Fact Check : ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮಹಿಳೆಯೊಬ್ಬಳು ಹಿಜಾಬ್‌ ಧರಿಸದೆ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸುತ್ತುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ  ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಟ್ವಿಟರ್‌ನ ವಾಯ್ಸ್ ಆಫ್ ಹಿಂದೂಸ್ ಎಂಬ ಖಾತೆಯಲ್ಲಿ ” ಯಾವುದೇ ಹಿಂದೂ ಹುಡುಗಿ ಹಿಜಾಬ್ ಧರಿಸದೆ ಬಾಂಗ್ಲಾದೇಶದಲ್ಲಿ ನಡೆದಾಡಲು ಸಾಧ್ಯವಿಲ್ಲ. ಮಹಮ್ಮದ್ ಯೂನಸ್‌ರ ಹೊಸ ಬಾಂಗ್ಲಾದೇಶಕ್ಕೆ ಸುಸ್ವಾಗತ, ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರವಾಗಿ ಯಾರೂ ನಿಲ್ಲುವುದಿಲ್ಲ. ಇದು ಅತ್ಯಂತ ಭಯಾನಕವಾದ ದೃಶ್ಯವಾಗಿದ್ದು, ನಾವೆಲ್ಲರೂ #SaveBangladesiHindus ಎಂದು ಮಾತನಾಡಬೇಕಾಗಿದೆ. ” ಗುಂಪೊಂದು ಮಹಿಳೆಯೊಬ್ಬಳಿಗೆ ಕಪಾಳಕ್ಕೆ ಹೊಡೆದು ಅವಳ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಆಕೆ ಅಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.  ಹಿಜಾಬ್ ಧರಿಸದ ಕಾರಣಕ್ಕಾಗಿ ಹಿಂದೂ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಅನೇಕ ಬಳಕೆದಾರರು ಅದೇ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ  ಹಂಚಿಕೊಂಡಿದ್ದಾರೆ.


ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವಿಡಿಯೋದ ಕುರಿತು ಸತ್ಯಾಂಶವನ್ನು ತಿಳಿದುಕೊಳ್ಳಲು, ಕಾಕ್ಸ್ ಬಜಾರ್ ವರದಿಗಾರರಾದ ತೌಫಿಕುಲ್ ಇಸ್ಲಾಂ ಲಿಪು ಎಂಬುವವರನ್ನು ಸಂಪರ್ಕಿಸಿದಾಗ, ಅವರು ಹಲ್ಲೆಗೊಳಗಾದ ಮಹಿಳೆ ಕೊಹಿನೂರ್ ಮತ್ತು ಅವಳು ಕುತುಬ್ ಆಲಂ ನಿರಾಶ್ರಿತರ ಶಿಬಿರದ ರೋಹಿಂಗ್ಯಾ ಮುಸ್ಲಿಂಳಾಗಿದ್ದಾಳೆ. ಮಹಿಳೆ ಟಿಕ್ ಟಾಕರ್ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. “ಕುತುಬ್ ಆಲಂ ರೋಹಿಂಗ್ಯಾ ನಿರಾಶ್ರಿತರ ಶಿಬಿರದ ಪಕ್ಕದ ಹಳ್ಳಿಯಲ್ಲಿ ಕಳ್ಳತನ ಮಾಡಿದ್ದಾಳೆ ಎಂಬ ಆರೋಪದ ಮೇಲೆ ಆಕೆಯನ್ನು ಹಿಡಿದು ಚಿತ್ತಗಾಂಗ್ ವಿಭಾಗದ ಕಾಕ್ಸ್ ಬಜಾರ್‌ ಎಂಬ ಪ್ರದೇಶದಲ್ಲಿ ಹಲ್ಲೆ ನಡೆಸಲಾಗಿದೆ” ಎಂದು ವರದಿಗಾರರು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡಕ್ಕೆ ತಿಳಿಸಿದ್ದಾರೆ. ಕೊಹಿನೂರ್ ವಿರುದ್ಧ ಕಾಕ್ಸ್ ಬಜಾರ್‌ನ ಉಖಿಯಾ ಠಾಣಾದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ನಮ್ಮ ತಂಡವು ನಂತರ ಈ ವೈರಲ್‌ ವಿಷಯಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ,ಆ ಮಹಿಳೆಯ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಹಲವಾರು ಪೋಸ್ಟ್‌ಗಳು ಲಭಿಸಿವೆ.

ಕೊಹಿನೂರ್ ಕಳ್ಳತನದಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಿ ಕಿರುಕುಳ ನೀಡಿದ ವಿಡಿಯೋಗಳು ಕೂಡ ವೈರಲ್ ಆಗಿವೆ.

ಅಕ್ಟೋಬರ್ 7 ರಂದು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿರುವ ವೈರಲ್ ವಿಡಿಯೋ ಲಭಿಸಿದೆ. ವಿಡಿಯೋದಲ್ಲಿ ಗುಂಪೊಂದು ಕೆಸರುಮಯವಾದ ಹಾದಿಯಲ್ಲಿ ಅವಳ ಕೂದಲನ್ನು ಎಳೆದುಕೊಂಡು, ರಸ್ತೆಯನ್ನು ದಾಟಿ, ಆಕೆಯ ಮೇಲೆ ಹಲ್ಲೆಗೊಳಗಾದ ಕಟ್ಟಡಕ್ಕೆ ಪ್ರವೇಶಿಸಿರುವುದನ್ನು ಕಾಣಬಹುದು. “ಟಿಕ್ ಟಾಕರ್ ಕೊಹಿನೂರ್ ಕಾಕ್ಸ್ ಬಜಾರ್‌ನಲ್ಲಿ ರಾಮುವಿನ ಮೊಬೈಲ್ ಕದ್ದು ಸಿಕ್ಕಿಬಿದ್ದಿದ್ದಾಳೆ” ಎಂದು ಶೀರ್ಷಿಕೆಯಲ್ಲಿ ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ. 

ಈ ಕುರಿತು ಮತ್ತಷ್ಟು ತಿಳಿಯಲು Google ನಕ್ಷೆಗಳನ್ನು ಬಳಸಿ ಕಾಕ್ಸ್ ಬಜಾರ್‌ನಲ್ಲಿರುವ ರಾಮು ಸಿಟಿ ಸ್ಟೇ ಹೌಸ್ ಎಂಬ ಸ್ಥಳವನ್ನು ಹುಡುಕಿದಾಗ, ಆ ಸ್ಥಳವನ್ನು ಜಿಯೋಲೊಕೇಟ್  ಮಾಡಲು ಸಾಧ್ಯವಾಯಿತು.  ಕಟ್ಟಡದ ಸ್ಕ್ರೀನ್‌ಶಾಟ್ ಮತ್ತು ನಕ್ಷೆಗಳಲ್ಲಿ ಕಂಡುಬರುವ ರಾಮು ಸಿಟಿ ಸ್ಟೇ ಹೌಸ್‌ನ ನಡುವಿನ ಹೋಲಿಕೆಯನ್ನು ಕೆಳಗಿನ ಚಿತ್ರಗಳಲ್ಲಿ ನೋಡಬಹುದು.


ಹಲ್ಲೆ ನಡೆದ ಸ್ಥಳವು ಕಟ್ಟಡದ ನೆಲ ಮಹಡಿಯಲ್ಲಿನ ಮೆಟ್ಟಿಲುಗಳ ಸಮೀಪದಲ್ಲಿದೆ ಎಂದು ನಿಖರವಾಗಿ ತಿಳಿದುಬಂದಿದೆ.

ಈ ವೈರಲ್‌ ವಿಷಯದ ಮಾಹಿತಿಗಾಗಿ ಕೊಹಿನೂರ್‌ನ್ನು ಸಂಪರ್ಕಿಸಿದಾಗ, ವಿಡಿಯೋದಲ್ಲಿ ಕಂಡುಬರುವ ಮಹಿಳೆ ನಾನೇ ಎಂದು ತಿಳಿಸಿದ್ದು; ವಿಡಿಯೋದಲ್ಲಿ ನಡೆದ ದಾಳಿಯ ಕುರಿತು ಕಾರಣವನ್ನು ನೀಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕೊಹಿನೂರ್‌ ಎಂಬ ಮಹಿಳೆ ಮೊಬೈಲ್‌ ಕಳ್ಳತನದಲ್ಲಿ ಸಿಕ್ಕಿಬಿದ್ದಿದ್ದರಿಂದ ಆಕೆಯನ್ನು ಥಳಿಸಲಾಗಿದೆ ಹೊರತು ಹಿಜಾಬ್‌ ಧರಿಸದೇ ಇರುವ ಕಾರಣಕ್ಕೆ ಥಳಿಸಿದ್ದಲ್ಲ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ಪ್ರವಾಹದಲ್ಲಿ ಮಕ್ಕಳೊಂದಿಗೆ ಸಿಲುಕಿರುವ ವೃದ್ಧ ಮಹಿಳೆಯ ದೃಶ್ಯವು AI ರಚಿತವಾದದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

 

 

 

Leave a Reply

Your email address will not be published. Required fields are marked *