Fact Check : ಪಾಕಿಸ್ತಾನದಲ್ಲಿ ಝಾಕಿರ್ ನಾಯಕ್‌ರಿಗೆ ಉಡುಗೊರೆಯಾಗಿ ಇಮ್ರಾನ್ ಖಾನ್ ಫೋಟೋ ಫ್ರೇಮ್ ನೀಡಲಾಗಿದೆ ಎಂಬುದು ಸುಳ್ಳು

ವಿವಾದಿತ ಇಸ್ಲಾಮಿ ವಿದ್ವಾಂಸ ಡಾ. ಝಾಕಿರ್ ನಾಯ್ಕ್(Zakir Naik) ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವೈರಲ್ ಚಿತ್ರದಲ್ಲಿ, ಪಾಕಿಸ್ತಾನದ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಅವರೊಂದಿಗೆ ಇರುವುದನ್ನು ಕಾಣಬಹುದಾಗಿದ್ದು, ಮೌಲಾನಾ ಫಜ್ಲುರ್ ರೆಹಮಾನ್‌ರವರು ಡಾ ಝಾಕಿರ್ ನಾಯ್ಕ್ ಅವರಿಗೆ ಉಡುಗೊರೆಯಾಗಿ ಇಮ್ರಾನ್ ಖಾನ್‌ರವರ ಫೋಟೋ ಫ್ರೇಮ್ ನೀಡುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ಫೋಟೋವನ್ನು ನಿಜವೆಂದು ಪರಿಗಣಿಸಿ ಸಾಮಟಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಫೇಸ್‌ಬುಕ್ ಬಳಕೆದಾರ ‘ಕಾಶಿಫ್ ಚೌಧರಿ’ ಎಂಬುವವರು , ‘ಮೌಲಾನಾ ತೇರೆ ಜಾನ್ ನಿಸಾರ್ ನಾಚಿಕೆಯಿಲ್ಲದ ನಾಚಿಗೇಡಿ’ ಎಂದು ಬರೆದಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಕಂಡು ಬಂದಿದೆ. ಡಾ.ಜಾಕಿರ್ ನಾಯ್ಕ್ ಅವರಿಗೆ ಮೌಲಾನಾ ಫಜ್ಲುರ್ ರೆಹಮಾನ್ ಅವರು ಇಮ್ರಾನ್ ಖಾನ್ ಅವರ ಫೋಟೋ ಫ್ರೇಮ್ ನೀಡಿಲ್ಲ ಹಾಗಾಗಿ ಈಗ ವೈರಲ್ ಆಗಿರುವ ಆರೋಪ ಹುಸಿಯಾಗಿದೆ.

ಗೂಗಲ್ ಲೆನ್ಸ್ ಮೂಲಕ ವೈರಲ್ ಚಿತ್ರವನ್ನು ಹುಡುಕಿದಾಗ, ಈ ಫೋಟೋವನ್ನು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿರುವುದು ಕಂಡುಬಂದಿದೆ. ಇಲ್ಲಿ ಇಮ್ರಾನ್ ಖಾನ್ ಅವರ ಚಿತ್ರವಿರುವ ಫ್ರೇಮ್ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಲೆನ್ಸ್ ಮೂಲಕ ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಚಿತ್ರವನ್ನು ಹುಡುಕಿದಾಗ ಇದು, 2024ರ ಅಕ್ಟೋಬರ್ 1ರಂದು ಜಾಕಿರ್ ನಾಯ್ಕ್ ಅವರ ಅಧೀಕೃತ ಫೇಸ್‌ಬುಕ್ ಪುಟದಲ್ಲಿ ಇತರ ಚಿತ್ರಗಳೊಂದಿಗೆ ಈ ಚಿತ್ರವನ್ನು ಅಪ್‌ಲೋಡ್ ಮಾಡಿರುವುದು ನಮಗೆ ಕಂಡುಬಂದಿದೆ. ಇಲ್ಲಿಯೂ ಸಹ, ಈ ಚಿತ್ರದಲ್ಲಿ ಮೌಲಾನಾ ಫಜ್ಲುರ್ ರೆಹಮಾನ್ ಅವರು ಇಮ್ರಾನ್ ಖಾನ್‌ಗೆ ಫೋಟೋ ಫ್ರೇಮ್ ನೀಡುತ್ತಿರುವುದು ಕಂಡುಬಂದಿಲ್ಲ.

ವೈರಲ್ ಮತ್ತು ನೈಜ ಚಿತ್ರಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.

 

ಅಕ್ಟೋಬರ್ 1 ರಂದು ಪಾಕಿಸ್ತಾನದ ಸುದ್ದಿ ವೆಬ್‌ಸೈಟ್ ಆಜ್ ಟಿವಿಯ ಸುದ್ದಿ ಪ್ರಕಾರ, “ಡಾ. “ಝಾಕಿರ್ ನಾಯಕ್‌ರವರು ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.” ಈ ಸುದ್ದಿಯಲ್ಲಿ ಎಲ್ಲಿಯೂ ಇಮ್ರಾನ್ ಖಾನ್‌ಗೆ ಫೋಟೋ ಫ್ರೇಮ್ ಉಡುಗೊರೆಯಾಗಿ ನೀಡುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ವೈರಲ್ ಫೋಟೋ ಬಗ್ಗೆ ಖಚಿತಪಡಿಸಲು, ಪಾಕಿಸ್ತಾನಿ ಪತ್ರಕರ್ತ ಆದಿಲ್ ಅಲಿ ಅವರನ್ನು ಸಂಪರ್ಕಿಸಿ ವೈರಲ್ ಪೋಸ್ಟ್ ಅನ್ನು ಅವರೊಂದಿಗೆ ಹಂಚಿಕೊಂಡಿದ್ದು, ಅವರು ಈ ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಇದೀಗ ನಕಲಿ ಪೋಸ್ಟ್ ಶೇರ್ ಮಾಡಿದ ಫೇಸ್ ಬುಕ್ ಬಳಕೆದಾರರ ಸೋಶಿಯಲ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಬಳಕೆದಾರರು ಪಾಕಿಸ್ತಾನಿ ಮೂಲದವರು ಎಂದು ನಾವು ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಕಂಡುಕೊಂಡಿದೆ. ವಿವಾದಿತ ಇಸ್ಲಾಮಿಕ್ ಬೋಧಕ ಡಾ.ಜಾಕಿರ್ ನಾಯ್ಕ್ ಅವರಿಗೆ ಮೌಲಾನಾ ಫಜ್ಲುರ್ ರೆಹಮಾನ್ ಅವರು ಇಮ್ರಾನ್ ಖಾನ್ ಅವರ ಫೋಟೋ ಫ್ರೇಮ್ ನೀಡಿಲ್ಲ. ವೈರಲ್ ಆಗಿರುವ ಆರೋಪ ಹುಸಿಯಾಗಿದೆ.


ಇದನ್ನು ಓದಿದ್ದೀರಾ? Fact Check : ಫ್ಲಿಪ್‌ಕಾರ್ಟ್‌ನಲ್ಲಿ 99% ರಿಯಾಯತಿ ಎಂಬ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಹಾವಳಿ, ಗ್ರಾಹಕರು ವಂಚನೆಗೊಳಗಾಗದಿರಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *