Fact Check | ಗೇಮಿಂಗ್ ವಿಡಿಯೋವನ್ನು ತೇಜಸ್ ವಿಮಾನದ ದೃಶ್ಯ ಎಂದು ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಭಾರತದ ತೇಜಸ್‌ ಯುದ್ಧ ವಿಮಾನ, ಭಾರತೀಯ ಸೇನೆ ಈ ಯುದ್ಧ ವಿಮಾನಗಳಿಗೆ ಹೆಚ್ಚಿನ ಆದ್ಯತೆಯನ್ನು ಏಕೆ ನೀಡುತ್ತದೆ ಎಂಬುದು ನಿಮಗೆ ಈ ವಿಡಿಯೋ ನೋಡಿದ ಮೇಲೆ ಅರ್ಥವಾಗುತ್ತದೆ. ಹೌದು..! ಈ ತೇಜಸ್‌ ವಿಮಾನ ಎಷ್ಟೇ ತಿರುವುಗಳು ಸಿಕ್ಕರು ಅವುಗಳನ್ನು ಸಾಧಾರಣ ವಾಹನಗಳಂತೆ ದಾಡಿ ತದ ನಂತರ ಟೇಕ್‌ಆಫ್‌ ಆಗುತ್ತದೆ. ಇದು ತೇಜಸ್‌ ಯುದ್ಧ ವಿಮಾನದ ಶಕ್ತಿ”  ಎಂದು  ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ವಿಡಿಯೋವನ್ನು ಗಮನಿಸಿದ ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ನಿಜವೆಂದು ಭಾವಿಸಿದ್ದಾರೆ. ಈ ಕಾರಣದಿಂದ ತೇಜಸ್‌ ಯುದ್ಧ ವಿಮಾನದ ಬಗ್ಗೆ ಹೆಮ್ಮೆಯಿಂದ ವಿವಿಧ ಸಾಲುಗಳನ್ನು ಬರೆದು ವೈರಲ್‌ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಜನ ಭಾರತೀಯ ನಾಗರಿಕರು ಇದನ್ನು ನಿಜವಾದ ವಿಡಿಯೋ ಎಂದು ಭಾವಿಸಿದ್ದಾರೆ. ಹೀಗೆ ಸಾಕಷ್ಟು ವೈರಲ್‌ ಆಗುತ್ತಿರುವ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ತೇಜಸ್‌ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ಕೆಲವೊಂದು ಮಾಹಿತಿಗಳು ನಮಗೆ ಲಭ್ಯವಾಗಿದೆ. ಅದರ ಪ್ರಕಾರ ತೇಜಸ್ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸುತ್ತದೆ ಮತ್ತು ಇದನ್ನು LCA ತೇಜಸ್ (ಲಘು ಯುದ್ಧ ವಿಮಾನ) ಎಂದೂ ಕರೆಯಲಾಗುತ್ತದೆ. HAL ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ತೇಜಸ್ ದೂರದ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (VTOL) ಸಾಮರ್ಥ್ಯವನ್ನು ಹೊಂದಿಲ್ಲ. ಇದರ ವಿನ್ಯಾಸವು ಸಾಂಪ್ರದಾಯಿಕ ಫೈಟರ್ ಜೆಟ್ ತತ್ವಗಳಿಗೆ ಬದ್ಧವಾಗಿದೆ, ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಎರಡಕ್ಕೂ ರನ್‌ವೇ ಅಗತ್ಯವಿರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ವೈರಲ್‌ ವಿಡಿಯೋವನ್ನು ನಾವು ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಅದರ ಕೆಲವೊಂದು ಕೀ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ವೈರಲ್‌ ವಿಡಿಯೋದ  ವಿಸ್ತೃತ ಆವೃತ್ತಿ ಕಂಡು ಬಂದಿದೆ. ಇದರ ಪ್ರಕಾರ ಇದು ಅಧಿಕೃತ ದೃಶ್ಯವಲ್ಲ ಅನಿಮೇಟೆಡ್ ಸೃಷ್ಟಿ ಎಂದು ತಿಳಿದು ಬಂದಿದೆ. 26 ಆಗಸ್ಟ್ 2024 ರಂದು “BAUS” ಎಂಬ Facebook ಚಾನಲ್‌ನಲ್ಲಿ “AV-8B ಹ್ಯಾರಿಯರ್ ಫೈಟರ್ ಜೆಟ್‌ನ ಸೂಪರ್ ಅಪರೂಪದ ವರ್ಟಿಕಲ್ ಟೇಕ್‌ಆಫ್” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಇದಕ್ಕೂ, ಮುನ್ನ ಅಂದರೆ 21 ಆಗಸ್ಟ್ 2024 ರಂದು ‘BAUS’ YouTube ಚಾನಲ್‌ನಲ್ಲಿ ವಿಸ್ತೃತ ಆವೃತ್ತಿಯ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೋಗಳ ಹಕ್ಕು ನಿರಾಕರಣೆಗಳನ್ನು ಗಮನಿಸಿದಾಗ ಅದರಲ್ಲಿ “ಈ ವಿಡಿಯೋ ಗೇಮಿಂಗ್‌ಗಾಗಿ ಸೃಷ್ಟಿಸಲಾಗಿದೆ. ವಿಡಿಯೋವನ್ನು ಆನಂದಿಸಿ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊ ಅನಿಮೇಟೆಡ್‌ ವಿಡಿಯೋ ಎಂಬುದು ಖಚಿತವಾಗಿದೆ. ಈ ಅನಿಮೇಟೆಡ್‌ ವಿಡಿಯೋಗೂ ಭಾರತದ ಯುದ್ಧ ವಿಮಾನ ತೇಜಸ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಇಂತಹ ವಿಡಿಯೋಗಳು ನಿಮಗೆ ಕಂಡು ಬಂದರೆ ಅವುಗಳನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ದೆಹಲಿಯಲ್ಲಿ ಚಾಕು ಹಿಡಿದು ಯುವಕರು ಮಹಿಳೆಗೆ ಬೆದರಿಕೆ ಹಾಕುವ ವಿಡಿಯೋವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *