Fact Check | ಡಿಸ್ಕೌಂಟ್ ಜಿಹಾದ್ ಎಂಬುದು ಸುಳ್ಳು, ಇದು ತೆಲಂಗಾಣದ ಹಳೆಯ ಬ್ಯಾನರ್

“ಹಿಂದೂ ಮಹಿಳೆಯರೊಂದಿಗೆ ಶಾಪಿಂಗ್‌ಗೆ ಬರುವ ಮುಸ್ಲಿಂ ಪುರುಷರಿಗೆ ಶೇಕಡಾ 10 ರಿಂದ 50 ರಷ್ಟು ರಿಯಾಯಿತಿ ನೀಡಲಾಗುವುದು. ಇದು ಕರ್ನಾಟಕದ ಮಾಲ್‌ವೊಂದರಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ನೀಡಲಾದ ವಿಶೇಷ ಆಫರ್‌ನ ಮಾಹಿತಿ. ಹೀಗೆ ಅವರು ಬಹಿರಂಗವಾಗಿಯೇ ಲವ್‌ ಜಿಹಾದ್‌ಗೆ ಕರ್ನಾಟಕದಲ್ಲಿ ಕರೆ ನೀಡಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಅವರಿಗೆ ನೀಡಿದ ಬೆಂಬಲದ ಪರಿಣಾಮ. ಇಂದು ಹಿಂದೂಗಳು ಅವರ ಹೆಣ್ಣು ಮಕ್ಕಳನ್ನು ಅವರೇ ರಕ್ಷಿಸಿಕೊಳ್ಳಬೇಕಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಫೋಟೋದಲ್ಲಿರುವ ಬ್ಯಾನರ್‌ನಲ್ಲಿ ಸೀರೆಯನ್ನು ಧರಿಸಿದ ಮಹಿಳೆ ಮತ್ತು ಅವಳ ಪಕ್ಕದಲ್ಲಿ ಇಸ್ಲಾಮಿಕ್ ಕ್ಯಾಪ್ ಧರಿಸಿದ ವ್ಯಕ್ತಿ ನಿಂತಿರುವುದು ಕಂಡು ಬಂದಿದೆ. ಈ ಫೋಟೋವನ್ನು ನೋಡಿದ ತಕ್ಷಣ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಬಳಕೆದಾರರು, ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಬರಹಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನು ನಡೆಸಿದ್ದಾರೆ. ಹೀಗಾಗಿ ವೈರಲ್‌ ಬ್ಯಾನರ್‌ನ ಫೋಟೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋವನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ ಹಲವು ವರದಿಗಳು ಕಂಡು ಬಂದವು. ಅವುಗಳ ಪ್ರಕಾರ ಈ ವೈರಲ್‌ ಫೋಟೋ ತೆಲಂಗಾಣದ್ದಾಗಿದೆ. ತೆಲಂಗಾಣ ವಿಧಾನಸಭೆ ಸದಸ್ಯ ರಾಜಾ ಸಿಂಗ್ ಅವರು ಸಿಎಂಆರ್ ಶಾಪಿಂಗ್ ಮಾಲ್‌ನ ಈ ವಿವಾದಾತ್ಮಕ ಬ್ಯಾನರ್ ಅನ್ನು ಖಂಡಿಸಿರುವ ಕುರಿತು ಮಾಹಿತಿ ಕೂಡ ಲಭ್ಯವಾಗಿದೆ.

ಗೂಗಲ್ ಲೆನ್ಸ್ ಬಳಸಿ ಚಿತ್ರವನ್ನು ಹುಡುಕಿದಾಗ ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಾದೇಶಿಕ ಭಾಷೆಯಾಗಿರುವ ಪೋಸ್ಟರ್‌ನಲ್ಲಿ ತೆಲುಗು ಭಾಷೆ ಬರೆದಿರುವುದು ಗೊತ್ತಾಗಿದೆ. ತೆಲುಗಿನ ಬ್ಯಾನರ್, “ರಂಜಾನ್ ರಿಯಾಯಿತಿ” ಮತ್ತು ಕೆಳಗೆ ತೆಲಂಗಾಣದ CMR ಶಾಪಿಂಗ್ ಮಾಲ್‌ನ ವಿವಿಧ ಶಾಖೆಗಳ ಹೆಸರುಗಳನ್ನು ಬರೆಯಲಾಗಿದೆ. ಮಾಲ್‌ಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿಯರು ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಬೋರ್ಡ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಈ ವಿಷಯದಲ್ಲಿ 31 ಮೇ 2019 ರಂದು CMR ತೆಲಂಗಾಣ ಶಾಪಿಂಗ್ ಮಾಲ್ ನೀಡಿದ ಕ್ಷಮೆಯಾಚನೆಯ ಟಿಪ್ಪಣಿಯನ್ನು ಸಹ ನಾವು ಕಂಡುಕೊಂಡಿದ್ದೇವೆ . ಸಿಎಂಆರ್ ಶಾಪಿಂಗ್ ಮಾಲ್ ಹೊರಡಿಸಿದ ಹೇಳಿಕೆಯಲ್ಲಿ, “ಇಡೀ ಸಿಎಂಆರ್ ತೆಲಂಗಾಣ ಸಮೂಹದ ಪರವಾಗಿ, ನಾವು ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ. ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಥವಾ ಯಾವುದೇ ತಾರತಮ್ಯವನ್ನು ಸೃಷ್ಟಿಸುವ ಉದ್ದೇಶ ನಮಗಿಲ್ಲ. ನಾವು ಎಲ್ಲಾ ಧರ್ಮಗಳನ್ನು ಬೆಂಬಲಿಸುತ್ತೇವೆ ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಪ್ರತಿ ಸಮುದಾಯವನ್ನು ಗೌರವಿಸುತ್ತೇವೆ. ಎಲ್ಲಾ ಹೋರ್ಡಿಂಗ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹದ್ದೇನೂ ಪುನರಾವರ್ತನೆಯಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ” ಎಂದು ಜನ ಸಾಮಾನ್ಯರಲ್ಲಿ ಕ್ಷಮಾಪಣೆಯನ್ನು ಕೂಡ ಕೇಳಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕರ್ನಾಟಕಕ್ಕೆ ಸಂಬಂಧಿಸಿಲ್ಲ. ಇದು ತೆಲಂಗಾಣದ ಫೋಟೋವಾಗಿದ್ದು,  ಇದರಲ್ಲಿ “ರಂಜಾನ್ ರಿಯಾಯಿತಿ” ಮತ್ತು ಕೆಳಗೆ ತೆಲಂಗಾಣದ CMR ಶಾಪಿಂಗ್ ಮಾಲ್‌ನ ವಿವಿಧ ಶಾಖೆಗಳ ಹೆಸರುಗಳನ್ನು ಬರೆಯಲಾಗಿದೆ. ಮಾಲ್‌ಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿಯರು ಬಂದರೆ ರಿಯಾಯಿತಿ ನೀಡಲಾಗುವುದು ಎಂದು ಬೋರ್ಡ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಹಾಗಾಗಿ ವೈರಲ್‌ ಪೋಸ್ಟ್‌ ಸುಳ್ಳು ನಿರೂಪಣೆಯೊಂದಿಗೆ ಕೂಡಿದೆ.


ಇದನ್ನೂ ಓದಿ : Fact Check | AI ನಿಂದ ರಚಿತವಾದ ಹೂವಿನ ಚಿತ್ರವನ್ನು ಟರ್ಕಿಯ ವಿಶಿಷ್ಟ ʼಯೋಗಿ ಹೂವುʼ ಎಂದು ಸುಳ್ಳು ಮಾಹಿತಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *