Fact Check | ಏರ್‌ ಶೋನಲ್ಲಿ ಪೈಲೆಟ್‌ ಅದ್ಭುತ ಪ್ರದರ್ಶನ ಎಂದು ರಿಮೋಟ್ ಕಂಟ್ರೋಲ್ಡ್‌ ಜೆಟ್‌ ಮಾಡಲ್‌ ವಿಡಿಯೋ ಹಂಚಿಕೆ

ಈ ವಿಡಿಯೋವನ್ನು ನೋಡಿ ಭಾರತದ ಏರ್‌ಶೋ ಇತಿಹಾಸದಲ್ಲೇ ಇದೊಂದು ಅದ್ಭುತವಾದ ಪ್ರದರ್ಶನ, ನಾವು ಸಾಕಷ್ಟು ಏರ್‌ಶೋಗಳನ್ನು ನೋಡಿರುತ್ತೇವೆ ಆದರೆ ಈ ರೀತಿಯ ಅದ್ಭುತವಾದ ಪ್ರತಿಭೆಯುಳ್ಳ ಫೈಲೆಟ್‌ನ ಸಾಮಾರ್ಥ್ಯವನ್ನು ಪ್ರದರ್ಶಿಸಿದ ಏರ್‌ಶೋ ಇದು ಎಂದರೆ ತಪ್ಪಾಗುವುದಿಲ್ಲ. ಒಂದು ಏರ್‌ಕ್ರಾಫ್ಟ್‌ ಅನ್ನು ಹೀಗೂ ಬಳಸಲಾಗುತ್ತದೆ ಎಂಬುದು ನಮಗೆ ಇದೇ ಮೊದಲ ಬಾರಿಗೆ ತಿಳಿದು ಬಂದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದಲ್ಲಿ ಕೂಡ ಏರ್‌ಕ್ರಾಫ್ಟ್‌ ಹಾರುತ್ತಿರುವುದು, ಅದರ ಹಾರಾಟದ ಬಳಿಯೇ ಕೆಲವರು ನಿಂತಿರುವುದು ಕೂಡ ಕಂಡು ಬರುತ್ತಿದೆ. ಇದನ್ನು ನೋಡಿದ ಹಲವರು ವೈರಲ್‌ ವಿಡಿಯೋ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ವೈರಲ್‌ ಪೋಸ್ಟ್‌ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಧಿಸಿದಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ  Ryu Sintuphrom ಎಂಬ ಯುಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದು ಪತ್ತೆಯಾಗಿದ್ದು, ಈ ವಿಡಿಯೋವನ್ನು ದಿನಾಂಕ 12 ಸೆಪ್ಟಂಬರ್‌ 2024ರಂದು ಹಂಚಿಕೊಳ್ಳಲಾಗಿದೆ.

ಹೀಗಾಗಿ ವೈರಲ್‌ ವಿಡಿಯೋ ಭಾರತದ ಏರ್‌ಶೋಗೆ ಸಂಬಂಧಿಸಿದಲ್ಲ ಎಂಬುದು ನಮಗೆ ಸ್ಪಷ್ಟವಾಗಿತ್ತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು Ryu Sintuphrom ಯುಟ್ಯೂಬ್‌ ಚಾನಲ್‌ ಅನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ಅಲ್ಲಿ ನಮಗೆ ವೈರಲ್‌ ವಿಡಿಯೋದಂತೆ ಹಲವು ವಿಡಿಯೋಗಳು ಕಂಡು ಬಂದಿವೆ. ಈ ವಿಡಿಯೋಗಳು ರಿಮೋಟ್‌ ಕಂಟ್ರೋಲ್ಡ್‌ ಜೆಟ್‌ ಮಾಡಲ್‌ಗಳ ಪರೀಕ್ಷೆಯನ್ನು ನಡೆಸುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ವೈರಲ್‌ ವಿಡಿಯೋ ಜರ್ಮನಿಯಲ್ಲಿ ನಡೆಯಲಿರುವ ಜೆಟ್‌ ಪವರ್‌ಶೋ 2024ರ ಕಾರ್ಯಕ್ರಮದ ತಯಾರಿಯ ವಿಡಿಯೋವಾಗಿದೆ ಎಂಬುದು ಕೂಡ ತಿಳಿದು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ವಿಡಿಯೋ ಭಾರತದ ಏರ್‌ಶೋಗೆ ಸಂಬಂಧಿಸಿಲ್ಲ. ಪೈಲೆಟ್‌ ಅದ್ಭತ ಪ್ರದರ್ಶನ ನೀಡಿದ್ದಾರೆ ಎಂದು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋ ಜರ್ಮನಿಯಲ್ಲಿ ನಡೆಯಲಿರುವ ಜೆಟ್‌ ಪವರ್‌ಶೋ 2024ರ ಕಾರ್ಯಕ್ರಮದ ತಯಾರಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಈ ವೈರಲ್‌ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *