚಳುವಳಿ, ದಂಡಿ ಮೆರವಣಿಗೆ, ಉಪ್ಪಿನ ಸತ್ಯಗ್ರಹ ಮತ್ತು ಸೈಮನ್ ಗೋ ಬ್ಯಾಕ್‌ ಚಳುವಳಿಗಳಿಂದ ಯಾವುದೇ ರಕ್ತಪಾತವಿಲ್ಲದೇ ಅಹಿಂಸೆಯ ಮೂಲಕ ಬೃಹತ್ ಹೋರಾಟವನ್ನು ಕಟ್ಟಬಹುದು ಮತ್ತು ಪ್ರಭುತ್ವಕ್ಕೆ ಸವಾಲಾಗಬಹುದು ಎಂದು ಜಗತ್ತಿಗೆ ನಿರೂಪಿಸಿ ತೋರಿಸಿದವರು.

ಇನ್ನೂ ತಮ್ಮ ತಂದೆ ಮೋತಿಲಾಲ್‌ ನೆಹರು ಅವರಿಂದ ಪ್ರಭಾವಿತರಾಗಿ ಎಳೆಯವರಾಗಿದ್ದಾಗಿನಿಂದಲೇ ಭಾರತವನ್ನು ಸ್ವಾತಂತ್ರ್ಯಗೊಳಿಸುವ ಕನಸು ಹೊತ್ತ ಜವಹರಲಾಲ್ ನೆಹರೂ ಅವರು ಗಾಂಧೀಜಿಯವರ ನೆಚ್ಚಿನ ಅನುಯಾಯಿಯಾಗಿ ಅವರು ರೂಪಿಸಿದ ಎಲ್ಲಾ ಹೋರಾಟಗಳಲ್ಲಿಯೂ ಭಾಗಿಯಾಗಿ ಅನೇಕ ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಿ, ಬ್ರಿಟಿಷರ ವಸಹಾತುಶಾಹಿ ನೀತಿಗಳಿಂದ, ದಬ್ಬಾಳಿಕೆಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದ ದೇಶವನ್ನು ಪಂಚವಾರ್ಷಿಕ ಯೋಜನೆ, ಇಪ್ಪತ್ತು ಅಂಶಗಳ ಯೋಜನೆ, ಕೈಗಾರಿಕರಣದಂತಹ ನೀತಿಗಳಿಂದ ಭಾರತವನ್ನು ಸದೃಢ ದೇಶವನ್ನಾಗಿಸಲು ಶ್ರಮಿಸಿದ್ದಾರೆ.

ಆದರೆ ಈ ಇಬ್ಬರು ಮೇರು ವ್ಯಕ್ತಿತ್ವಗಳ ಕೊಡುಗೆಗಳನ್ನು ಮರೆಸಿ ಅವರ ಕುರಿತು ಜನರಲ್ಲಿ ದ್ವೇಷ ಬೆಳೆಸುವ ಸಲುವಾಗಿ ಅನೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಗಾಂಧೀಜಿ ಮತ್ತು ನೆಹರೂ ಅವರು ಮೂಲತಃ ಮುಸ್ಲಿಂ ಎಂದು ಹೇಳುವುದರಿಂದ ಹಿಡಿದು, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೆ ಗಾಂಧೀಜಿಯವರು ಕಾರಣ. ಮತ್ತು ಭಗತ್ ಸಿಂಗ್ ಅವರ ಸಾವಿಗೂ ಸಹ ಗಾಂಧೀಜಿಯವರೇ ಕಾರಣ ಎಂಬ ಆಧಾರರಹಿತ ಸುಳ್ಳು ಹೇಳಿಕೆಗಳಿಂದ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ.

ಅದರ ಭಾಗವಾಗಿ ಈಗ, “54 ಕಾಮನ್ವೆಲ್ತ್ ರಾಷ್ಟ್ರಗಳ ಪೈಕಿ 53 ದೇಶಗಳು 1946 ಮತ್ತು 1956 ರ ನಡುವೆ ಗಾಂಧಿ ಅಥವಾ ನೆಹರೂ ಅವರ ಪಾಲ್ಗೊಳ್ಳುವಿಕೆಯಿಲ್ಲದೆ ಮತ್ತು ವಿಭಜನೆಯಿಲ್ಲದೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದಿವೆ” ಎಂದು ಹೇಳುವ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ (ಇಲ್ಲಿಇಲ್ಲಿಇಲ್ಲಿ ಮತ್ತು ಇಲ್ಲಿ) ವೈರಲ್ ಆಗುತ್ತಿದೆ. ಈ ಲೇಖನದ ಮೂಲಕ ಈ ಆರೋಪಗಳು ನಿಜವೇ ಎಂದು ಪರೀಕ್ಷಿಸೋಣ.

ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಫ್ಯಾಕ್ಟ್‌ ಚೆಕ್:

ವೈರಲ್ ಸಂದೇಶದ ನಿಖರತೆಯನ್ನು ಪರಿಶೀಲಿಸಲು, ನಾವು ಮೊದಲು ಕಾಮನ್ವೆಲ್ತ್ ಸಂಸ್ಥೆಯ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿದ್ದೇವೆ. ಈ ವೆಬ್ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರಸ್ತುತ 56 ಸದಸ್ಯ ರಾಷ್ಟ್ರಗಳಿವೆ, ಅವುಗಳಲ್ಲಿ ಹೆಚ್ಚಿನವು ಬ್ರಿಟಿಷ್ ಸಾಮ್ರಾಜ್ಯದ ಹಿಂದಿನ ವಸಹಾತು ದೇಶಗಳಾಗಿವೆ. ಕಾಮನ್ವೆಲ್ತ್‌ಗೆ ಸೇರಿದ ಕೊನೆಯ ನಾಲ್ಕು ದೇಶಗಳಾದ ಮೊಜಾಂಬಿಕ್, ರುವಾಂಡಾ, ಗ್ಯಾಬೊನ್ ಮತ್ತು ಟೋಗೊಗಳು ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಯಾವುದೇ ಐತಿಹಾಸಿಕ ಸಂಬಂಧಗಳನ್ನು ಹೊಂದಿಲ್ಲ. ಗ್ಯಾಬೊನ್ ಮತ್ತು ಟೋಗೊ ಇತ್ತೀಚಿನ ಸದಸ್ಯರಾಗಿದ್ದು, ಎರಡೂ ದೇಶಗಳು ಜೂನ್ 2022 ರಲ್ಲಿ ಸೇರಿದರು ಮತ್ತು ಎರಡೂ ಮಾಜಿ ಫ್ರೆಂಚ್ ವಸಾಹತುಗಳಾಗಿವೆ. ರುವಾಂಡಾ ಬೆಲ್ಜಿಯಂನ ವಸಾಹತು ಆಗಿದ್ದರೆ, ಮೊಜಾಂಬಿಕ್ ಪೋರ್ಚುಗಲ್ ನ ವಸಾಹತು ಆಗಿತ್ತು.

ಈ ಹುಡುಕಾಟದ ಸಮಯದಲ್ಲಿ, ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದ ಎಲ್ಲಾ ರಾಷ್ಟ್ರಗಳು ಕಾಮನ್ವೆಲ್ತ್‌ಗೆ ಸೇರಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಉದಾಹರಣೆಗೆ, 1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಮ್ಯಾನ್ಮಾರ್ (ಹಿಂದೆ ಬರ್ಮಾ) ಕಾಮನ್ವೆಲ್ತ್‌ನ ಸದಸ್ಯನಲ್ಲ. ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್ ನಂತಹ ಕೆಲವು ದೇಶಗಳು ಕಾಮನ್ ವೆಲ್ತ್ ಅನ್ನು ತೊರೆದು ನಂತರ ಮತ್ತೆ ಸೇರಿಕೊಂಡವು.

ಇಲ್ಲಿಯವರೆಗೆ ಒಟ್ಟು 62 ದೇಶಗಳು ಯುನೈಟೆಡ್ ಕಿಂಗ್ಡಮ್‌ನಿಂದ ಸ್ವಾತಂತ್ರ್ಯವನ್ನು ಪಡೆದಿವೆ. ಮೊದಲನೆಯದು 04 ಜುಲೈ 1776 ರಂದು ಯುನೈಟೆಡ್ ಸ್ಟೇಟ್ಸ್ (ಆದರೂ ಬ್ರಿಟಿಷ್ ಸರ್ಕಾರವು 1783 ರವರೆಗೆ ಘೋಷಣೆಯನ್ನು ಅಧಿಕೃತವಾಗಿ ಘೋಷಿಸಲಿಲ್ಲ). ಅತ್ಯಂತ ಇತ್ತೀಚಿನದು ಎಂದರೆ ಬ್ರೂನಿ 1984 ರಲ್ಲಿ ಇಸ್ಲಾಮಿಕ್ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತು. ತೀರಾ ಇತ್ತೀಚೆಗೆ, 2014 ರಲ್ಲಿ ನಿಕಟವಾಗಿ ಹೋರಾಡಿದ ಜನಮತಗಣನೆಯ ನಂತರ ಸ್ಕಾಟ್ಲೆಂಡ್‌ನಲ್ಲಿ ಸ್ವಾತಂತ್ರ್ಯದ ಪ್ರಯತ್ನವು ವಿಫಲವಾಯಿತು, ಇದರಲ್ಲಿ 55% ಜನರು ಯುನೈಟೆಡ್ ಕಿಂಗ್ಡಮ್‌ನ ಭಾಗವಾಗಿ ಉಳಿಯಲು ಮತ ಚಲಾಯಿಸಿದರು (ಇಲ್ಲಿಇಲ್ಲಿಇಲ್ಲಿ).

ಈ ಹುಡುಕಾಟದ ಸಮಯದಲ್ಲಿ, ಭಾರತ (1947), ಶ್ರೀಲಂಕಾ (1948) ಮತ್ತು ಪಾಕಿಸ್ತಾನ (1947) ಎಂಬ ಮೂರು ಕಾಮನ್ವೆಲ್ತ್ ರಾಷ್ಟ್ರಗಳು ಮಾತ್ರ 1946 ಮತ್ತು 1956 (ಇಲ್ಲಿ) ನಡುವೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದಿವೆ ಎಂದು ನಾವು ಕಂಡುಕೊಂಡಿದ್ದೇವೆ.

ಇದಲ್ಲದೆ, ಸ್ವಾತಂತ್ರ್ಯದ ಜೊತೆಗೆ ವಿಭಜನೆಯನ್ನು ಅನುಭವಿಸಿದ ಏಕೈಕ ಕಾಮನ್ವೆಲ್ತ್ ದೇಶ ಭಾರತವಲ್ಲ; ಜಾಂಬಿಯಾದಲ್ಲಿಯೂ ಇದೇ ರೀತಿಯ ವಿಭಜನೆ ಸಂಭವಿಸಿದೆ. ಜಾಂಬಿಯಾ ಮತ್ತು ಮಲವಿ 1964 ರಲ್ಲಿ ‘ಫೆಡರೇಷನ್ ಆಫ್ ರೊಡೇಷಿಯಾ ಮತ್ತು ನ್ಯಾಸಾಲ್ಯಾಂಡ್’ ನಿಂದ ಬೇರ್ಪಟ್ಟು ಸ್ವಾತಂತ್ರ್ಯವನ್ನು ಪಡೆದವು. ನಂತರ, ದಕ್ಷಿಣ ರೊಡೇಷಿಯಾ ಜಿಂಬಾಬ್ವೆಯಾಯಿತು (ಇಲ್ಲಿಇಲ್ಲಿಇಲ್ಲಿ).

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಎಂಬ ಮೂರು ಕಾಮನ್ವೆಲ್ತ್ ರಾಷ್ಟ್ರಗಳು ಮಾತ್ರ 1946 ಮತ್ತು 1956 ರ ನಡುವೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದವು.


ಇದನ್ನು ಓದಿ: ವಿಜಯ ದಶಮಿ ಆಚರಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಹಿಂದೂ ಯುವತಿಯರನ್ನು ಕೊಲೆ ಮಾಡಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *