Fact Check : ವಿಜಯ ದಶಮಿ ಆಚರಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಹಿಂದೂ ಯುವತಿಯರನ್ನು ಕೊಲೆ ಮಾಡಲಾಗಿದೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ವಿಜಯ ದಶಮಿ ಆಚರಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಇಬ್ಬರು ಹಿಂದೂ ಹುಡುಗಿಯರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ ಎಂಬ ಸಂದೇಶದೊಂದಿಗೆ ಇಬ್ಬರು ಯುವತಿಯರು ಜೊತೆಯಲ್ಲಿ ಕುಳಿತಿರುವ ಚಿತ್ರವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ,

“ಬಾಂಗ್ಲಾದಲ್ಲಿ ದುರ್ಗಾ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಇಬ್ಬರು ಹಿಂದೂ ಯುವತಿಯರ ಭೀಕರ ಹತ್ಯೆ! ಹಿಂದುಗಳಿಗೂ ಕೋಳಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ, ಕೋಳಿಯೊಂದನ್ನು ಕತ್ತರಿಸುವಾಗ ಅದು ಮಾತ್ರ ಚೀರಾಡುತ್ತದೆ, ಉಳಿದ ಕೋಳಿಗಳು ಬಿಟ್ಟಿ ಕಾಳುಗಳನ್ನು ತಿನ್ನುತ್ತಾ ತಮ್ಮ ಪಾಡಿಗೆ ತಾವು ಇರುತ್ತವೆ, ಮುಂದಿನ ಸರದಿ ನಮ್ಮದು ಎಂದು ಗೊತ್ತಿರುವುದಿಲ್ಲ!! ಜಾತ್ಯಾತೀತತೆ, ಸಹೋದರತ್ವ ಎಲ್ಲಾ ಬೋಗಸ್, ಇದು ಹಿಂದೂಗಳನ್ನು ನಾಶ ಮಾಡಲು ಹೆಣೆದಿರುವ ಬಲೆ ಅಷ್ಟೇ, ಹಿಂದೂಗಳೇ ಎಚ್ಚೆತ್ತುಕೊಳ್ಳುತ್ತಿರೋ, ನಾಶವಾಗುತ್ತಿರೋ  ನೋಡಿ!!” ಎಂಬ ಕೋಮುದ್ವೇಷ ಪ್ರೇರಿತ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ.

“ಪೂಜಾ ಮಂಟಪದಿಂದ ಮರಳುತ್ತಿದ್ದ ಇಬ್ಬರು ಹಿಂದೂ ಯುವತಿಯರನ್ನು ಕೊಲೆ ಮಾಡಲಾಗಿದೆ. ಆದರೆ, ಈ ಯುವತಿಯರು ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ.  ಈ ಇಬ್ಬರು ಯುವತಿಯರು ಇಸ್ಕಾನ್‌ ಕುಟುಂಬಕ್ಕೆ ಸೇರಿದವರು. ಇಸ್ಕಾನ್‌ ಕುಟುಂಬಗಳಿಗೆ ಸೇರಿದವರು ಮದ್ಯ ಸೇವಿಸುವುದಿಲ್ಲ” ಎಂಬ ಒಂದೇ  ಸಂದೇಶವನ್ನು ಸಾಮಾಜಿಕ ಮಾಧ್ಯಮದ ವಿವಿಧ ಖಾತೆಗಳಲ್ಲಿ ನಕಲು ಮಾಡಿಕೊಂಡಿದ್ದು, ಈ ಬಗ್ಗೆ ದಿ ಇಂಟೆಂಟ್‌ ಡಾಟಾ ಸತ್ಯಶೋಧನಾ ಸಂಸ್ಥೆಯು ಮಾಹಿತಿ ಹಂಚಿಕೊಂಡಿದೆ.

ಫ್ಯಾಕ್ಟ್‌ ಚೆಕ್‌ :

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಫರೀದ್‌ಪುರದಲ್ಲಿ ವಿಷಕಾರಿ ಮದ್ಯ ಸೇವಿಸಿ ಈ ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ರತ್ನಾ ಸಹಾ ಮತ್ತು ಪೂಜಾ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಕುಟುಂಬ ಸದಸ್ಯರ ಹೇಳಿಕೆಯ ಪ್ರಕಾರ, ಇಬ್ಬರೂ ಯುವತಿಯರು ರಾತ್ರಿ 10:30ರ ಸುಮಾರಿಗೆ ಮನೆಗೆ ಮರಳಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದು, ವಾಂತಿ ಮಾಡಲು ಪ್ರಾರಂಭಿಸಿದ್ದರು.

ಮಗೂರ ಜಿಲ್ಲೆಯ ಶಾಲಿಖಾ ಉಪಜಿಲ್ಲಾ ಗ್ರಾಮದ ಸಾಧನ್ ಬಿಸ್ವಾಸ್ ಅವರ ಪುತ್ರಿ ಹಾಗೂ ಹಾನರ್ಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಪೂಜಾ ಬಿಸ್ವಾಸ್ (20) ಹಾಗೂ ಸರ್ಕಾರಿ ರಾಜೇಂದ್ರ ಕಾಲೇಜಿನ ಪದವಿ ವಿದ್ಯಾರ್ಥಿನಿ ಹಾಗೂ ವಾರ್ಡ್‌ನ ರತನ್ ಕುಮಾರ್ ಸಹಾ ಅವರ ಪುತ್ರಿ ರತ್ನಾ ಸಹಾ (26) ಸ್ಥಳೀಯ ಮದ್ಯ ಸೇವಿಸಿ ಮೃತಪಟ್ಟವರು.

ಮೃತರ ಕುಟುಂಬಗಳು ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಇಬ್ಬರು ವಿದ್ಯಾರ್ಥಿನಿಯರು ಸರ್ಕಾರಿ ರಾಜೇಂದ್ರ ಕಾಲೇಜಿನ  ಫರೀದ್‌ಪುರದ ಅಲಿಪುರದ ಕನೈ ಮತ್‌ಬಾರ್ ಮೋರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ಹಬ್ಬದ ಆಚರಣೆಯಲ್ಲಿ  ಪಾಲ್ಗೊಂಡು ಮನೆಗೆ ಹಿಂತಿರುಗಿದ ಅವರು ಅಸ್ವಸ್ಥರಾಗಿದ್ದರು. ಅವರೊಂದಿಗೆ ವಾಸಿಸುತ್ತಿರುವ ಇನ್ನೊಬ್ಬ ಉದ್ಯೋಗಿ ಮಹಿಳೆ ಬಿಥಿ ಸಾಹಾ, ಇಬ್ಬರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಮಧ್ಯರಾತ್ರಿಯ ಸುಮಾರಿಗೆ ಫರೀದ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.

ಇವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದು, ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮದ್ಯ ಸೇವನೆಯಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯವರು ಬೆಳಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಅಸಾದುಜ್ಜಮಾನ್ ತಿಳಿಸಿದ್ದಾರೆ. ಪೂಜಾ ಮತ್ತು ರತ್ನ ಅವರು ಹಿಂದಿನ ದಿನ ಸಂಜೆ ಉತ್ಸವದಲ್ಲಿ ಭಾಗವಹಿಸಲು ಹೋಗಿದ್ದರು ಮತ್ತು ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದ ನಂತರ ಅವರು ಅಸ್ವಸ್ಥರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಫರೀದ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ ಎಂಬ ಬಗ್ಗೆ ವಿಸ್ತೃತ ವರದಿ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಜಯ ದಶಮಿ ಆಚರಿಸಿ ಮನೆಗೆ ಹಿಂದಿರುಗುತ್ತಿದ್ದಾಗ  ಇಬ್ಬರು ಹಿಂದೂ ಹುಡುಗಿಯರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು ಸಂದೇಶವಾಗಿದ್ದು, ಯುವತಿಯರು ಸ್ಥಳೀಯ ಮದ್ಯ ಸೇವಿಸಿ ಸಾವನ್ನಪ್ಪಿರುವುದು ಸಾಬೀತಾಗಿದೆ. ಇಂತಹ ಸುದ್ದಿಗಳನ್ನು ಕೋಮು ಆಯಾಮದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ? : Fact Check : ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಪಂಜಾಬಿನಲ್ಲಿ ಮಹಾರಾಜ ರಂಜಿತ್ ಸಿಂಗ್‌ರವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂಬುದು ಸುಳ್ಳು



ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *