Fact Check: ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಅಶ್ವಿನಿ ವೈಷ್ಣವ್

ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನದಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. “ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳ ತ್ರಿವೇಣಿ” ಎಂದು ವಿಡಿಯೋ ಜೊತೆಗೆ ಶೀರ್ಷಿಕೆ ಬರೆದುಕೊಂಡಿದ್ದರು. ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲೊಂದನ್ನು ತೋರಿಸಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆ ಇಲಾಖೆಯನ್ನು ಅಭಿವೃದ್ದಿ ಮಾಡುತ್ತಿದೆ ಎಂಬ ಸಂದೇಶವನ್ನು ವಿಡಿಯೋ ಹೊಂದಿತ್ತು.

ಸಚಿವರು ವಿಡಿಯೋ ಪೋಸ್ಟ್ ಮಾಡಿದ್ದ ಸ್ವಲ್ಪ ಹೊತ್ತಿನಲ್ಲೇ ಅದನ್ನು ಡಿಲಿಟ್ ಮಾಡಿದ್ದರು. ಅಷ್ಟರದಲ್ಲಿ ಅದನ್ನು ಸಾವಿರಾರು ಜನರು ನೋಡಿ ಆಗಿತ್ತು. ನಾವು ಕೂಡ ವಿಡಿಯೋ ನೋಡಿದ್ದೆವು. ವಿಡಿಯೋದಲ್ಲಿ “ವಿಸ್ಟಾ ಡೋಮ್’ ಎಂದು ತೋರಿಸಲಾದ ರೈಲಿನ ಮೇಲೆ ‘ಪೆರು ರೈಲ್’ ಎಂದು ಬರೆದಿರುವುದು ನಮ್ಮ ಗಮನ ಸೆಳೆದಿತ್ತು. ಹಾಗಾಗಿ, ವಿಡಿಯೋದಲ್ಲಿರುವ ರೈಲಿನ ಬಗ್ಗೆ ನಾವು ಮಾಹಿತಿ ಹುಡುಕಿದ್ದೇವೆ.

ಫ್ಯಾಕ್ಟ್‌ಚೆಕ್ :

ಈ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ DrGariS ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಮಾರ್ಚ್ 5, 2020ರಂದು “PERU RAIL Train to Machu Picchu service on Vistadome class!” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ದೊರೆತಿದೆ.

ವಿಡಿಯೋ ನೋಡಿದಾಗ ಅದರಲ್ಲಿರುವ ಪೆರು ರೈಲು ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದ ವಿಡಿಯೋದಲ್ಲಿದ್ದ ರೈಲು ಒಂದೇ ಎಂದು ನಮಗೆ ಗೊತ್ತಾಗಿದೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಇರುವ ರೈಲಿನ ಮೇಲೆ ಬರೆದಿದಿರುವ 534 ಎಂಬ ಸಂಖ್ಯೆಯನ್ನೇ ಸಚಿವರು ಹಂಚಿಕೊಂಡಿದ್ದ ರೈಲಿನ ಮೇಲೂ ಬರೆಯಲಾಗಿತ್ತು. ಹಾಗಾಗಿ, ಸಚಿವರು ವಿಡಿಯೋ ಹಂಚಿಕೊಂಡಿರುವುದು ಭಾರತದ ರೈಲಿನದ್ದಲ್ಲ, ಪೆರು ರೈಲಿನದ್ದು ಎಂದು ನಮಗೆ ಖಚಿತವಾಗಿದೆ.

ಸಚಿವರು ಹಂಚಿಕೊಂಡಿದ್ದ ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲಿನ ಒಳ ಭಾಗವನ್ನೂ ತೋರಿಸಲಾಗಿತ್ತು. ಆ ದೃಶ್ಯಗಳ ಕುರಿತು ನಾವು ಪರಿಶೀಲನೆ ನಡೆಸಿದಾಗ, ಅದು PeruRail ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಟೋಬರ್ 8, 2019ರಂದು ಹಂಚಿಕೊಂಡಿರುವ ವಿಡಿಯೋದ ತುಣುಕು ಎಂದು ಗೊತ್ತಾಗಿದೆ.

 

ಸಚಿವ ವೈಷ್ಣವ್ ಅವರು ಹಂಚಿಕೊಂಡಿದ್ದ ವಿಡಿಯೋದಲ್ಲಿ ಪೆರು ರೈಲಿನ ದೃಶ್ಯಗಳಿರುವುದನ್ನು ಕಂಡು ಅನೇಕರು ವ್ಯಂಗ್ಯವಾಡಿದ್ದರು. ಸಚಿವರ ಕಾಲೆಳೆದಿದ್ದರು. ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ವಿಡಿಯೋ ಡಿಲಿಟ್ ಮಾಡಿದ ಸಚಿವರು, ಸೆಪ್ಟೆಂಬರ್ 28ರಂದೇ ಭಾರತೀಯ ವಿಸ್ಟಾಡೋಮ್ ರೈಲುಗಳ ತುಣುಕುಗಳಿರುವ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಇದನ್ನು ಓದಿ: ಪಾಕಿಸ್ತಾನ ಸೇನೆಯು ಪಶ್ತೂನ್ ಮತ್ತು ಬಲೂಚ್‌ ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ವಿಯೆಟ್ನಾಂನ ಜೈಲಿನ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *